ಕಸ್ತೂರಿರಂಗನ್ ವರದಿ ವಿರೋಧಿಸಿ ಕರೆ ನೀಡಿದ್ದ ಬಂದ್ ವಾಪಸ್ :

ಮಲೆನಾಡಿಗರ ಜನಜೀವನದ ಉಳಿವಿಗಾಗಿ ಕಸ್ತೂರಿರಂಗನ್ ವರದಿ ವಿರೋಧಿಸಿ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟ ಹಾಗೂ ಹೋರಾಟ ಸಮಿತಿ ನೀಡಿದ್ದ ಚಿಕ್ಕಮಗಳೂರು ಜಿಲ್ಲಾ ಬಂದ್ ನ್ನು ವಾಪಾಸ್ ಪಡೆಯಲಾಗಿದೆ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿದರು. ಮೂಡಿಗೆರೆ ತಾಲ್ಲೂಕಿನಲ್ಲಿ 26 ಗ್ರಾಮಗಳ ವ್ಯಾಪ್ತಿಯ ಪ್ರದೇಶಗಳು ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಡಿಸಲಾಗಿದ್ದು ಇದರಿಂದ ಮಲೆನಾಡಿನ ಜನಜೀವನದ ಬಗ್ಗೆ ಅತೀವ ಪರಿಣಾಮ ಬೀರಿದ್ದು ಕಸ್ತೂರಿರಂಗನ್ ವರದಿಯಿಂದ ಕಾಫಿ,ಅಡಿಕೆ, ಏಲಕ್ಕಿ,ಕಾಳುಮೆಣಸು ಬೆಳೆಗಾರರ ಬಡ ರೈತರ ಪಾಲಿಗೆ ಸಂಕಷ್ಟದ ಸ್ಥಿತಿಯಾಗಿದೆ. ಇದರಿಂದ ಕೆಜಿಎಫ್ ಹಾಗೂ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯು ಜುಲೈ 29 ಚಿಕ್ಕಮಗಳೂರು ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಲು ಕರೆ ನೀಡಿತ್ತು. ಇದನ್ನರಿತ ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ತರದಂತೆ ತಡೆಯಲು ಸಭೆ ನಡೆಸಿ ಮುಖ್ಯಮಂತ್ರಿಗಳ ನಿಯೋಗವು ದೆಹಲಿ ಪರಿಸರ ಇಲಾಖೆ ಮುಖಾಂತರ ಹಸಿರು ಪೀಠಕ್ಕೆ ಅಪಿಡವಿಟ್ ಸಲ್ಲಿಸಿದೆ. ಸರ್ಕಾರದ ಈ ನಿರ್ಧಾರವನ್ನು ಕೆಜಿಎಫ್ ಹಾಗೂ ಹೋರಾಟ ಸಮಿತಿಯು ಸ್ವಾಗತಿಸಿದೆ. ಇದರಿಂದ ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆಯಬೇಕಾಗಿದ್ದ ಚಿಕ್ಕಮಗಳೂರು ಜಿಲ್ಲಾ ಬಂದ್ ಅನ್ನು ತಾತ್ಕಾಲಿಕವಾಗಿ ಸದ್ಯಕ್ಕೆ ಹಿಂಪಡೆದಿದ್ದೇವೆ ಎಂದರು. 

ಮೂಲಭೂತ ಸೌಲಭ್ಯ ಒದಗಿಸುವಂತೆ ಸ್ಥಳೀಯರ ಆಗ್ರಹ :

ಕಳಸದ ಸಂಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಳಗಲ್ ಗ್ರಾಮದ 35 ಕ್ಕೂ ಅಧಿಕ ಗಿರಿಜನ ಕುಟುಂಬಗಳನ್ನು ಸಂಪರ್ಕಿಸುವ ಸಲುವಾಗಿ ಹೆಸರಿಗೆ ತೂಗು ಸೇತುವೆಯಿದೆಯಾದರೂ ಮಳೆಗಾಲದಲ್ಲಿ ಭದ್ರಾ ನದಿಯ ನೀರಿನ ಮಟ್ಟ ಹೆಚ್ಚಿರುವ ಪರಿಣಾಮ ಜನರಿಗೆ ಓಡಾಡಲು ತೀವ್ರ ಸಂಕಷ್ಟ ಎದುರಾಗಿದೆ ಎಂದು ಸರ್ಕಾರ ಹಾಗೂ ಜನಪ್ರತಿನಿಧಿಗಳ ವರ್ತನೆಯಿಂದ ಬೇಸತ್ತ ಜನರು ತಮಗಾಗುತ್ತಿರುವ ಗೋಳನ್ನು ವ್ಯಕ್ತಪಡಿಸಿದರು. ವಯಸ್ಸಾದವರು, ಶಾಲಾ ಮಕ್ಕಳು, ಸೇರಿದಂತೆ ಮಧ್ಯಮ ವಯಸ್ಸಿನವರು ಇಲ್ಲಿ ವಾಸ ಮಾಡುತ್ತಿದ್ದು ಸಮರ್ಪಕ ರಸ್ತೆ ವ್ಯವಸ್ಥೆ, ನೆಟ್ವರ್ಕ್, ಶಾಲೆ, ಸೇರಿದಂತೆ ಮೂಲ ಸೌಲಭ್ಯಕ್ಕೆ ಕೊರತೆಯುಂಟಾಗಿದೆ. ಈ ಕುರಿತಾಗಿ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ನಮ್ಮ ಸಮಸ್ಯೆಗೆ ಸ್ಪಂದಿಸಬೇಕೆಂದು ಸ್ಥಳೀಯರು ಕೋರಿದರು.

