ಶೃಂಗೇರಿ : (ಫ್ಯಾಕ್ಟ್ ಚೆಕ್) ಕಳೆದ ಅನೇಕ ದಿನಗಳಿಂದ ಮಲೆನಾಡು ಭಾಗವಾದ ಕೆರೆಕಟ್ಟೆ, ಕಳಸ, ಶೃಂಗೇರಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ತುಂಗಭದ್ರಾ ನದಿಗಳ ಒಳ ಹರಿವು ಹೆಚ್ಚಾಗಿದೆ. ಮಳೆಯ ಆರ್ಭಟಕ್ಕೆ ಎರಡು ಬಾರಿ ಪ್ರವಾಹವು ಉಂಟಾಗಿದೆ, ಆದರೆ ಕೆಲವರು ಪ್ರವಾಹದ ಹಳೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಜನರಲ್ಲಿ ಆತಂಕ ಮೂಡುವಂತೆ ಮಾಡುತ್ತಿದ್ದಾರೆ. 

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣವಾದ ಶೃಂಗೇರಿಯ ಪಾರ್ಕಿಂಗ್ ನಿಲುಗಡೆ ಸ್ಥಳವಾದ ಗಾಂಧಿ ಮೈದಾನಕ್ಕೆ ಹಲವು ವರ್ಷಗಳ ಹಿಂದೆ ಅತೀ ವೇಗವಾಗಿ ಪ್ರವಾಹ ಉಂಟಾಗಿತ್ತು. ಈ ಸಂದರ್ಭದಲ್ಲಿ ಕೆಲ ವಾಹನಗಳು ನೀರಿನಲ್ಲಿ ತೇಲಿ ಹೋಗಿದ್ದವು. ಆದರೆ ಪ್ರಸ್ತುತ ಇದಾವುದೂ ನಡೆದಿಲ್ಲ.


ಕಳೆದೊಂದು ವಾರದಿಂದ ಈ ಭಾಗದಲ್ಲಿ ಮಳೆಯಾಗುತ್ತಿದ್ದು, ಜುಲೈ 04 ಹಾಗೂ 05 ರಂದು ಈ ಎರಡು ದಿನಗಳ ಕಾಲ ಶೃಂಗೇರಿಯ ಬೈಪಾಸ್ ರಸ್ತೆಯ ಮೇಲೆ ತುಂಗೆಯ ಪ್ರವಾಹ ಬಂದು ರಸ್ತೆ ಸಂಪರ್ಕ ಬಂದ್ ಆಗಿತ್ತು. ಸಂಪೂರ್ಣವಾಗಿ ಗಾಂಧಿ ಮೈದಾನಕ್ಕೆ ಪ್ರವಾಹ ಆವರಿಸಿರಲಿಲ್ಲ. ಕೆಲ ಪ್ರದೇಶಕ್ಕಷ್ಟೆ ನೀರು ನುಗ್ಗಿತ್ತು. ಪ್ರವಾಹದಿಂದಾಗಿ ಪಟ್ಟಣಕ್ಕಾಗಲಿ ಅಥವಾ ಪಾರ್ಕಿಂಗ್ ಜಾಗಕ್ಕಾಗಲಿ ಯಾವುದೇ ಹಾನಿಗಳು ಸಂಭವಿಸಿರಲಿಲ್ಲ, ಪ್ರವಾಸಿಗರ ವಾಹನಗಳು ಸಹ ಪ್ರಸ್ತುತ ಕೊಚ್ಚಿ ಹೋಗಿಲ್ಲ.

ಆದರೆ ಕೆಲ ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದರ ಮೂಲಕ ನೈಜತೆಯ ವಿರುದ್ಧವಾಗಿ ಹಾಗೂ ಇಲ್ಲದೆ ಇರುವ ಅಪಾಯವನ್ನು ಎದುರಾಗಿರುವ ಅಪಾಯದಂತೆ ಸೃಷ್ಟಿಸಲಾಗಿದೆ.