ಮಡಿಕೇರಿ : (ನ್ಯೂಸ್ ಮಲ್ನಾಡ್ ವರದಿ) ಕಳೆದ 24 ಗಂಟೆಗಳಿಂದ ಕೊಡಗು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅನೇಕ ಅವಘಡಗಳು ಸಂಭವಿಸುತ್ತಿದೆ. ಗಾಳಿ ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ಮರಗಳು ಉದುರುತ್ತಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು ಹಾಗೂ ಮನೆಗಳು ಹಾನಿಗೊಂಡಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಚ್ಚುಗಳು ; ನಡುರಸ್ತೆಯಲ್ಲೇ ಬರ್ಬರ ಹತ್ಯೆ
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮುಖ್ಯ ರಸ್ತೆಗಳಿಗೆ ಬೃಹತ್ ಗಾತ್ರದ ಮರಗಳು ಉರುಳಿಬಿದ್ದಿದೆ. ಅರಣ್ಯ ಇಲಾಖೆ, ಎನ್‌ಡಿಆರ್‌ಎಫ್, ಗ್ರಾಪಂ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಭಾಗದ ಬಹುತೇಕ ರಸ್ತೆಗಳಲ್ಲೂ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಗಾಳಿಬೀಡು ರಸ್ತೆ ಜಂಕ್ಷನ್ ಬಳಿ ಬೃಹತ್ ಗಾತ್ರದ ಮರಗಳು ಉರುಳಿಬಿದ್ದಿವೆ. ಮಡಿಕೇರಿ- ಸೋಮವಾರಪೇಟೆ ರಸ್ತೆ ಹಾಗೂ ಶನಿವಾರಸಂತೆ ವ್ಯಾಪ್ತಿಯಲ್ಲಿ ಎರಡು ಮರಗಳು, ಭಾಗಮಂಡಲ, ತಲಕಾವೇರಿ ರಸ್ತೆಯಲ್ಲೂ ಮರಗಳು ಧರೆಗುರುಳಿವೆ. ಮರಗಳು ಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ. ಗಾಳಿಬೀಡು ಗ್ರಾಮ, ಮಡಿಕೇರಿಯ ಗದ್ದಿಗೆ, ಕನ್ನಂಡ ಬಾಣೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಬಿದ್ದಿವೆ.
ಪೆರಾಜೆ ಗ್ರಾಮದ ಕುಂದಲ್ಪಾಡಿ ಪ್ರದೇಶದಲ್ಲಿ ಬರೇ ಕುಸಿದು ಟ್ರಾನ್ಸ್ ಫಾರ್ಮರ್ ಮುರಿದು ಬಿದ್ದಿದ್ದು, ಬೇರೆ ಮಾರ್ಗದ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನ ಮುಂದುವರಿದಿದೆ. ಕಾವೇರಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಇದ್ದು, ನದಿ ತೀರ ಹಾಗೂ ಬೆಟ್ಟ ಗುಡ್ಡಗಳ ವ್ಯಾಪ್ತಿಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಈಗಾಗಲೇ ಸೂಚಿಸಲಾಗಿದೆ.
ಈ ಮಧ್ಯೆ ಬಿಟ್ಟೂಬಿಡದೆ ಗಾಳಿ ಸಹಿತ ಮಳೆಸುರಿಯುತ್ತಿದ್ದು ಮಳೆಯ ಅವಾಂತರದಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಹಾನಿಗೊಳಗಾದ ಭಾಗದ ಮನೆಗಳ ಜನರು ಸೂಕ್ತವಾದ ಆಶ್ರಯವನ್ನು ಕಲ್ಪಿಸುವಂತೆ ಹಾಗೂ ಪರಿಹಾರವನ್ನು ಒದಗಿಸುವಂತೆ ಸರ್ಕಾರವನ್ನು ಹಾಗೂ ಜನಪ್ರತಿನಿಧಿಗಳನ್ನು ಕೋರಿದ್ದಾರೆ.
ಶೃಂಗೇರಿ: ಧರೆಗುರುಳಿದ ಬೃಹತ್ ಗಾತ್ರದ ಮರ
ಶೃಂಗೇರಿ ಕಿಗ್ಗಾ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಗಾಳಿ ಮಳೆಗೆ ನೆಲಕ್ಕುರುಳಿದ ಪರಿಣಾಮ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಂಬಂಧ ಪಟ್ಟ ಇಲಾಖೆಯವರು ಸ್ಥಳಕ್ಕೆ ಧಾವಿಸಿದ್ದು ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ






0 Comments