ಚಿಕ್ಕಮಗಳೂರು :
ಹಿಂದೂ ಸೇವಾ ಪ್ರತಿಷ್ಠಾನದ ವತಿಯಿಂದ ಉಚಿತ ಹೊಲಿಗೆ ತರಬೇತಿ ಕಾರ್ಯಗಾರ :
ಹಿಂದೂ ಸೇವಾ ಪ್ರತಿಷ್ಠಾನ ಶೃಂಗೇರಿ ಇವರ ವತಿಯಿಂದ ಶೃಂಗೇರಿಯ ಬೇಗಾರ್ ನಲ್ಲಿ ಉಚಿತ ಹೊಲಿಗೆ ತರಬೇತಿ ಕಾರ್ಯಗಾರ ಉದ್ಘಾಟನೆಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರ್ ಕೈಮರ ವ್ಯಾಪ್ತಿಯ ಗ್ರಾಮಸ್ಥರಿಗೆ ಉದ್ಯೋಗ ದೃಷ್ಟಿಯಿಂದ ಅನುಕೂಲಕರವಾಗುವಂತೆ, ಹಾಗೂ ಸ್ವಾವಲಂಬನೆಯುತ ಜೀವನ ನಡೆಸುವ ನಿಟ್ಟಿನಲ್ಲಿ ಶ್ರೀ ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿ ಪ್ರೇರಿತ ಹಿಂದೂ ಸೇವಾ ಪ್ರತಿಷ್ಠಾನ ಕರ್ನಾಟಕ ಸಂಚಾಲಿತ ಇವರ ವತಿಯಿಂದ ಉಚಿತ ಹೊಲಿಗೆ ತರಬೇತಿ ಕಾರ್ಯಗಾರವು ಉದ್ಘಾಟನೆಗೊಂಡಿತು. ಈ ಕಾರ್ಯಗಾರವನ್ನು ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ನಿರ್ದೇಶಕರಾದ ಶ್ರೀ ಸುರೇಶ್ ಜಿ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ರಾಜ್ಯ ಸಂಯೋಜಕರಾದ ನಟರಾಜ ರಾನಡೆ, ತಾಲೂಕು ಸಂಯೋಜಕರಾದ ನೂತನ್ ಸೂರ್ಯ, ಕಿರಣ್ ಹುಕ್ಳಿ, ಉಮೇಶ್ ಮೀಗಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುವುದರ ಮೂಲಕ ಜನ್ಮದಿನ ಆಚರಿಸಿಕೊಂಡ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ :
ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಹಾಗೂ ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಮೂರು ತಾಲೂಕುಗಳಲ್ಲಿ ಆಯೋಜನೆ ಮಾಡಲಾಗಿದ್ದ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾರ್ವಜನಿಕರು ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ವೈದ್ಯರಲ್ಲಿ ತಿಳಿಸಿ ಸಮಸ್ಯೆಗಳಿಗೆ ಪೂರಕವಾದ ಪರಿಹಾರವನ್ನು ಕಂಡುಕೊಂಡರು. ಈ ಸಂದರ್ಭದಲ್ಲಿ ಸುಧಾಕರ್ ಶೆಟ್ಟಿ ಅವರ ಪತ್ನಿ ಸುಖಲತಾ ಶೆಟ್ಟಿ, ಜೆಡಿಎಸ್ ನ ಮುಖಂಡರು, ಪದಾಧಿಕಾರಿಗಳು ಹಾಗೂ ಅಮ್ಮ ಫೌಂಡೇಶನ್ ನ ಸದಸ್ಯರು ಉಪಸ್ಥಿತರಿದ್ದರು.
ಎನ್.ಆರ್.ಪುರ : ದ್ವಿಚಕ್ರ ವಾಹನ ಸವಾರನಿಗೆ ಕಾರಿನಿಂದ ಗುದ್ದಿ ದರೋಡೆ ಮಾಡಿದ್ದ ಖತರ್ನಾಕ್ ದಂಪತಿಗಳು ಅಂದರ್ :
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಿ.ಎಸ್ ಕೈಮರದಲ್ಲಿ ಹಾರ್ಡ್ ವೇರ್ ಮಾಲೀಕ ನಿಖಿಲ್ ಎಂಬುವವರು ರಾತ್ರಿಯ ವೇಳೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಐದು ಜನರ ತಂಡವಿದ್ದ ಸ್ಯಾಂಟ್ರೋ ಕಾರೊಂದು ಸ್ಕೂಟಿ ಗೆ ಡಿಕ್ಕಿ ಹೊಡೆದು ಮಾಲೀಕನನ್ನು ಅಡ್ಡಗಟ್ಟಿ, ಆತನಿಗೆ ಚಾಕು ತೋರಿಸಿ ಹೆದರಿಸಿ, ಆತನ ಮೇಲೆ ಹಲ್ಲೆ ಮಾಡಿ ವ್ಯಕ್ತಿಯ ಬಳಿಯಲ್ಲಿದ್ದ ವಾಚ್, ಪರ್ಸ್, ಮೊಬೈಲ್, ಮುಂತಾದ ವಸ್ತುಗಳನ್ನು ಆತನಿಂದ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ತಂಡವನ್ನು ರಚಿಸಿಕೊಂಡು ಈ ಕುರಿತು ಕಾರ್ಯಾಚರಣೆಗಿಳಿದಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ನಿರಂತರವಾಗಿ 11 ತಿಂಗಳುಗಳ ಕಾಲ ಈ ಸಂಬಂಧ ಮಾಹಿತಿ ಕಲೆಹಾಕಿ, ಕಾರ್ಯಾಚರಣೆಯನ್ನು ನಡೆಸಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಮೊಬೈಲ್ ಅಂಗಡಿ ಮಾಲೀಕ ಜಲೀಲ್ ಹಾಗೂ ಆತನ ಪತ್ನಿ ಫಾದಿಮಾ ಇಬ್ಬರು ಬಂಧಿತ ಆರೋಪಿಗಳು. ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಕೋರ್ಟ್ ಆದೇಶಿಸಿದೆ. ಈ ಕೃತ್ಯಕ್ಕೆ ಉಪಯೋಗಿಸಿದ್ದ ಹ್ಯುಂಡೈ ಸ್ಯಾಂಟ್ರೋಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತ ಜಲೀಲ್ ಪತ್ನಿಯ ಅಕ್ಕನ ಮಗ ಪ್ರಥಮ ಆರೋಪಿಯಾಗಿದ್ದಾನೆ, ಅಂತೆಯೇ ಶಾಕೀರ್ ಇನ್ನೋರ್ವ ಆರೋಪಿಯಾಗಿದ್ದಾನೆ, ಇನ್ನೋರ್ವ ಆರೋಪಿ ಶಾಹೀದ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಿಂದಲೇ ಸಂಚು ಮಾಡಿದ್ದಾನೆ ಎನ್ನಲಾಗಿದೆ. ಘಟನಾ ಸಂಬಂಧ ದಂಪತಿಗಳು ಪೊಲೀಸರ ವಶದಲ್ಲಿದ್ದು ಇಬ್ಬರ ಸಂಪೂರ್ಣ ತನಿಖೆಯ ಬಳಿಕವಷ್ಟೇ ಈ ಕುರಿತಾದ ಸಂಪೂರ್ಣ ಮಾಹಿತಿಗಳು ಹೊರಬೀಳಲಿದೆ.
ಭಾರೀ ಮಳೆಗೆ ಗುಡ್ಡ ಕುಸಿತ :
ಚಿಕ್ಕಮಗಳೂರು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೂಡಿಗೆರೆ ಸಮೀಪದ ಗುಡ್ಡ ಕುಸಿದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ತ್ರಿಪುರ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿದ್ದು ಜನರಲ್ಲಿ ಆತಂಕ ಉಂಟುಮಾಡಿದೆ. ರೆಸಾರ್ಟ್, ರೋಪ್ ವೇ ನಿರ್ಮಾಣವೇ ಈ ಘಟನೆಗೆ ಕಾರಣ ಎಂಬ ಬಲವಾದ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ಸೂಕ್ತ ನಿಗಾವಹಿಸಬೇಕೆಂದು ಸಾರ್ವಜನಿಕರು ಕೋರಿದ್ದಾರೆ.
