ಚಿಕ್ಕಮಗಳೂರು :
ಚಾರ್ಮಾಡಿ ಘಾಟಿಯಲ್ಲಿ ಬೆಂಕಿ ತಗುಲಿ ಸಂಪೂರ್ಣವಾಗಿ ಹೊತ್ತಿ ಉರಿದ ಕಾರು :
ಚಲಿಸುತ್ತಿದ್ದ ಕಾರ್ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಚಾರ್ಮಾಡಿ ಘಾಟ್ ನಲ್ಲಿ ಸಂಭವಿಸಿದೆ. ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾದ ಚಾರ್ಮಾಡಿ ಘಾಟ್ ನ ಅಣ್ಣಪ್ಪ ದೇಗುಲದ ಸಮೀಪದಲ್ಲಿ, ಚಲಿಸುತ್ತಿದ್ದ ಕಾರಿನ ಡೀಸಲ್ ಟ್ಯಾಂಕ್ ಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಮಂಗಳೂರಿನ ಜೋಕಟ್ಟೆಯಿಂದ ಬೆಂಗಳೂರಿನ ಕಡೆಗೆ ಕಾರಿನಲ್ಲಿ ನಾಲ್ವರು ಪ್ರಯಾಣಿಕರು ಸಂಚಾರ ನಡೆಸುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಇದ್ದಕ್ಕಿದ್ದಂತೆ ಕಾರಿನ ಡೀಸೆಲ್ ಟ್ಯಾಂಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು ಅದೃಷ್ಟವಶಾತ್ ಎನ್ನುವಂತೆ ಕಾರಿನಲ್ಲಿದ್ದ ನಾಲ್ವರು ಕೂಡ ಪ್ರಾಣಪಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬಣಕಲ್ ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಾಫಿ ತೋಟದಲ್ಲಿ ಪ್ರತ್ಯಕ್ಷವಾದ ಹುಲಿ ; ಸ್ಥಳೀಯರಲ್ಲಿ ಮೂಡಿದ ಆತಂಕ
ಮುತ್ತಿನಪುರ ಗ್ರಾಮದಲ್ಲಿ ಸ್ಥಳೀಯರಿಗೆ ಹುಲಿ ಪ್ರತ್ಯಕ್ಷವಾಗಿದ್ದು ಜನ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಚಿಕ್ಕಮಗಳೂರಿನ ತೊಗರಿ ಹಂಕಲ್ ಗ್ರಾಪಂ ವ್ಯಾಪ್ತಿಯ ಮುತ್ತಿನಪುರ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಅತೀವವಾದ ಆತಂಕವನ್ನು ವ್ಯಕ್ತಪಡಿಸಿದ್ದಾರೆ.ಈ ಭಾಗದ ಸುತ್ತಮುತ್ತಲಿನ ಗ್ರಾಮದಲ್ಲಿ ಹೆಚ್ಚು ಕೂಲಿ ಕಾರ್ಮಿಕರಿದ್ದು, ಮಲೆನಾಡಿಗರು ಜೀವನ ನಿರ್ವಹಣೆಗಾಗಿ ಕೃಷಿಯನ್ನು ಆಧರಿಸಿರುವ ಕಾರಣ ಗದ್ದೆ, ತೋಟಗಳಲ್ಲಿ ಕೆಲಸ ಮಾಡಲೇಬೇಕಿದೆ ಆದರೆ ವ್ಯಾಘ್ರ ಪ್ರತ್ಯಕ್ಷವಾಗಿದ್ದು ಕಾರ್ಮಿಕರಲ್ಲಿ ಹಾಗೂ ಕೃಷಿಕರಲ್ಲಿ ಭೀತಿ ಉಂಟುಮಾಡಿದೆ. ಚಂದ್ರಶೇಖರಯ್ಯ ಎಂಬುವವರ ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ವ್ಯಾಘ್ರನ ದಾಳಿಗೆ ಮುತ್ತಿನಪುರ ಗ್ರಾಮದ ಚಂದ್ರಶೇಖರಯ್ಯ ಎಂಬುವವರಿಗೆ ಸೇರಿದ ಎರಡು ಹಸು ಮತ್ತು ಮೋಹನ್ ಎಂಬುವವರ ಒಂದು ಹಸು ಬಲಿಯಾಗಿದೆ ಎಂದು ಗ್ರಾಮಸ್ಥರಾದ ರವಿ ತಿಳಿಸಿದ್ದಾರೆ. ಬೆಳಗ್ಗೆ ಮೇಯಲು ಹೋದ ಹಸುಗಳು ಮನೆಗೆ ಬಾರದಿರುವುದರಿಂದ ಸಂಜೆ ಹುಡುಕಲು ಹೋದಾಗ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಗ್ರಾಮಸ್ಥರ ಕೂಗಾಟದಿಂದ ಹುಲಿ ಕಾಲ್ಕಿತ್ತಿದೆ ಎನ್ನಲಾಗಿದ್ದು ಹುಲಿ ದಾಳಿಯ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಕುರಿತಾಗಿ ತಿಳಿಸಿದ್ದರೂ ಕೂಡ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ಹುಲಿ ದಾಳಿಯಿಂದ ಈಗಾಗಲೇ ಹಸುಗಳನ್ನು ಕಳೆದುಕೊಂಡಿರುವ ಮಾಲೀಕರಿಗೆ ಪರಿಹಾರ ಕೊಡಲು ಅರಣ್ಯ ಇಲಾಖೆ ಮುಂದಾಗಬೇಕು ಎಂಬ ಮನವಿ ಮಾಡಿದ್ದಾರೆ.
