ಚಿಕ್ಕಮಗಳೂರು

ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಲೆನಾಡು ಜಿಲ್ಲೆಗಳು ಬಂದ್

ಚಿಕ್ಕಮಗಳೂರು: ಕಸ್ತೂರಿರಂಗನ್ ವರದಿ ವಿರೋಧಿಸಿ ಇದೇ 27 ರಂದು ಹಾಸನ, 28 ರಂದು ಕೊಡಗು, 29 ರಂದು ಚಿಕ್ಕಮಗಳೂರು ಬಂದ್‌ ಮಾಡಿ ಸರ್ಕಾರದ ಗಮನ ಸೆಳೆಯಲು ವಿವಿಧ ಸಂಘಟನೆಗಳು ತೀರ್ಮಾನಿಸಿವೆ.

ಚಿಕ್ಕಮಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಪ್ರತಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಕೇಂದ್ರ ಪರಿಸರ ಇಲಾಖೆಗೆ ಮನವಿ ಸಲ್ಲಿಸಬೇಕು. ಈಗಾಗಲೇ ಜಿಲ್ಲಾಯಲ್ಲಿ ಡೀಮ್ಡ ಅರಣ್ಯಕ್ಕೆ ಸಂಬಂಧಿಸಿದಂತೆ ನಡೆದಿರುವ ಹೋರಾಟವನ್ನು ವಿವರಿಸಿ ಕಸ್ತೂರಿರಂಗನ್ ವರದಿ ಬೇಡ ಎನ್ನುವುದಕ್ಕಿಂತ ಏಕೆ ವಿರೋಧಿಸ ಲಾಗುತ್ತಿದೆ ಎಂಬುದರ ವಾಸ್ತವಿಕಾಂಶವನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಮುಖಂಡ ವಿಜಯ ಕುಮಾರ್ ತಿಳಿಸಿದ್ದಾರೆ.

ಭೀಕರ ಮಳೆಗೆ ಕಾಫಿನಾಡು ತತ್ತರ; ಕುಸಿದ ಮನೆ

ಚಿಕ್ಕಮಗಳೂರು: ಭಾರೀ ಮಳೆಗೆ ಮಲೆನಾಡು ತ್ತರಿಸಿದೆ. ಮಳೆ ನಿಂತಿದ್ದರೂ ಅವಾಂತರಗಳು ಮಾತ್ರ ತಪ್ಪಿಲ್ಲ. ಚಿಕ್ಕಮಗಳೂರಿನ ಮಲ್ಲಂದೂರಿನಲ್ಲಿ ಸಹದೇವ್ ಎನ್ನುವವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಏನೂ ಅಪಾಯವಾಗಿಲ್ಲ. 

ಭಾರೀ ಮಳೆಗೆ ಇತ್ತೀಚಿಗೆ ನಿರ್ಮಿಸಿದ್ದ ತಡೆಗೋಡೆ ಕುಸಿದು ಬಿದ್ದಿದೆ. ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿ ಬಳಿ ದೊಡ್ಡ ಹೊಂಡವೊಂದು ಬಿದ್ದಿದೆ. ಚಾರ್ಮಾಡಿ ಘಾಟ್‌ಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 2 ತಿಂಗಳ ಹಿಂದೆ ರಸ್ತೆ ಅಗಲೀಕರಣ ಮಾಡಲಾಗಿತ್ತು. ಕಳೆಪೆ ಕಾಮಗಾರಿಗೆ ಇದು ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೆಲೆ ಏರಿಗೆ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ವಿಫಲ; ಆಮ್ ಆದ್ಮಿ ಆರೋಪ

ಚಿಕ್ಕಮಗಳೂರು: ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್‌ ವೃತ್ತದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರವು ತೆರಿಗೆ ಹೆಸರಿನಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡಿದೆ. ಸರ್ಕಾರವು ತೆರಿಗೆ ಹೆಸರಿನಲ್ಲಿ ಜನಸಾಮಾನ್ಯರಿಗೆ ಹೊರೆ ಹೇರುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಜಿಎಸ್‌ಟಿ ವಿಧಿಸಿದರೂ ಆಶ್ಚರ್ಯಪಡಬೇಕಿಲ್ಲ. ಸರ್ಕಾರ ಕೂಡಲೇ ಜಿಎಸ್‌ಟಿ ಬೆಲೆ ರದ್ದುಗೊಳಿಸಬೇಕು, ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮೂಡಿಗೆರೆ: ಹೊಸ ಅಭ್ಯರ್ಥಿಗೆ ಟಿಕೆಟ್ ಕೊಡಲು ಒತ್ತಾಯ

ಮೂಡಿಗೆರೆ: ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರಿಗೆ ವಿಧಾನಪರಿಷತ್‍ಗೆ ಅವಕಾಶ ಕಲ್ಪಿಸಬೇಕೆಂದು ವರಿಷ್ಠರನ್ನು ಕೋರುವ ನಿರ್ಣಯವನ್ನು ಜಾತ್ಯತೀತ ಜನತಾದಳದ ಅಂಬ್ಳೆಹೋಬಳಿ ಘಟಕದ ಮುಖಂಡರು ನಡೆಸಿದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ.

ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮುಖಂಡರು ಈ ಬಾರಿ ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಬದಲಿಸಿ ಹೊಸ ಮುಖಕ್ಕೆ ಅವಕಾಶ ಕಲ್ಪಿಸಿ ಜೆಡಿಎಸ್ ಗೆಲುವಿಗೆ ಶ್ರಮಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಶಿವಮೊಗ್ಗ

ರೌಡಿಶೀಟರ್ ಹಂದಿ ಅಣ್ಣಿ ಹತ್ಯೆ ಆರೋಪಿಗಳು ಜುಲೈ 27ರ ವರೆಗೆ ಪೊಲೀಸ್ ಕಸ್ಟಡಿಗೆ

ಶಿವಮೊಗ್ಗ: ಹಂದಿ ಅಣ್ಣಿಯನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು ಪೊಲೀಸರಿಗೆ ಶರಣಾಗಿದ್ದರು. ಇದೀಗ ಶಿವಮೊಗ್ಗ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಜುಲೈ 27ರ ವರೆಗೆ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯನ್ನು ನಡುಗಿಸಿದ್ದ ಹಂದಿ ಅಣ್ಣಿ ಹತ್ಯೆ ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆದರೆ ಸೋಮವಾರ ಚಿಕ್ಕಮಗಳೂರು ಪೊಲೀಸರಿಗೆ ಶರಣಾಗಿದ್ದರು. ಮಧ್ಯ​ರಾ​ತ್ರಿಯೇ ಜಿಲ್ಲಾ ಪೊಲೀಸ್‌ ಕಚೇರಿಗೆ ಬಂದ 8 ಮಂದಿ ಆರೋಪಿಗಳು ಶರಣಾಗಿದ್ದರು.

ಹಳ್ಳದಲ್ಲಿ ಜಾರಿಬಿದ್ದು ಸಾವನ್ನಪ್ಪಿದ ಮಹಿಳೆ ಕುಟುಂಬಕ್ಕೆ 5 ಲಕ್ಷ ಪರಿಹಾರ

ತೀರ್ಥಹಳ್ಳಿ: ಹಳ್ಳದಲ್ಲಿ ಜಾರಿ ಬಿದ್ದು ಮೃತಪಟ್ಟ ಮಹಿಳೆಯ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಳಗೋಡು ಗ್ರಾಮದ ಭವಾನಿ ಶಂಕರನಾರಾಯಣ ಎಂಬುವರು ಸೋಮವಾರ ತಮ್ಮ ತೋಟಕ್ಕೆ ಹೋದಾಗ ಆಕಸ್ಮಿಕವಾಗಿ ತೋಟದ ಪಕ್ಕದ ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ್ದರು.

ಬೆಳಗ್ಗೆ ತೋಟಕ್ಕೆ ಹೋದವರು ವಾಪಸಾಗದೇ ಇದ್ದಾಗ ಹುಡುಕಾಟ ನಡೆಸಿದಾಗ ಹಳ್ಳದಲ್ಲಿ ಅವರು ಶವವಾಗಿ ಪತ್ತೆಯಾಗಿದ್ದರು. ಮಹಿಳೆ ಮಳೆಯಿಂದ ಸಾವನ್ನಪ್ಪಿರುವ ಬಗ್ಗೆ ತಾಲೂಕು ಆಡಳಿತ ವರದಿ ಮಾಡಿತ್ತು ಇದರ ಅನ್ವಯ ಇಂದು ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಚೆಕ್ ವಿತರಿಸಿದರು.

ಕೊಡಗು 

ಭೂಕುಸಿತ ಪ್ರದೇಶಕ್ಕೆ ಶಾಸಕ ಕೆ. ಜಿ ಬೋಪಯ್ಯ ಭೇಟಿ, ಪರಿಶೀಲನೆ

ಮಡಿಕೇರಿ : ತಾಳತ್ತಮನೆ ಮಾರ್ಗದಲ್ಲಿ ಬಿರುಕು ಬಿಟ್ಟಿರುವ ರಸ್ತೆಯನ್ನು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಮತ್ತು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಂಗಳವಾರ ಪರಿಶೀಲಿಸಿದರು.

ರಾಮಕೊಲ್ಲಿ ಸೇತುವೆ ವಿಸ್ತಾರವಾದ ಸೇತುವೆಯಾಗಿದ್ದು, ಬರೆಜರಿತದಿಂದ ಸೇತುವೆಯ ಅರ್ಧ ಭಾಗ ಹಾನಿಯಾಗಿದೆ. ಬರೆಜರಿತಕ್ಕೆ ವೈಜ್ಞಾನಿಕವಾಗಿ ನಿಜವಾದ ಕಾರಣ ಪತ್ತೆ ಹಚ್ಚಬೇಕಾಗಿದೆ. ಈ ಭಾಗದ ಮನೆಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಮುಂಜಾಗೃತ ಕ್ರಮವಾಗಿ ಇಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ಕಾಟಕೇರಿಯ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಮಾಡಲು ಸೂಚಿಸಲಾಗಿದೆ. ಈ ಭಾಗದ ಜನರು ಕೂಲಿ ಕೆಲಸ ಮಾಡುವವರಾಗಿದ್ದು, ಅವರಿಗೆ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ನೀಡಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.

