ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ನಡೆಸುತ್ತಿದ್ದ ಎರಡು ವಾಹನಗಳನ್ನು ಹಾಗೂ ಜಾನುವಾರುಗಳನ್ನು ಆನವಟ್ಟಿ ಪೊಲೀಸರು ವಶಕ್ಕೆ ಪಡೆದು ರಕ್ಷಣೆ ಮಾಡಿರುವ ಘಟನೆ ಜಡೆ ಗ್ರಾಮದ ಸಮೀಪ ಕಾಲಿಗೇರಿ ಗ್ರಾಮದಲ್ಲಿ ನಡೆದಿದೆ.

ಸೊರಬ ಕಡೆಯಿಂದ ಹೊಸೂರು ಮಾರ್ಗವಾಗಿ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಕಸಾಯಿಖಾನೆಗೆ ಗೋವುಗಳನ್ನು ಅಮಾನವೀಯ ರೀತಿ ಸಾಗಾಟ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಹೊಂದಿದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವಾಹನವನ್ನು ತಡೆಯಲು ಸಿದ್ಧತೆ ನಡೆಸಿದ್ದರು.


ಈ ಕುರಿತಾಗಿ ವಿಚಾರತಿಳಿದ ಪೊಲೀಸರು ಎರಡು ವಾಹನಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೇ, ಜಾನುವಾರುಗಳಿಗೆ ಹಿಂಸೆಯಾಗುವಂತೆ ಸಾಗಾಟ ಮಾಡುತ್ತಿರುವುದು ಸ್ಥಳದಲ್ಲಿ ಕಂಡು ಬಂದಿದ್ದು, ಎರಡು ವಾಹನಗಳನ್ನು ವಶಕ್ಕೆ ಪಡೆದು 18 ಜಾನುವಾರುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. 

ಈ ಸಂಬಂಧ ಅಂಕರವಳ್ಳಿ ಗ್ರಾಮದ ಮುಹಮ್ಮದ್ ಆರೀಫ್ ರೆಹಮಾನ್ ಸಾಬ್, ಯಾಸೀನ್ ಅನ್ಸರ್ ಸಾಬ್, ಮುಹಮ್ಮದ್ ಇಲಿಯಾಜ್ ರೆಹಮಾನ್ ಸಾಬ್ ಎಂಬುವವರ ವಿರುದ್ಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಸಿಪಿಐ ಎಲ್. ರಾಜಶೇಖರ್ ಮಾರ್ಗದರ್ಶನಲ್ಲಿ ಪಿಎಸ್‌ಐಗಳಾದ ರಾಜುರೆಡ್ಡಿ, ವಿ.ಎಂ. ಅಗಾಸಿ, ಹೆಡ್ ಕಾನ್ಸ್‌ಟೇಬಲ್‌ಗಳಾದ ಗಿರೀಶ್, ಜಿ. ಪ್ರಕಾಶ್, ಸಿದ್ದೇಶ್, ಖಲಂದರ್, ಕಾನ್ಸ್‌ಟೇಬಲ್‌ಗಳಾದ ಭರತ್, ಮಲ್ಲೇಶ್, ಮಂಜುನಾಥ ಜಾಡರ್, ನಿಂಗಪ್ಪ ಪಾಲ್ಗೊಂಡಿದ್ದರು.

ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ :

ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಪ್ರಶ್ನಿಸಿದ ಬಜರಂಗದಳದ ಕಾರ್ಯಕರ್ತನ ಮೇಲೆ ದಂಧೆಕೋರರು ಆಯುಧದಿಂದ ಮೊಣಕಾಲಿನ ಭಾಗಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಯಾವುದೇ ದೂರುಗಳು ದಾಖಲಾಗಿಲ್ಲ. ಪೊಲೀಸರು ವಶಕ್ಕೆ ಪಡೆದ ಜಾನುವಾರುಗಳಿಗೆ ಜಡೆ ಪೊಲೀಸ್ ಉಪ ಠಾಣೆಯಲ್ಲಿ ಉಪಚರಿಸಿ, ನೆರೆಯ ಸಿದ್ದಾಪುರ ತಾಲೂಕಿನ ಗೋಶಾಲೆಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.