N.R ಪುರ : ಬ್ಲೇಡಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ :
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂಸಲವಾನಿ ಪೌಲೋಸ್ ಬ್ಲೇಡಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ. ಮೃತ ಫೌಲೋಸ್ ಹಾಗೂ ಮಥಾಯ್ ಇಬ್ಬರು ಸಹೋದರರು. ಕಳೆದ ನಾಲ್ಕು ವರ್ಷಗಳ ಹಿಂದೆ ಮಥಾಯ್ ಮೃತಪಟ್ಟಿದ್ದರು. ಅವರ ಸಾವಿನಿಂದಾಗಿ ಅತೀವ ದುಃಖಕ್ಕೀಡಾಗಿ ಖಿನ್ನತೆಗೆ ಒಳಗಾಗಿದ್ದ ಪೌಲೋಸ್, ಶುಗರ್, ಟಿ.ಬಿ ರೋಗಕ್ಕೂ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಭಾನುವಾರ ಬೆಳಗ್ಗಿನ ಜಾವ ಶೇವಿಂಗ್ ಮಾಡಿಕೊಳ್ಳುವ ಸಲುವಾಗಿ ಬ್ಲೇಡ್ ನ್ನು ತೆಗೆದುಕೊಂಡ ಪೌಲೋಸ್ ತನ್ನ ಕೈಯನ್ನು ಬ್ಲೇಡಿನಿಂದ ಕೊಯ್ದುಕೊಂಡಿದ್ದಾನೆ. ಈ ಸಂದರ್ಭದಲ್ಲಿ ಆತನ ಕೈಯಿಂದ ಅತಿಯಾದ ರಕ್ತಸ್ರಾವವಾಗಿದ್ದು ಮನೆಯವರು ತಕ್ಷಣವೇ ಆಂಬುಲೆನ್ಸ್ ನ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸಿದರು. ಆದರೆ ಅತಿಯಾದ ರಕ್ತಸ್ರಾವ ಉಂಟಾದ ಪರಿಣಾಮ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಶಿವಮೊಗ್ಗದ ಖಾಸಗೀ ಆಸ್ಪತ್ರೆಗೆ ಆತನನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಫೌಲೋಸ್ ದೇಹ ಸ್ಪಂದಿಸಿದ ಕಾರಣ ಸೋಮವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆತ್ಮಹತ್ಯೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಫೌಲೋಸ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ :
ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ಹಾನಿಗೀಡಾದ ಪ್ರದೇಶಗಳಿಗೆ ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ತಾಲೂಕಿನ ಜಯಪುರ ಸಮೀಪದ ಅಲಿಗೇಶ್ವರ ಗ್ರಾಮದ ಮನೆಗಳ ಮೇಲೆ ಭಾರೀ ಮಳೆಯಿಂದಾಗಿ ಉಂಟಾಗಿರುವ ಗುಡ್ಡ ಕುಸಿತ ಹಾಗೂ ಮನೆ ಹಾನಿಯ ಕುರಿತು ಪರಿಶೀಲನೆ ನಡೆಸಿದರು. ಶೃಂಗೇರಿ ವಿಧಾನಸಭಾ ಕ್ಷೇತ್ರದ ಮೆಣಸೆ ಸಮೀಪದ ಕಿಕ್ರೆ ಗ್ರಾಮ ಸಂಪರ್ಕಿಸುವ ಶಿಥಿಲಾವಸ್ಥೆ ತಲುಪಿರುವ ಸೇತುವೆ ಪರಿಶೀಲಿಸಿದರು. ಅಂತೆಯೇ ಮೂಡಿಗೆರೆ ವ್ಯಾಪ್ತಿಯ ಆಲ್ದೂರು ಸಮೀಪದ ಅರೆನೂರು ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಹಾನಿಯಾದ ಅಡಿಕೆ ತೋಟ ಸೇರಿದಂತೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾನಿಯಾದ ಅನೇಕ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ತುರ್ತಾಗಿ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸೂಚಿಸಿದರು. ಮಳೆಯ ನಡುವೆಯೂ ಜನರ ನೋವನ್ನು ಹಾಗೂ ಸಂಕಷ್ಟಗಳನ್ನು ಆಲಿಸಿದ ಸಚಿವೆ ಶೋಭಾ ಕರಂದ್ಲಾಜೆ ಅತೀ ಶೀಘ್ರವಾಗಿ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ಸಂತ್ರಸ್ತರಿಗೆ ನೆರವಾಗುವ ಭರವಸೆಯನ್ನು ನೀಡಿದರು. ಜನರ ಕಷ್ಟದ ಸಮಯದಲ್ಲಿ ತುರ್ತಾಗಿ ಸಹಾಯಕ್ಕೆ ಧಾವಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಕೆ. ಎನ್ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಹಾಜರಿದ್ದರು.
ಕಾರುಗಳ ಮೇಲೆ ಕಾಂಪೌಂಡ್ ಬಿದ್ದು ಕಾರು ಜಖಂ :
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮಳೆಯಿಂದಾಗಿ ಕಾರುಗಳ ಮೇಲೆ ಕಾಂಪೌಂಡ್ ಬಿದ್ದು ಎರಡು ಕಾರುಗಳು ಜಖಂಗೊಂಡಿದೆ. ಚಿಕ್ಕಮಗಳೂರಿನ ಕೆ ಎಸ್ ಆರ್ ಟಿ ಸಿ ನಿಲ್ದಾಣದ ಕಾಂಪೌಂಡ್ ಬಿದ್ದು ಈ ಅವಘಡ ಸಂಭವಿಸಿದ್ದು ನಿನ್ನೆರಾತ್ರಿವೇಳೆ ಕಾಂಪೌಂಡ್ ಪಕ್ಕ ನಿಲ್ಲಿಸಲಾಗಿದ್ದ ಎರಡು ಕಾರುಗಳು ಜಖಂಗೊಂಡಿದೆ. ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮಹಿಳೆ ನಾಪತ್ತೆ ; ಉಕ್ಕಿ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದಿರುವ ಶಂಕೆ
ಶೃಂಗೇರಿ : ಮಹಿಳೆಯೋರ್ವರು ಮನೆಯಿಂದ ನಾಪತ್ತೆಯಾಗಿ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಶೃಂಗೇರಿ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೂತುಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವೈಕುಂಠಪುರದ ಮಹಿಳೆ ಗುಲಾಬಿ (50) ಎಂಬುವವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದ್ದು ಪೊಲೀಸರು ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಘಟನಾ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮಹಿಳೆಯು ಮನೆಯಿಂದ ನಾಪತ್ತೆಯಾಗಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವೈಕುಂಠಪುರದ ಸುಂಕುರ್ಡಿ ಸಮೀಪದ ಹಳ್ಳದ ದಡದಲ್ಲಿ ಸೀರೆಯೊಂದು ದೊರೆತಿದ್ದು ಈ ಕುರಿತಾಗಿ ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಸಹ ಭೇಟಿ ನೀಡಿದ್ದು ಈ ಸಂಬಂಧ ಕಾರ್ಯಾಚರಣೆ ನಡೆಸಿದ್ದಾರೆ. ಕುರಿತಾದ ಹೆಚ್ಚಿನ ಮಾಹಿತಿಗಳು ತನಿಖೆ ಹಾಗೂ ಕಾರ್ಯಾಚರಣೆಯ ಬಳಿಕವಷ್ಟೇ ನಿಖರವಾಗಿ ದೊರೆಯಲಿದೆ.