ರಾಮನಳ್ಳಿ ಬೆಟ್ಟದಲ್ಲಿ ಭೋರ್ಗರೆದ ಮಣ್ಣು ಮಿಶ್ರಿತ ನೀರು, ಸ್ಥಳೀಯರಲ್ಲಿ ಆತಂಕ

ಕೊಡಗು: ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆ ಮುಂದುವರೆದಿದ್ದು, ವರುಣಾರ್ಭಟಕ್ಕೆ ರಾಮಹಳ್ಳಿ ಬೆಟ್ಟದಲ್ಲಿ ಬಾರೀ ಪ್ರಮಾಣದಲ್ಲಿ ನೀರು ಉಕ್ಕಿ ಹರಿದಿದೆ. ಬೆಟ್ಟದಿಂದ ಭಾರಿ ಮಣ್ಣುಮಿಶ್ರಿತ ನೀರು ಪ್ರವಾಹದಂತೆ ಬೋರ್ಗರೆದು ಬರುತ್ತಿದೆ. ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ನಿನ್ನೆಯಷ್ಟೇ ಭಯಂಕರ ಶಬ್ಧದೊಂದಿಗೆ ಭೂಕುಸಿತವುಂಟಾಗಿದೆ.

ಭೂಕುಸಿತಕ್ಕೆ ಸುಮಾರು 5 ಎಕರೆಯಷ್ಟು ಭೂಮಿ ಕೊಚ್ಚಿ ಹೋಗಿತ್ತು. ಇದೀಗ ಮಣ್ಣಂಗೇರಿ ಗ್ರಾಮದಲ್ಲಿ ಜಲಸ್ಫೋಟವಾಗಿದೆ. ಮಣ್ಣಂಗೇರಿ ಗ್ರಾಮದ ರಾಮಹಳ್ಳ ಬೆಟ್ಟದಲ್ಲಿ ಭಾರಿ ಮಳೆಗೆ ಜಲಸ್ಫೋಟವಾಗಿದ್ದು, ಬೃಹತ್ ಬೆಟ್ಟದಲ್ಲಿ ಬಿರುಕು ಬಿಟ್ಟಿದೆ. ಬೆಟ್ಟದಿಂದ ಮಣ್ಣು ಮಿಶ್ರಿತ ನೀರು ಬೋರ್ಗರೆದು ಹರಿಯುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮದಲ್ಲಿ 30 ಕುಟುಂಬಗಳು ವಾಸವಾಗಿದ್ದು, ಜೀವ ಭಯದಲ್ಲಿ ಕಾಲಕಳೆಯುತ್ತಿದ್ದಾರೆ. 2018ರಲ್ಲಿಯೂ ರಾಮಹಳ್ಳ ಬೆಟ್ಟದಲ್ಲಿ ಜಲಸ್ಫೋಟವುಂಟಾಗಿತ್ತು.

ಹಾಸನ

ತಂದೆಯ ತಿಥಿ ಕಾರ್ಯಕ್ಕೆ ಹೋಗುತ್ತಿದ್ದಾತ ಮಸಣಕ್ಕೆ, ಕುಟುಂಬದಲ್ಲಿ ನೀರವ ಮೌನ

ಹಾಸನ: ತಂದೆಯ ತಿಥಿ ಕಾರ್ಯಕ್ಕೆ ಹೇಳಲು ಹೋಗುತ್ತಿದ್ದ ಮಗ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಆಂದಲೆಯಲ್ಲಿ ನಡೆದಿದೆ. ಬೈಕ್ ಗೆ ಹಿಂಬದಿಯಿಂದ ಇನೋವಾ ಕಾರು ಡಿಕ್ಕಿಯಾದ ಪರಿಣಾಮದಿಂದಾಗಿ ಬೈಕ್ ನಲ್ಲಿದ್ದ ಬೇಲೂರು ತಾಲ್ಲೂಕು ವೀರಾಪುರ ಗ್ರಾಮದ ಪ್ರದೀಪ್(27), ಚಿಕ್ಕಮಗಳೂರು ಸಮೀಪದ ಸಿರುವಾಸೆ ಗ್ರಾಮದ ಮೂರ್ತಿ (32), ಸಾವನ್ನಪ್ಪಿನಡೆದಿದ್ದಾರೆ. ವೀರಾಪುರದ ಪ್ರದೀಪ್ ನ ತಂದೆ ಒಂದು ವಾರದ ಹಿಂದೆ ಮರಣ ಹೊಂದಿದ್ದರು. ತಂದೆಯ ತಿಥಿ ಕಾರ್ಯಕ್ಕೆ ಹೇಳಲು ಕಲ್ಯಾಣಪುರಕ್ಕೆ ಬರುತ್ತಿದ್ದಾಗ ಅಪಘಾತ ನಡೆದಿದೆ.