ಚಿಕ್ಕಮಗಳೂರು : 

ರಾಡಿನಿಂದ ಹಲ್ಲೆ ಮಾಡಿ ತಾಯಿಯನ್ನೇ ಕೊಂದ ನೀಚ ಪುತ್ರ 

ಹಣಕ್ಕಾಗಿ ಸ್ವಂತ ತಾಯಿಯನ್ನು ಮಗ ಹತ್ಯೆ ಮಾಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹಚ್ಚಡ ಮನೆ ನಿವಾಸಿ ಬಸವರಾಜು ತನ್ನ ತಾಯಿ ಲತಾ ಅವರ ಮೇಲೆ ಹಣಕ್ಕಾಗಿ ರಾಡಿನಿಂದ ಹಲ್ಲೆ ಮಾಡಿ ಅವರನ್ನು ಕೊಂದು, ಬಳಿಕ ಡೀಸೆಲ್ ಸುರಿದು ಅರ್ಧ ಸುಟ್ಟು ಹಾಕಿದ್ದಾನೆ. ಬೆಂಕಿ ತಗುಲಿ ಅವರು ಸತ್ತರೆಂದು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆತನು ಪ್ರಸ್ತುತ ಪೊಲೀಸರ ಅತಿಥಿಯಾಗಿದ್ದಾನೆ. ಸಂಬಂಧಿಕರ ಮನೆಯಲ್ಲಿದ್ದ ಆತನನ್ನು ಬಂಧಿಸಿರುವ ಪೊಲೀಸರು ಆತನಿಗೆ ಸಹಕಾರ ನೀಡಿರುವವರ ಮೇಲೂ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಬಿಜೆಪಿ ವಿರುದ್ಧ ಗಾಯತ್ರಿ ಶಾಂತೇಗೌಡ ಕಿಡಿ :

ಕೇಂದ್ರ ಸರ್ಕಾರ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು ಇ.ಡಿ ಅಧಿಕಾರಿಗಳನ್ನು ಅವರ ಹಿಂದೆ ಬಿಟ್ಟು ಬೆದರಿಸುವ ಹುನ್ನಾರವನ್ನು ಮಾಡುತ್ತಿದ್ದಾರೆ, ರಾಜಕೀಯ ದುರುದ್ದೇಶದಿಂದ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಇದರಿಂದ ಬಿಜೆಪಿ ಹಿಂದೆ ಸರಿಯಬೇಕು ಎಂದರು. ಚಿಕ್ಕಮಗಳೂರಿನಲ್ಲಿ ಆಯೋಜಿಸಿದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು ಇಡೀ ಕಾಂಗ್ರೆಸ್ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರೊಂದಿಗಿದೆ ಎಂದರು. 

ಜಾನುವಾರುಗಳನ್ನು ಹತ್ಯೆ ಮಾಡುವ ಕಸಾಯಿ ಖಾನೆಗಳಿಗೆ ಮುಟ್ಟುಗೋಲು : 

ಚಿಕ್ಕಮಗಳೂರು ನಗರದಲ್ಲಿ ಅಕ್ರಮವಾಗಿ ಹಲವಾರು ಕಸಾಯಿಖಾನೆಗಳು ತಲೆಯೆತ್ತಿದ್ದು ಗೋವುಗಳ ವಧೆಯನ್ನು ಮುಂದುವರಿಸಿದ್ದೆ ಆದಲ್ಲಿ ಅಂತಹ ಕಸಾಯಿ ಕಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು. ಅಕ್ರಮವಾಗಿ ನಿರ್ಮಿಸಿರುವ ಕಸಾಯಿ ಖಾನೆಗಳನ್ನು ಈಗಾಗಲೇ ತೆರವು ಮಾಡಿಸಿದ್ದು ಮುಂಬರುವ ದಿನಗಳಲ್ಲಿ ಇಂಥಹುದೇ ಕಾರ್ಯಗಳು ಮುಂದುವರೆದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಹಿಟ್ ಅಂಡ್ ರನ್ ಕೇಸ್ ; ಓರ್ವ ವ್ಯಕ್ತಿಯ ದುರ್ಮರಣ

