ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ, ಕಳಸ, ಮೂಡಿಗೆರೆ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ಎದುರಾಗಿದೆ ಈ ನಿಟ್ಟಿನಲ್ಲಿ ಜಿಲ್ಲೆಯ ಹಲವು ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಮೂಡಿಗೆರೆ, ಕಳಸ , ಎನ್.ಆರ್.ಪುರ, ಭಾಗದಲ್ಲಿ ಮಳೆ ಹೆಚ್ಚಿರುವ ಕಾರಣ ಎರಡು ದಿನಗಳ ಕಾಲ (5.07.2022 ಹಾಗೂ 06.07.2022) ರಂದು ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದರು. ಮುಂದುವರೆದು ಮಳೆ ಹೆಚ್ಚಾಗುವ ಸಂಭವವಿರುವ ಕಾರಣ ಹಾಗೂ ಮಕ್ಕಳ ಸುರಕ್ಷತಾ ದೃಷ್ಟಿಯ ಸಲುವಾಗಿ ಜುಲೈ 06 ರಿಂದ 09 ರವರೆಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ.



ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹಾಗೂ ಅಂಬಳೆ ಹೋಬಳಿ ಹೊರತು ಪಡಿಸಿ ಉಳಿದೆಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಮಲೆನಾಡಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆ ನಾಲ್ಕು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆಯ ಕಲಂ 26, 30, 34 ರ ಅಡಿಯಲ್ಲಿ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.

ಮಳೆಯಿಂದಾಗಿ ಧರೆ ಕುಸಿದು ಮನೆ ಹಾನಿಯಾಗುವ ಭೀತಿಯಲ್ಲಿ ಕುಟುಂಬ : 

ಶೃಂಗೇರಿ : ಶೃಂಗೇರಿ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಮರಗಳು ರಸ್ತೆಗೆ ಅಡ್ಡಲಾಗಿ ಉರುಳುವುದು, ಧರೆ ಕುಸಿತ ಸೇರಿದಂತೆ ಅಲ್ಲಲ್ಲಿ ಕೆಲ ಅವಘಡಗಳು ಸಂಭವಿಸಿದೆ. 

ಶೃಂಗೇರಿ ತಾಲೂಕಿನ ಬೆಳಂದೂರು ಗ್ರಾಮದ ಹಾಸ್ಟೆಲ್ ಸರ್ಕಲ್ ನೇರಳೆಕುಡಿಗೆ ಗೋಪಾಲ ಕೃಷ್ಣ ಎಂಬುವವರ ಮನೆಯ ವರಾಂಡ ಮಳೆಯಿಂದಾಗಿ ಕುಸಿಯುವ ಸ್ಥಿತಿಯಲ್ಲಿದ್ದು ಈ ಭಾಗವು ಕುಸಿದಲ್ಲಿ ಮನೆಗೆ ಸಂಪೂರ್ಣ ಹಾನಿಯಾಗಲಿದೆ, ಈ ಕುರಿತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹಾಗೂ ಈ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಅವರು ಜಿಲ್ಲಾಧಿಕಾರಿಗಳನ್ನು ಕೋರಿದ್ದಾರೆ. 

ಗೋಪಾಲ ಕೃಷ್ಣ ಅವರ ಪರಿವಾರವು ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದ ಸಂಬಂಧಿಸಿದ ಅಧಿಕಾರಿಗಳನ್ನು ತ್ವರಿತಗತಿಯಲ್ಲಿ ಸ್ಥಳ ಪರಿಶೀಲನೆ ಗೆ ಕಳುಹಿಸಿ ಈ ಕುರಿತಾಗಿ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್ ಅವರನ್ನು ಕೋರಿದ್ದಾರೆ.



ಆರಂಭಗೊಂಡ ಮಳೆಗೆ ಮಲೆನಾಡಿಗರ ಜೀವನ ಅಸ್ತವ್ಯಸ್ತವಾಗಿದ್ದು, ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆಲ ಮನೆಗಳಿಗೆ ಹಾನಿಯಾಗಿದೆ ಹಾಗೂ ಪ್ರವಾಹ ಪರಿಸ್ಥಿತಿ ಎದುರಾಗಿದೆ, ಶೃಂಗೇರಿಯ ಬೈಪಾಸ್ ರಸ್ತೆ ತುಂಗಾ ನದಿಯ ಪ್ರವಾಹಕ್ಕೆ ಮುಳುಗಡೆಯಾಗಿದೆ.