ಸಿದ್ದರಾಮೋತ್ಸವಕ್ಕೆ ಸರ್ವರ ಸಹಕಾರ : 

ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನೋತ್ಸವಕ್ಕೆ ಚಿಕ್ಕಮಗಳೂರಿನ ವಿವಿಧ ಸಂಘಟನೆ ಮತ್ತು ಒಕ್ಕೂಟಗಳ ಮುಖಂಡರು ಬೆಂಬಲ ಘೋಷಿಸಿದ್ದಾರೆ. ಇಲ್ಲಿನ ಕನಕ ಭವನದಲ್ಲಿ ನಡೆದ ಜಿಲ್ಲಾ ಅಹಿಂದ ಫೆಡರೇಷನ್ ಜಿಲ್ಲಾ ಸಭೆಯಲ್ಲಿ ಜನ್ಮದಿನೋತ್ಸವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡುವುದಾಗಿ ತಿಳಿಸಿದರು. ರಾಜಕೀಯವನ್ನು ಬದಿಗೊತ್ತಿ ಅದ್ಧೂರಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕರೆ ನೀಡಿದರು.

ಶಿವಮೊಗ್ಗ :

ಮದ್ಯ ಸೇವಿಸಿ ತೂರಾಟ ನಡೆಸಿದ ಕಾಲೇಜು ವಿದ್ಯಾರ್ಥಿಗಳು 

ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಮದ್ಯ ಸೇವನೆ ಮಾಡಿ ಅಕ್ಕಪಕ್ಕದ ರಸ್ತೆಗಳಲ್ಲಿ ಓಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿದ್ಯಾರ್ಥಿಗಳ ಮೇಲೆ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಂಡಿದ್ದು ಕಾಲೇಜಿನ ಎದುರು ಭಾಗದ ಬಾರೊಂದರಲ್ಲಿ ಮದ್ಯ ಸೇವನೆ ಮಾಡಿರುವ ಬಗ್ಗೆ ಮಾಹಿತಿ ಇದ್ದು ಸೂಕ್ತ ಕ್ರಮಕ್ಕೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಈ ರೀತಿಯಾಗಿ ಹಾದಿ ತಪ್ಪುತ್ತಿರುವ ಯುವ ಸಮೂಹಕ್ಕೆ ತಕ್ಕ ಪಾಠ ಕಲಿಸಬೇಕಿದೆ.

ಸಚಿವ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ನಿರ್ಧಾರ : 

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದ ಆರೋಪದಿಂದ ಮುಕ್ತನಾಗಿರುವುದಕ್ಕೆ ಸಂತಾಸವಿದೆ. ಈ ಕುರಿತಾಗಿ ಧೃಢ ನಂಬಿಕೆಯಿತ್ತು. ಆರೋಪ ಮುಕ್ತನಾಗಿರುವ ನನಗೆ ಸಚಿವ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಷಯ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ತಿಳಿಸಿದರು. ಚುನಾವಣೆಗೆ ಕೆಲವೇ ತಿಂಗಳುಗಳ ಸಮಯವಿದ್ದು ಮಂತ್ರಿಗಿರಿ ನೀಡುವುದು ಬಿಡುವುದು ನಮ್ಮ ಹೈಕಮಾಂಡ್ ಗೆ ಬಿಟ್ಟದ್ದು ಎಂದರು. 

ಅತೀ ಶೀಘ್ರವಾಗಿ ಬೆಳೆಹಾನಿ ಪರಿಹಾರ ವಿತರಣೆ : 

ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಬಾರಿ ಸಂಭವಿಸಿದ ಮಳೆ ಹೆಚ್ಚಿನ ಸಮಸ್ಯೆ ಹಾಗೂ ಸಂಕಷ್ಟವನ್ನು ರೈತರಿಗೆ ತಂದೊಡ್ಡಿದ್ದು ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಶೀಫ್ರವಾಗಿ ಪರಿಹಾರ ನೀಡುವ ಕುರಿತು ತಿಳಿಸಿದರು.

ಕೊಡಗು : 

ಅಶ್ಲೀಲ ಫೋಟೋ ತೆಗೆದು ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿ ಬಂಧನ 

ಮಹಿಳೆಯ ಮೇಲೆ ಲೈಂಗಿಕದೌರ್ಜನ್ಯ ಎಸಗಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಎನ್ನಲಾದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಡಗಿನ ಸಿದ್ದಾಪುರದ ನಿವಾಸಿ ವೃತ್ತಿಯಲ್ಲಿ ಚಾಲಕನಾಗಿರುವ ಸುಲೈಮನ್ ಬಂಧಿತ ಆರೋಪಿ. ಈತನು ವಿರಾಜಪೇಟೆ ಪಟ್ಟಣದಲ್ಲಿ ನೆಲೆಸಿದ್ದ ಶಿಕ್ಷಕಿಯೋರ್ವರ ಅಶ್ಲೀಲ ಫೋಟೋಗಳನ್ನು ತೆಗೆದು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹಣಕ್ಕಾಗಿ ಬೇಡಿಕೆಯೊಡ್ಡಿದ್ದಾನೆ ಎಂಬ ಆರೋಪ ಹಾಗೂ ದೂರು ದಾಖಲಾದ ಹಿನ್ನೆಲೆ ಆತನನ್ನು ವಿರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸುಲೈಮಾನ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಆರೋಪ ಮಾಡಿರುವ ಮಹಿಳೆಯು ನ್ಯಾಯದೊರಕಿಸಿಕೊಡುವಂತೆ ಕೋರಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆಯ ಬಳಿಕದಲ್ಲಿ ಈ ಕುರಿತಾದ ಮಾಹಿತಿ ಹೊರಬೀಳಲಿದೆ.