ಶಿವಮೊಗ್ಗ
ಹಿಂದೂಪರ ಸಂಘಟನೆಗಳ ಇಬ್ಬರು ಕಾರ್ಯಕರ್ತರ ಮೇಲೆ ಅನ್ಯಕೋಮಿನ ಯುವಕರಿಂದ ಮಾರಣಾಂತಿಕ ಹಲ್ಲೆ
ಬಜರಂಗದಳದ ಇಬ್ಬರು ಸಕ್ರಿಯ ಕಾರ್ಯಕರ್ತರಾದ ಕಾಂತರಾಜು ಹಾಗೂ ಹರ್ಷ ಎಂಬ ಇಬ್ಬರ ಮೇಲೆ ನಿನ್ನೆ ರಾತ್ರಿಯವೇಳೆ ಮಾರಣಾಂತಿಕ ಹಲ್ಲೆ ನಡೆದಿದೆ. ಕಳೆದ ಕೆಲ ತಿಂಗಳಹಿಂದೆ ಬಜರಂಗದಳದ ಸಕ್ರಿಯ ಕಾರ್ಯಕರ್ತ ಹರ್ಷನನ್ನು ನಡು ರಸ್ತೆಯಲ್ಲಿ ಹತ್ಯೆ ಮಾಡಲಾಗಿತ್ತು. ಈ ಬಳಿಕದಲ್ಲಿ ಸಂಪೂರ್ಣ ಶಿವಮೊಗ್ಗ ಉದ್ವಿಗ್ನಗೊಂಡಿತ್ತು. ಪ್ರಸ್ತುತ ಹರ್ಷ ಎಂಬ ಬಜರಂಗದಳದ ಕಾರ್ಯಕರ್ತನ ಮೇಲೆ ಶಿವಮೊಗ್ಗದ ಮಥುರಾ ಪ್ಯಾರಡೈಸ್ ಬಳಿ ಮುಸ್ಲಿಂ ಯುವಕರಿಂದ ಹಲ್ಲೆ ನಡೆದಿದೆ. ಯುವತಿಯನ್ನು ಚುಡಾಯಿಸಿದವರನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಆತನ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆಗೀಡಾದ ಯುವಕ ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಕಾಂತರಾಜು ಎಂಬ ಮೃತ ಹರ್ಷನ ಸ್ನೇಹಿತ ಹಾಗೂ ಬಜರಂಗದಳದ ಸಕ್ರಿಯ ಕಾರ್ಯಕರ್ತನಾದ ಕಾಂತರಾಜು ಮೇಲೆ ಮುಸ್ಲಿಂ ಯುವಕರ ಗುಂಪಿನಿಂದ ಹಲ್ಲೆ ನಡೆದಿದೆ. ಕೊಲೆ ಮಾಡಲೆಂದು ಮಾರಕಾಸ್ತ್ರಗಳನ್ನು ಹೊಂದಿ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.