ಮರ ಕಡಿಯುವ ವೇಳೆ ಕಾರ್ಮಿಕನ ಸಾವು :
ಚಿಕ್ಕಮಗಳೂರು ಜಿಲ್ಲೆಯ ಆವುತಿ ಹೋಬಳಿಯ ಬೈಗೂರು ಗ್ರಾಮದ ಕಿರಣ್ ಗೌಡ ಎಂಬುವವರ ಕಾಫಿ ತೋಟದಲ್ಲಿ ಕಾರ್ಮಿಕ ಸಿದ್ದಪ್ಪ ಎಂಬಾತ ಮರಕಡಿಯಲೆಂದು ತೆರಳಿ ಮರ ಕಡಿಯುತ್ತಿದ್ದ ವೇಳೆ ದುರ್ಮರಣವನ್ನಪ್ಪಿದ್ದಾನೆ. ಮರದ ಕೊಂಬೆ ಕಾರ್ಮಿಕ ಸಿದ್ದಪ್ಪನ ಮೇಲೆ ಬಿದ್ದ ಪರಿಣಾಮ ಆತನ ಬೆನ್ನು ಮೂಳೆಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಈ ಸಂದರ್ಭದಲ್ಲಿ ಆತನನ್ನು ಉಪಚರಿಸಿದ ತೋಟದ ಮಾಲೀಕ ಹಾಗೂ ಇನ್ನೋರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲಿಸಿ ವೈದ್ಯರಲ್ಲಿ ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಪರೀಕ್ಷಿಸಿದ ವೈದ್ಯರು ಆತನು ಮೃತಪಟ್ಟಿರುವುದಾಗಿ ತಿಳಿಸಿದ್ದು ಸೂಕ್ತ ಸಲಕರಣೆಗಳನ್ನು ನೀಡದೆ ಮರ ಕಡಿಯಲು ಹೇಳಿದ ತೋಟದ ಮಾಲೀಕನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮೃತನ ಪತ್ನಿ ಪ್ರಕರಣ ದಾಖಲಿಸಿದ್ದಾರೆ.
ಬಾಳೆಹೊನ್ನೂರು : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಮಾಗುಂಡಿ ಗ್ರಾಮದ 37 ವರ್ಷ ಪ್ರಾಯದ ಎಂ.ಡಿ ಪ್ರಕಾಶ್ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಬಾಳೆಹೊನ್ನೂರಿನಲ್ಲಿ ಕೃಷಿ ಸಂಬಂಧಿತ ಉಪಕರಣಗಳನ್ನು ಮಾರಾಟ ಹಾಗೂ ಸರ್ವೀಸ್ ಒದಗಿಸುತ್ತಿದ್ದ ಅವರು ವ್ಯಾಪಾರದಲ್ಲಿ ನಷ್ಟಹೊಂದಿ ಹಾಗೂ ಪಡೆದ ಸಾಲವನ್ನು ಸೂಕ್ತ ಸಮಯದಲ್ಲಿ ಹಿಂದಿರುಗಿಸಲಾರದ ಕಾರಣಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ಪ್ರಕಾಶ್ ಅವರು ಮನೆಯ ಸಮೀಪದ ಗೋದಾಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಅವರ ಮೃತಪಟ್ಟಿರುವ ಸ್ಥಳದಲ್ಲೇ ಡೆತ್ ನೋಟ್ ಪತ್ತೆಯಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಪತಿಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಮೃತ ವ್ಯಕ್ತಿಯ ಪತ್ನಿ ಪೊಲೀಸರನ್ನು ಕೋರಿದ್ದಾರೆ ಹಾಗೂ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಕೊಡಗು :
ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಕೆ.ಜಿ ಬೋಪಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ
ಭಾರಿ ಮಳೆಯಿಂದಾಗಿ ಕುಸಿಯುವ ಹಂತದಲ್ಲಿರುವ ಮಡಿಕೇರಿಯ ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆಯನ್ನು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ ಜಿ ಬೋಪಯ್ಯ ವೀಕ್ಷಣೆ ನಡೆಸಿದರು, ಪರಿಸ್ಥಿತಿಯನ್ನು ಅವಲೋಕಿಸಿದ ಅವರು ಮಳೆ ಕಡಿಮೆಗೊಂಡ ತಕ್ಷಣದಲ್ಲಿ ಈ ಕುರಿತಾಗಿ ದುರಸ್ತಿ ಕ್ರಮಕೈಗೊಳ್ಳುವುದಾಗಿ ಹಾಗೂ ಸಂಪೂರ್ಣ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಸೂಚಿಸಿದರು.
ಮನೆ ಕುಸಿತ ಕಂದಾಯ ಅಧಿಕಾರಿಗಳ ಭೇಟಿ :
ಕೊಡಗು ಜಿಲ್ಲೆಯ ಮೇಕೆರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಿಗೇರಿ ಬನ್ನೇ ಕಾಡು ಚಿನ್ನಮ್ಮ ಎಂಬುವರ ಮನೆಯು ಮಳೆಯಿಂದಾಗಿ ಸಂಪೂರ್ಣ ಕುಸಿದಿದ್ದು ಈ ಕುರಿತು ಸೂಕ್ತ ಪರಿಹಾರವನ್ನು ಹಾಗೂ ಜೀವನಕ್ಕೆ ಆಶ್ರಯವನ್ನು ಕಲ್ಪಿಸಬೇಕೆಂದು ಸರ್ಕಾರವನ್ನು ಮನೆಯವರು ಕೋರಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಭೇಟಿ ನೀಡಿದ್ದು ಶೀಘ್ರವಾಗಿ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ಹಾಸನ :
ಮಳೆಯ ಆರ್ಭಟಕ್ಕೆ ಜಲಾಶಯಗಳು ಭರ್ತಿ
ಹಾಸನ ಜಿಲ್ಲೆಯ ಜೀವನದಿಗಳಾಗಿರುವ ಹೇಮಾವತಿ ಕಾವೇರಿ ಭಾರಿ ಮಳೆಯಿಂದಾಗಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪ್ರಸ್ತುತ ಹೇಮಾವತಿ ಅಣೆಕಟ್ಟು ಭರ್ತಿಯಾಗಿದ್ದು ಯಾವುದೇ ಕ್ಷಣದಲ್ಲಾದರೂ ಕ್ರಸ್ಟ್ ಗೇಟ್ ಗಳ ಮೂಲಕ ನೀರನ್ನು ಬಿಡುವ ಸಾಧ್ಯತೆಗಳು ಹೆಚ್ಚಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ. ತಮ್ಮ ಸುರಕ್ಷತೆಯ ಕಡೆಗೆ ಹೆಚ್ಚಿನ ಆದ್ಯತೆ ನೀಡಿ ಆಯಾಯ ಸಂದರ್ಭಗಳಲ್ಲಿ ನೀಡುವ ಸೂಚನೆಯನ್ನು ಪಾಲಿಸಿಕೊಂಡು ಸುರಕ್ಷತೆ ಯಿಂದಿರುವಂತೆ ಕೋರಿದೆ. ಸಕಲೇಶಪುರ ಆಲೂರು ಬೇಲೂರು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ.
ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ :
ಭಾರತೀಯ ಜನತಾ ಪಾರ್ಟಿಯ ರಾಜ್ಯ ಪದಾಧಿಕಾರಿಗಳ ಸಭೆಯು ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ಹಾಸನ ನಗರದ ಅಶೋಕ ಹೋಟೆಲ್ ನಲ್ಲಿ ನಡೆಯಲಿದೆ. ಈ ಮಹತ್ವದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿಗಳಾದ ಕೆ. ಗೋಪಾಲಯ್ಯ, ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಶಿವಮೊಗ್ಗ :
ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಎರಡು ಭಾಗವಾಗಲಿದೆ : ಕೆ.ಎಸ್ ಈಶ್ವರಪ್ಪ
ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದಾಗಿ ಕಾಂಗ್ರೆಸ್ ನಲ್ಲಿ ಈಗಾಗಲೇ ಒಳ ಜಗಳ ಶುರುವಾಗಿದ್ದು ಮುಂದ ನಡೆಯುವ ಸಿದ್ದರಾಮೋತ್ಸವದ ಆಚರಣೆಯ ಬಳಿಕ ಕಾಂಗ್ರೆಸ್ ಎರಡು ಭಾಗವಾಗಿ ಒಡೆಯಲಿದೆ ಎಂದು ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಈ ಬಾರಿ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರು ಸೋಲುತ್ತಾರೆ, ಈ ಮಧ್ಯೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಕುಟುಕಿದರು.
ಮಳೆ ಪ್ರಮಾಣ ಕಡಿಮೆಯಾಗುವವರೆಗೂ ರಜೆಯಿಲ್ಲ : ಶಾಸಕ ಹರತಾಳು ಹಾಲಪ್ಪ
ಜಿಲ್ಲೆಯಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯ ಪ್ರಮಾಣವು ಕಡಿಮೆಯಾಗುವವರೆಗೂ ಅಧಿಕಾರಿಗಳು ರಜೆ ಹಾಕುವಂತಿಲ್ಲ, ಶನಿವಾರ ಭಾನುವಾರವೂ ಕೂಡ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳ ಹಾಲಪ್ಪ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ. ಜನರ ಕ್ಲಿಷ್ಟಕರ ಸನ್ನಿವೇಶದಲ್ಲಿ ಕ್ಷಿಪ್ರವಾಗಿ ಸ್ಪಂದಿಸಬೇಕು ಅವರ ಕಷ್ಟಗಳಿಗೆ ನೆರವಾಗಬೇಕು ಎಂದು ತಿಳಿಸಿದರು. ಅಲ್ಲದೆ ಮುಂದಿನ ಕೆಡಿಪಿ ಸಭೆಯಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನೀಡುವ ಕುರಿತಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.



0 Comments