ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲವು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯೋರ್ವರ ಶವ ಶೃಂಗೇರಿಯಲ್ಲಿ ಪತ್ತೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೂತುಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಲಾಬಿ ಎಂಬ ಮಹಿಳೆ ಕೆಲ ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಕುರಿತಾಗಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಹಾಗೂ ಸೀರೆಯೊಂದು ನೀರಿನಲ್ಲಿ ತೇಲುತ್ತಿರುವುದು ಸ್ಥಳೀಯರಿಗೆ ಕಂಡು ಬಂದಿತ್ತು, ನಂತರದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳು ಈ ಕುರಿತಾಗಿ ಕಾರ್ಯಾಚರಣೆ ನಡೆಸಿದ್ದರು ಆದರೆ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಯಾವುದೇ ಸುಳಿವುಗಳು ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ದೊರೆತಿರಲಿಲ್ಲ. 


ಇಂದು ಶೃಂಗೇರಿಯ ಕಲ್ಕಟ್ಟೆ ಸೇತುವೆ ಬಳಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಅದೇ ಶವ ಇರಬಹುದು ಎಂದು ಶಂಕಿಸಲಾಗಿದೆ. ಶವವನ್ನು ಕಂಡ ಸ್ಥಳೀಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಈ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದ ವಾಹನ : 

ಚಿಕ್ಕಮಗಳೂರು :  ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ನಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಸರಕು ಸಾಗಣೆ ನಡೆಸುತ್ತಿದ್ದ ಲೇಲೆಂಡ್ ವಾಹನ ಉರುಳಿ ಜಖಂಗೊಂಡಿರುವ ಘಟನೆ ನಡೆದಿದೆ.

ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.

ಪಲ್ಟಿಯಾದ ತೀವ್ರತೆಗೆ ಲಾರಿ ಜಖಂಗೊಂಡಿದ್ದು ಚಾಲಕ ಸುರಕ್ಷಿತವಾಗಿದ್ದಾರೆ. ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ಈಗಾಗಲೇ ಅನೇಕ ಕಡೆಗಳ ರಸ್ತೆ ಕುಸಿದು ಭಾರೀ ಹಾನಿಯುಂಟಾಗಿದೆ. ಹೆಚ್ಚಿನ ತಿರುವು ಮುರುವುಗಳನ್ನು ಮಲೆನಾಡು ಭಾಗದ ರಸ್ತೆಗಳು ಹೊಂದಿರುವುದರಿಂದ ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ಸುರಕ್ಷಿತವಾಗಿ ಈ ಮಾರ್ಗದಲ್ಲಿ ಸಂಚಾರ ಮಾಡಬೇಕಿದೆ. 


ಅಂತೆಯೇ ಶೃಂಗೇರಿ ಮೂಲಕ ಕುದುರೆಮುಖ ಹಾಗೂ ಕಾರ್ಕಳವನ್ನು ಸಂಪರ್ಕಿಸುವ ಮಾರ್ಗವಾದ ಎಸ್.ಕೆ ಬಾರ್ಡರ್ ಬಳಿಯೂ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ನಿನ್ನೆ ರಸ್ತೆಯ ಬದಿಗೆ ಉರುಳಿತ್ತು. ಇದರಿಂದಾಗಿ ಕೆಲ ಸಮಯ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿತ್ತು. ಅತೀ ಕಡಿದಾದ ರಸ್ತೆಗಳನ್ನು ಹಾಗೂ ತಿರುವುಗಳನ್ನು ಹೊಂದಿರುವ ಈ ಮಾರ್ಗವು ದಟ್ಟ ಅರಣ್ಯ ಪ್ರದೇಶವಾಗಿದ್ದು ಅನೇಕ ಅವಘಡಗಳು ಈ ಮಾರ್ಗದಲ್ಲಿ ಸಂಭವಿಸಿರುವ ನಿದರ್ಶನಗಳಿವೆ.

ಈ ಭಾಗದಲ್ಲಿನ ಸೇತುವೆಗಳು ಕೂಡ ಶಿಥಿಲಾವಸ್ಥೆಯನ್ನು ತಲುಪಿದ್ದು ಭಾರೀ ಪ್ರಮಾಣದ ವಾಹನಗಳು ಈ ರಸ್ತೆಯಲ್ಲಿ ತಿರುಗುವುದರಿಂದ ಹಾಗೂ ಹೆಚ್ಚಿನ ಮಳೆಯಾಗುತ್ತಿರುವ ಪರಿಣಾಮ ವಾಹನ ಸವಾರರು ಜಾಗರೂಕತೆಯಿಂದ ಈ ಮಾರ್ಗದಲ್ಲಿ ಸಂಚರಿಸಬೇಕಿದೆ.