ಚಿಕ್ಕಮಗಳೂರು
ಭಾರೀ ಮಳೆಗೆ ಭೂ ಕುಸಿತ ಸಂಚಾರಕ್ಕೆ ತಡೆ :
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ-ಆಗುಂಬೆ-ಉಡುಪಿ ತೆರಳುವ ಮಾರ್ಗಮಧ್ಯೆ ತೀವ್ರ ಮಟ್ಟದ ಭೂ ಕುಸಿತ ನಿನ್ನೆ ತಡರಾತ್ರಿ ಸಂಭವಿಸಿದೆ. ಶೃಂಗೇರಿಯಿಂದ
ಉಡುಪಿ ಸಂಪರ್ಕಿಸುವ ರಸ್ತೆ ಭಾರೀ ಮಟ್ಟದಲ್ಲಿ ಕುಸಿದಿದ್ದು ಜನ ಜೀವನ ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿದೆ. ಭೂಕುಸಿತದಿಂದಾಗಿ ವಾಹನ ಸಂಚಾರಕ್ಕೆ ಸಂಪೂರ್ಣ ತಡೆಯುಂಟಾಗಿದೆ. ಶೃಂಗೇರಿಯ ನೇರಳಕುಡಿಗೆ ಬಳಿ ಈ ಘಟನೆ ನಡೆದಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಭೂ ಕುಸಿತದಿಂದಾಗಿ ಅಕ್ಕಪಕ್ಕದ ತೋಟಗಳಿಗೆ ಭಾರೀ ಪ್ರಮಾಣದ ಹಾನಿಯಾಗಿದೆ.
ಭಾರೀ ಗಾತ್ರದ ಗುಡ್ಡ ಕುಸಿದು ಮನೆ ಸಂಪೂರ್ಣ ಹಾನಿ :
ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಮನೆಯೊಂದು ಹಾನಿಯಾಗಿರುವ ಘಟನೆ ಶೃಂಗೇರಿ ಸಮೀಪ ನಡೆದಿದೆ. ಆಗುಂಬೆ ಗಣೇಶ್ ಹೆಗ್ಗಡೆ ಅವರ ಮನೆಯ ಹಿಂದಿನ ಧರೆಯು ಕುಸಿದಿದ್ದು ಮಣ್ಣು ಮನೆಯೊಳಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಮನೆಯ ಒಳಗೆ ಮೂರರಿಂದ ನಾಲ್ಕು ಅಡಿ ಮಣ್ಣು ತುಂಬಿದ್ದು, ಗೋಡೆಗಳಲ್ಲಿ ಬಿರುಕು ಮೂಡಿದ್ದು ಧರೆಯ ನೀರು ಮನೆಯ ಒಳಗಿನಿಂದ ಹರಿಯುತ್ತಿದೆ. ಮನೆಯಲ್ಲಿದ್ದ ವಸ್ತುಗಳು ಹಾಗೂ ಮನೆಗೆ ಭಾರೀ ಪ್ರಮಾಣದ ಹಾನಿಯಾಗಿದ್ದು ಸದ್ಯ ಮನೆಯ ನಿವಾಸಿಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.
ಪರ್ಯಾಯ ಮಾರ್ಗಗಳ ಮೂಲಕ ವಾಹನ ಸಂಚಾರಕ್ಕೆ ಈ ದಾರಿ ಅನುಕೂಲ :
ದೊಡ್ಡಮಟ್ಟದ ರಸ್ತೆ ಕುಸಿತದಿಂದ ಶೃಂಗೇರಿ-ಆಗುಂಬೆ ನಡುವಿನ ರಾಜ್ಯ ಹೆದ್ದಾರಿ ಸಂಪೂರ್ಣ ಕುಸಿದು ಸಂಪರ್ಕ ಕಡಿತಗೊಂಡಿದ್ದು ಈ ಕೆಳಗಿನ ಬದಲಿ ಮಾರ್ಗಗಳ ಮೂಲಕ ವಾಹನ ಸವಾರರು ಸಂಚಾರ ನಡೆಸಬಹುದಾಗಿದೆ.