ಶೃಂಗೇರಿಯ ಹೊರವಲಯವಾದ ಶಿಡ್ಲೆ ಸಮೀಪ ಕಾರೊಂದರಲ್ಲಿ ಬಂದು ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರಿಗೆ ಗುದ್ದಿದ ಪರಿಣಾಮ ಓರ್ವ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗಿದೆ. ಅಜಾಗರೂಕತೆಯಿಂದ ಕಾರನ್ನು ಚಾಲನೆ ಮಾಡಿದ ವ್ಯಕ್ತಿ ಬೈಕ್ ಸವಾರರಿಗೆ ಗುದ್ದಿ ಸ್ಥಳದಿಂದ ಕಾರನ್ನು ತೆಗೆದುಕೊಂಡು ಬಂದು ಶೃಂಗೇರಿಯ ಸಂತೆ ಮಾರ್ಕೆಟ್ ಸಮೀಪ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದ ತೀವ್ರತೆಗೆ ಓರ್ವ ವ್ಯಕ್ತಿ ಕೊನೆ ಯುಸಿರೆಳೆದಿದ್ದಾರೆ, ಇನ್ನೋರ್ವರ ಸ್ಥಿತಿ ಗಂಭೀರವಾಗಿದ್ದು ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೃಂಗೇರಿಯ ಬೇಸೂರಿನ ಶೇಖರ್ ಎಂಬುವವರು ಈ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. 


ಹಾಸನ : 

ಕಾರು ಹಾಗೂ ಬೈಕಿನ ನಡುವೆ ಭೀಕರ ರಸ್ತೆ ಅಪಘಾತ 

ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಪುಟ್ಟಸ್ವಾಮಿ ಗೌಡ ಮೃತಪಟ್ಟಿದ್ದಾರೆ. ದೇಹದ ಭಾಗಗಳಿಗೆ ಹಾಗೂ ತಲೆಗೆ ಗಂಭೀರ ಗಾಯಕ್ಕೊಳಗಾಗಿದ್ದ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಹಾಸನದ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮದ್ಯ ಮಾರಾಟಗಾರನ ಬಂಧನ

ಹಾಸನದ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ 70 ವರ್ಷ ಪ್ರಾಯದ ವ್ಯಕ್ತಿಯನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ. ಮದ್ಯ ಮಾರಾಟದ ಕುರಿತು ಖಚಿತವಾಗಿ ಮಾಹಿತಿಯನ್ನು ಪಡೆದ ಪೊಲೀಸರು ಕೂಡಲೇ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ಅನಂತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು 3864 ರೂಪಾಯಿ ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ರಾಜಕೀಯದಲ್ಲಿರಬೇಕು : ಹೆಚ್.ಡಿ ರೇವಣ್ಣ 

ರಾಜ್ಯಕ್ಕೆ ತಮ್ಮದೇ ಶೈಲಿಯಲ್ಲಿ ಅಪಾರವಾದ ಕೊಡುಗೆಯನ್ನು ನೀಡಿರುವ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ರಾಜಕೀಯ ನಿವೃತ್ತಿಯ ಕುರಿತಾಗಿ ಮಾತನಾಡಬಾರದು ಅವರ ಮಾರ್ಗದರ್ಶನದಲ್ಲಿ ರಾಜಕೀಯ ನಡೆಯಬೇಕು ಎಂದು ಮಾಜಿ ಮಂತ್ರಿಗಳಾದ ಎಚ್.ಡಿ ರೇವಣ್ಣ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರೈತ ಪರವಾದ ಹೋರಾಟಗಳನ್ನು ನಡೆಸಿಕೊಂಡು ಬಂದು ಎಲ್ಲಾ ಆಯಾಮಗಳಲ್ಲೂ ಅನುಭವ ಹೊಂದಿರುವ ಅವರು ರಾಜಕೀಯಕ್ಕೆ ನಿವೃತ್ತಿ ಹೊಂದುವುದರ ಕುರಿತು ಯೋಚಿಸದೆ ಮಾರ್ಗದರ್ಶನ ನೀಡಬೇಕು ಎಂದರು.


ಶಿವಮೊಗ್ಗ :

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಾಧ್ಯಾಪಕ ಅಮಾನತು

ವೈದ್ಯಕೀಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್) ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಶ್ವಿನ್ ಹೆಬ್ಬಾರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶಿಸಿದೆ. ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಪ್ರಕರಣವನ್ನು ಸಿಮ್ಸ್ ಆಡಳಿತ ಮುಚ್ಚಿ ಹಾಕುತ್ತಿದೆ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಸದಸ್ಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಸಿಮ್ಸ್‌ ಕ್ಯಾಂಪಸ್‌ಗೆ ತೆರಳಿ ಸಂತ್ರಸ್ತೆಯನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದರು ನಂತರದಲ್ಲಿ ಸಹ ಪ್ರಾಧ್ಯಾಪಕನನ್ನು ಅಮಾನತುಗೊಳಿಸಿದ್ದಾರೆ ಹಾಗೂ ವಿದ್ಯಾರ್ಥಿನಿಗೆ ಧೈರ್ಯ ತುಂಬಿದ್ದಾರೆ.