ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಹಿಂದೂಪರ ಸಂಘಟನೆಗಳ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ಉಂಟುಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಿಟ್ಟಾರೆ ಪ್ರವೀಣ್ ಹತ್ಯೆ ಖಂಡಿಸಿ ನಾಳೆ ಸ್ವಯಂ ಪ್ರೇರಿತ ಶೃಂಗೇರಿ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿದೆ. 

ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಝಳಪಿಸಿದ ಲಾಂಗ್ ! ಎರಡು ಗುಂಪುಗಳ ನಡುವೆ ಮಾರಾಮಾರಿ; ಲಾಂಗ್ ನಲ್ಲಿ ಯುವಕನ ಮೇಲೆ ಹಲ್ಲೆ

ಎರಡು ದಿನಗಳ ಹಿಂದೆ ಅಂಗಡಿಯಿಂದ ಮನೆಗೆ ತೆರಳುವ ವೇಳೆ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನಿಟ್ಟಾರೆ ಅವರನ್ನು ಬರ್ಬರವಾಗಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಈ ಹತ್ಯೆಯನ್ನು ರಾಜ್ಯದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಲವಾಗಿ ಖಂಡಿಸಿ ಆರೋಪಿಗಳ ತಲೆದಂಡಕ್ಕೆ ಆಗ್ರಹಿಸಿ ತೀವ್ರತರಹವಾದ ಪ್ರತಿಭಟನೆ ಹಾಗೂ ಬಂದ್ ನ್ನು ರಾಜ್ಯದ ವಿವಿಧ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ನಡೆಸುತ್ತಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು, ನರಸಿಂಹರಾಜಪುರ ಹಾಗೂ ಖಾಂಡ್ಯ ವ್ಯಾಪ್ತಿಯಲ್ಲಿ ಬಂದ್ ನಡೆಯುತ್ತಿದ್ದು ನಾಳೆ ಸ್ವಯಂ ಪ್ರೇರಿತ ಶೃಂಗೇರಿ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿದೆ. 


ಶೃಂಗೇರಿ ಮಂಡಲದ ಬಿಜೆಪಿ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ :

ಅಧಿಕಾರಕ್ಕಾಗಿ ಹಿಂದುತ್ವದ ಹೆಸರನ್ನು ಬಳಸುವುದಿಲ್ಲ, ಹಿಂದುತ್ವವೇ ತಮ್ಮ ಸ್ಪಷ್ಟನಿಲುವು ಎಂದು ನಿನ್ನೆ ಶೃಂಗೇರಿ ಮಂಡಲದ ಬಿಜೆಪಿ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಮುಖಂಡರಾದ ವೇಣುಗೋಪಾಲ್ ಸರ್ಕಾರ ಹಿಂದೂಪರವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮನೋಬಲ ವೃದ್ಧಿಸುವ ರೀತಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸಬೇಕು ಅಲ್ಲಿಯವರೆಗೆ ಪಕ್ಷದ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ ಎಂದು ತಮ್ಮಲ್ಲಿದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಾರ್ಯಕರ್ತರು ಪ್ರಭಲರಾಗಿರುವ ಕಾರಣಕ್ಕೆ ಅಧಿಕಾರವನ್ನು ಹೊಂದಿದ್ದಾರೆ ಕಾರ್ಯಕರ್ತರಿಗೆ ಅಧಿಕಾರದಿಂದ ಕೆಳಗಿಳಿಸಲೂ ಗೊತ್ತಿದೆ ಎಂಬುದಾಗಿ ಎಚ್ಚರಿಸಿದರು ಹಾಗೂ ಮುಂದಿನ ದಿನಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮನೋಬಲ ವೃದ್ಧಿಸುವ ಕೆಲಸಗಳನ್ನು ಮಾಡಬೇಕೆಂದು ಆಗ್ರಹಿಸಿ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು. 

ನಾಳೆ ದಿನಾಂಕ 30.07.2022 ರ ಶನಿವಾರದಂದು ಶೃಂಗೇರಿ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದು ಶೃಂಗೇರಿಯ ಪಟ್ಟಣದಲ್ಲಿರುವ ಮಾರ್ಕೆಟ್ ಮುಂಭಾಗದಲ್ಲಿ 10 ಘಂಟೆಗೆ ಪ್ರತಿಭಟನೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.