ಶೃಂಗೇರಿ-ಕಾವಡಿ-ಬಿಲಗದ್ದೆ-ಶಾನುವಳ್ಳಿ-ಬೇಗಾರು-ಉಡುಪಿ (ಲಘು ವಾಹನಗಳು)
ಶೃಂಗೇರಿ-ಕೆಲ್ಲಾರ್(ಕಿಗ್ಗಾ)-ಮೀಗಾ-ನಲ್ಲೂರು-ಬೇಗಾರು-ಆಗುಂಬೆ-ಉಡುಪಿ (ಲಘು ವಾಹನಗಳು)
ಶೃಂಗೇರಿ-ಹರಿಹರಪುರ-ಬೇಗಾರು-ಆಗುಂಬೆ-ಉಡುಪಿ(ಲಘು ಹಾಗೂ ಭಾರೀ ವಾಹನಗಳು)
ಶೃಂಗೇರಿ-ನೆಮ್ಮಾರು-ಕಾರ್ಕಳ-ಉಡುಪಿ (ಲಘು ಹಾಗೂ ಭಾರೀ ವಾಹನಗಳು)
ತಾತ್ಕಾಲಿಕವಾಗಿ ನಡೆದ ಬಾಕುರ್ಡಿ ರಸ್ತೆ ದುರಸ್ತಿ ಕಾರ್ಯ :
ಶೃಂಗೇರಿ- ಕೂತುಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವೈಕುಂಠಪುರ - ಗುಂಡಗದ್ದೆಮಕ್ಕಿ ಸಂಪರ್ಕ ರಸ್ತೆಯು ಪ್ರಕೃತಿ ವಿಕೋಪದಿಂದ ಹಾನಿಯಾಗಿತ್ತು. ಈ ಸಂಬಂಧ ಸ್ಥಳೀಯರು ಪ್ರತಿಭಟನೆ ನಡೆಸಿ ದುರಸ್ಥಿಗಾಗಿ ಆಗ್ರಹಿಸಿದ್ದರು ಈ ಬಳಿಕದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದರು .ಅಂತೆಯೇ ರಸ್ತೆಯನ್ನು ಜನಸಾಮಾನ್ಯರು ಓಡಾಡಲು ತಾತ್ಕಾಲಿಕವಾಗಿ ದುರಸ್ಥಿಗೊಳಿಸಿಕೊಡುವ ಭರವಸೆಯನ್ನು ಶಾಸಕರು ಹಾಗೂ ತಹಸೀಲ್ದಾರ್ ಗೌರಮ್ಮ ಸಹ ನೀಡಿದ್ದರು. ಇಂದು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿದ್ದು ಜನರ ಸಂಚಾರಕ್ಕೆ ಇದರಿಂದಾಗಿ ಅನುಕೂಲ ಉಂಟಾಗಿದೆ.
ಭಾರೀ ಮಳೆಗೆ ಮೂಡಿಗೆರೆಯಲ್ಲಿ ಸಂಭವಿಸಿದ ಮನೆ ಕುಸಿತ :
ಮೂಡಿಗೆರೆ ಕೊಟ್ಟಿಗೆಹಾರಾದಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೊಟ್ಟಿಗೆಹಾರದ ತರುವೆ ಗ್ರಾಮದ ನಾರಾಯಣಮ್ಮ ಎಂಬುವವರ ಮನೆ ಮಳೆಯಿಂದಾಗಿ ಕುಸಿತಗೊಂಡಿದೆ, ಗ್ರಾಮದ ಕೃಷಿಕರಾದ ಟಿ.ಕೆ. ಅರವಿಂದ ಅವರ ತೋಟದಲ್ಲಿ ಮರಗಳು ಗಾಳಿಮಳೆಗೆ ಮುರಿದು ಬಿದ್ದು ಭಾರೀ ಪ್ರಮಾಣದ ಹಾನಿಯಾಗಿದೆ. ತರುವೆ ಅಜಾದ್ ನಗರದ ಯಮುನಾ ಎಂಬವರ ಮಹಿಳೆಯ ಮನೆಯ ಮೇಲ್ಛಾವಣಿಯ ಹೆಂಚುಗಳು ಹಾರಿಹೋಗಿದ್ದು ಮನೆಗೆ ಹಾನಿಯುಂಟಾಗಿದೆ. ಇಲ್ಲಿನ ರಾಮನಗರದಲ್ಲಿ ದೇವಮ್ಮ ಮಂಜಯ್ಯ ಅವರ ಮನೆ ಮಳೆಗೆ ನೆಲಸಮವಾಗಿದೆ. ಬಣಕಲ್‍ನ ಹೆಬ್ಬರಿಗೆಯ ಮಂಜುನಾಥ್ ಅವರ ಮನೆ ಕುಸಿತವಾಗಿದೆ. ಈ ಗ್ರಾಮದಲ್ಲಿ ಎರಡು ಮನೆಗಳು ಕುಸಿತಗೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಬಣಕಲ್ ನ ಕೆಂಬಲ್ ಮಠದಲ್ಲಿ ಬೋಬು ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ, ಬಕ್ಕಿ ಗ್ರಾಮದ ನೇತ್ರ ಅವರಿಗೆ ಸೇರಿದ ಮನೆಯ ಗೋಡೆ ಗಾಳಿಮಳೆಗೆ ಕುಸಿದಿದೆ. ಬಿನ್ನಡಿ ಗ್ರಾಮದ ಅಶೋಕ್ ಎಂಬುವವರ ಶೆಡ್ ಸುರಿದ ಗಾಳಿ ಮಳೆಗೆ ಹಾರಿ ಹೋಗಿದೆ. ಈ ರೀತಿಯ ಅನೇಕ ಅವಾಂತರಗಳು ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿದ್ದು, ಜನರು ಮಳೆಯಿಂದ ತತ್ತರಿಸಿಹೋಗಿದ್ದಾರೆ.
ಶಿವಮೊಗ್ಗ
ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ :
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸರ್ಕಾರದವರು ಮಲೆನಾಡ ಜನರಿಗೆ ಮಾರಕವಾಗುವ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವುದಿಲ್ಲ ಆ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಿಲ್ಲ ಎಂಬ ಮಾತು ಕೊಟ್ಟಿದ್ದರು. ಆದರೆ, ಈಗ ಆ ಮಾತು ಸುಳ್ಳಾಗಿದ್ದು, ಇತ್ತೀಚೆಗಷ್ಟೇ ಕೇಂದ್ರದ ಅರಣ್ಯ ಸಚಿವರು ಮಲೆನಾಡಿನ ಸುಮಾರು 10 ಜಿಲ್ಲೆಗಳನ್ನೊಳಗೊಂಡ 26 ಸಾವಿರಕ್ಕೂ ಹೆಚ್ಚು ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಿದೆ ಇದು ಮಲೆನಾಡಿಗರಿಗೆ ಮಾರಕವಾಗಿದೆ ಎಂದು ಅಡಿಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಜನರಿಗೆ ಈ ಕುರಿತು ಅರಿವು ಮೂಡಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಎಚ್ಚರಿಕೆಯನ್ನು ಸಮಿತಿ ನೀಡಿದೆ.
ಕೊಡಗು
ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ :
ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ದೊಡ್ಡ ದೊಡ್ಡ ಅನಾಹುತಗಳು ಜಿಲ್ಲೆಯಲ್ಲಿ ಸಂಭವಿಸಿದೆ. ಹಲವು ಗ್ರಾಮಗಳ ಜನತೆಗೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವುಂಟಾಗಿದೆ ಎಂದು ಜನರು ತಮಗಾದ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ 10.10ರ ಸುಮಾರಿಗೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗ್ರಾಮಗಳಾದ ಚೆಂಬು, ಪೆರಾಜೆ, ಗೂನಡ್ಕ ವ್ಯಾಪ್ತಿಯ ಜನರಿಗೆ ಭೂಕಂಪನದ ಅನುಭವವಾಗಿದೆ. ಭಯ ಹಾಗೂ ಆತಂಕದಿಂದ ಜನರು ಮನೆಗಳಿಂದ ಹೊರಭಾಗಕ್ಕೆ ಓಡಿಬಂದಿದ್ದಾರೆ ಎನ್ನಲಾಗಿದೆ. ಕೊಡಗು ಜಿಲ್ಲೆಯ ಗಡಿಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಹಾಗೂ ಕೊಡಗು ಜಿಲ್ಲೆ ಮಡಿಕೇರಿ ಪ್ರದೇಶದ ಹಲವೆಡೆ ಕಳೆದ ಭಾನುವಾರವಷ್ಟೇ ಭೂಮಿ ಕಂಪಿಸಿತ್ತು. ಬೆಳಗ್ಗೆ 6.22ಕ್ಕೆ ಸಂಭವಿಸಿದ ಲಘು ಭೂಕಂಪದ ಕೇಂದ್ರ ಸುಳ್ಯ ತಾಲೂಕಿನ ಅರಂತೋಡು ಆಗಿತ್ತು. ಆ ಬಳಿಕವೂ ಕೂಡ ಧಾರಾಕಾರವಾಗಿ ಎಡಬಿಡದೆ ಮಳೆ ಸುರಿಯುತ್ತಿರುವ ಕಾರಣ ಕೆಲವೆಡೆಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ರಸ್ತೆ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗಿದೆ. ಕಲ್ಲುಗುಂಡಿ ಮಠದಮೂಲೆ ಸಮೀಪ ತಾಜುದ್ದೀನ್ ಟರ್ಲಿ ಅವರ ಮನೆಯ ಹಿಂಬದಿ ಭೂಕಂಪನದ ಸಮಯದಲ್ಲಿ ಭೂಮಿ ಬಿರುಕು ಬಿಟ್ಟಿದ್ದು ಬರೆ ಕುಸಿದಿದೆ. ಮನೆಯ ಮೇಲೆ ಬರೆ ಕುಸಿದು ಬೀಳುವ ಆತಂಕದಲ್ಲಿದೆ. ಕೊಡಗಿನ ಗಡಿ ಗ್ರಾಮ ಚೆಂಬುವಿನ ಸುತ್ತಮುತ್ತ ಪ್ರದೇಶಗಳಲ್ಲಿ ಭೂಮಿ ಕಂಪಿಸಿರುವ ಅನುಭವ ಉಂಟಾಗಿದೆ. ಶನಿವಾರ ರಾತ್ರಿ ಭೂಮಿಯಿಂದ ಜೋರು ಶಬ್ದ ಕೇಳಿ ಬಂದಿತ್ತೆಂದು ಗ್ರಾಮಸ್ಥರು ಮಾಹಿತಿ ನೀಡಿದ್ದು, ಕಳೆದ ಭಾನುವಾರ ಬೆಳಗ್ಗೆ ಮತ್ತೆ ಜೋರಾದ ಶಬ್ದದೊಂದಿಗೆ ಭೂಕಂಪ ಸಂಭವಿಸಿತ್ತು. ಗೂನಡ್ಕ, ಕೊಯಿನಾಡಿನಲ್ಲೂ ಭೂಕಂಪದ ಅನುಭವವಾಗಿತ್ತು. ಕೊಡಗು ಜಿಲ್ಲೆ ಪ್ರವಾಸ ಮಾಡಿ ಪರಿಹಾರದ ಕುರಿತಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಭಾರಿ ಮಳೆಯಿಂದ ಭೂಕುಸಿತ ಮತ್ತು ಭೂಕಂಪನ ಸಂಭವಿಸಿರುವ ಕೊಡಗು ಜಿಲ್ಲೆಯಲ್ಲಿ 4 ಸಂಸ್ಥೆಗಳಿಂದ ಅಧ್ಯಯನ ನಡೆಸಲಾಗುವುದು ಎಂದು ಹೇಳಿದ್ದರು. ಈ ಬಾರಿ ಮಳೆಯು ಭೀಕರವಾದ ಅವಾಂತರಗಳನ್ನು ಸೃಷ್ಟಿಸುತ್ತಿದ್ದು ಮಳೆಯ ತೀವ್ರತೆಗೆ ಭಾರೀ ಪ್ರಮಾಣದ ನಷ್ಟ ಕೊಡಗಿಗೆ ಸಂಭವಿಸಿದೆ. ಪರಿಹಾರ ಹಾಗೂ ರಕ್ಷಣಾ ಕಾರ್ಯದಲ್ಲಿ ಅಧಿಕಾರಿಗಳು ಹಾಗೂ ವಿಪತ್ತು ನಿರ್ವಹಣಾ ತಂಡಗಳ ಸದಸ್ಯರು ತೊಡಗಿದ್ದಾರೆ.


0 Comments