ಟಾರ್ಪಲ್ ಮೂಲಕ ಗ್ರಾಮಸ್ಥರೇ ನಿರ್ಮಿಸಿದ ಬಸ್ ನಿಲ್ದಾಣ :
ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು ತಾವೇ ಸ್ವತಃ ಟಾರ್ಪಲ್ ಹೊದಿಕೆಯ ಬಸ್ ನಿಲ್ದಾಣ ನಿರ್ಮಿಸಿಕೊಂಡಿರುವ ಘಟನೆ ವರದಿಯಾಗಿದೆ. ಮಳೆಗಾಲದಲ್ಲಿ ಮಕ್ಕಳು, ಹಿರಿಯರು ಮಳೆಯಲ್ಲಿ ನಿಂತು ಬಸ್ಸಿಗೆ ಕಾಯುವುದನ್ನು ತಪ್ಪಿಸಲು ಸ್ವತಃ ಗ್ರಾಮಸ್ಥರೇ ಈ ಕೆಲಸವನ್ನು ಮಾಡಿದ್ದಾರೆ. ತೀರ್ಥಹಳ್ಳಿ ತಾಲೂಕು ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ ಗ್ರಾಮದ ಜನರು ಟಾರ್ಪಲ್ ಹೊದಿಕೆಯ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಮುಂಗಾರು ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿದೆ. ಹಲವು ಕಡೆ ವರುಣನ ಅಬ್ಬರಕ್ಕೆ ರಸ್ತೆಗಳು, ಮನೆಗಳು ಹಾಗೂ ಗುಡ್ಡಗಳು ಕುಸಿಯುತ್ತಿವೆ. ಈ ಮಧ್ಯೆ ವಯಸ್ಸಾದವರು ಹಾಗೂ ಮಕ್ಕಳು ಬಸ್ ಗೆ ಕಾಯಲು ಸೂಕ್ತವಾದ ಸ್ಥಳ ಇಲ್ಲದ ಕಾರಣ ಗ್ರಾಮಸ್ಥರೇ ಈ ಕೆಲಸವನ್ನು ಮಾಡಿದ್ದಾರೆ.
ಕೊಡಗು :
ಕೊಡಗಿನ ಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿಗಳ ಭೇಟಿ, ಪರಿಶೀಲನೆ ; ಪರಿಹಾರ ವಿತರಣೆ
ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿರುವ ಕೊಡಗು ಜಿಲ್ಲೆಗೆ ಇಂದು ಸಂಪುಟದ ಸಹೋದ್ಯೋಗಿಗಳು, ಸಂಸದರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರು ಮಳೆ ಗೋಡೆ ಕುಸಿತಗೊಂಡು ನೆಲೆ ಕಳೆದುಕೊಂಡಿರುವ ಜನರನ್ನು ಭೇಟಿ ಮಾಡಿ ಅವರ ಕಷ್ಟಗಳನ್ನು ಆಲಿಸಿದರು, ಸರ್ಕಾರದ ವತಿಯಿಂದ ಪರಿಹಾರದ ಚೆಕ್ ವಿತರಿಸಿದರು, ಮಳೆಯಿಂದಾಗಿ ನಿರಾಶ್ರಿತರಾಗಿರುವವರಿಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಾಣ ಮತ್ತು ಆಸ್ತಿ ಹಾನಿಯಾಗಿರುವ ಪ್ರದೇಶಗಳಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿರುವ ಕೆಲವು ಪ್ರದೇಶಗಳು, ಕೆಲವು ಕಡೆ ಭೂಕುಸಿತವಾಗಿದ್ದು, ಕೊಡಗಿನಲ್ಲಿ ಭೂಕಂಪ, ಕಡಲುಕೊರೆತವಾಗಿದ್ದು, ಉತ್ತರ ಕರ್ನಾಟಕದಲ್ಲಿ ನದಿ ಪಕ್ಕದಲ್ಲಿರುವ ಮನೆಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಜಲಾಶಯಗಳಿಂದ ನೀರು ಹೊರಬಿಟ್ಟ ಸಂದರ್ಭದಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆಯಾಗಿದೆ. ಪ್ರಥಮ ಹಂತದ ಸಮೀಕ್ಷೆಯಾಗಿದೆ. ಈ ಬಗ್ಗೆ ವರದಿ ಬಂದ ನಂತರ ನಿಖರ ಮಾಹಿತಿ ನೀಡಲಾಗುವುದು ಎಂದರು. ಮಡಿಕೇರಿಯ ಮಲ್ಲಿಕಾರ್ಜುನ ನಗರ ಬಡಾವಣೆಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಮನೆಯ ಮಾಲೀಕರಾದ ಗೋಪಾಲ ಅವರ ಕುಟುಂಬಕ್ಕೆ 1 ಲಕ್ಷದ 5 ಸಾವಿರ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್, ಶಿಕ್ಷಣ ಸಚಿವ ಬಿಸಿ ನಾಗೇಶ್ ಮತ್ತು ಇತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜಿಲ್ಲೆಗೆ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮುಖ್ಯಮಂತ್ರಿಗಳೊಂದಿಗೆ, ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.



0 Comments