ಚಿಕ್ಕಮಗಳೂರು :
ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ - SDPI ಯಿಂದ ದೂರು :
ಚಿಕ್ಕಮಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತನಾದ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್,l ಬಜರಂಗದಳದ ವತಿಯಿಂದ ಮೂಡಿಗೆರೆಯ ಹಿರೆಬೈಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಗಿರೀಶ್ ಹೆಮ್ಮಕ್ಕಿ ಎನ್ನುವವರು ಮೀನು ಮಾರಾಟಗಾರರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೋಮುಭಾವನೆ ಕೆರಳಿಸಿ, ಕೋಮು ಗಲಭೆಗೆ ಪ್ರಚೋದಿಸುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ಹಾಗೂ ಇದನ್ನು ವಿರೋಧಿಸಿ ಪ್ರತಿಭಟನೆಯ ಆಯೋಜಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ SDPI ಮೂಡಿಗೆರೆಯ ಪ್ರಧಾನ ಕಾರ್ಯದರ್ಶಿ ಶರೀಫ್ ಎಂ.ಯು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ.
ಪ್ರವೀಣ್ ನೆಟ್ಟಾರ್ ಹತ್ಯೆಗೆ ಖಂಡನೆ ವ್ಯಕ್ತಪಡಿಸಿದ ಹಿಂದೂ ಬ್ರಿಗೇಡ್ :
ದಕ್ಷಿಣ ಕನ್ನಡದಲ್ಲಿ ನಡೆದ ಪ್ರವೀಣ್ ನೆಟ್ಟಾರ್ ಹತ್ಯೆಗೆ ಈಗಿನ ಸರ್ಕಾರದ ಮಂತ್ರಿಗಳ ವೈಫಲ್ಯವೇ ಕಾರಣ, ದುರ್ಬಲ ಮುಖ್ಯಮಂತ್ರಿ ಹಾಗೂ ಗೃಹಸಚಿವರ ನಡೆಯಿಂದಾಗಿ ಹಾಗೂ ಇಸ್ಲಾಮಿಕ್ ಭಯೋತ್ಪಾದನೆಯಿಂದಾಗಿ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದೆ ಎಂದು ಬಾಳೇಹೊನ್ನೂರಿನಲ್ಲಿ ಹಿಂದೂ ಬ್ರಿಗೇಡ್ ಪದಾಧಿಕಾರಿ ಪ್ರವೀಣ್ ಖಾಂಡ್ಯ ಆಕ್ರೋಶ ಹೊರಹಾಕಿದರು. ಗೃಹಮಂತ್ರಿಗಳು ವೈಯುಕ್ತಿಕವಾಗಿ ಸಭ್ಯರಿದ್ದಾರೆ ಆದರೆ ಗೃಹಮಂತ್ರಿ ಖಾತೆಯನ್ನು ನಿಭಾಯಿಸುವ ಅರ್ಹತೆ ಹಾಗೂ ಯೋಗ್ಯತೆ ಅವರಿಗಿಲ್ಲ ಎಂದು ಹರಿಹಾಯ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆಗಳು ಸಂಭವಿಸಿದ್ದು ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮವಾಗಬೇಕು ಎಂದರು.
ಕಟ್ಟೆಚ್ಚರ ವಹಿಸಿದ ಚಿಕ್ಕಮಗಳೂರು ಪೊಲೀಸರು :
ಕರಾವಳಿಯಲ್ಲಿ ಸರಣಿ ಕೊಲೆ ಹಿನ್ನೆಲೆಯಲ್ಲಿ ಕಾಫಿನಾಡಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು ಪ್ರವಾಸಿಗರು, ಹೊರ ಜಿಲ್ಲೆಗಳ ವಾಹನಗಳ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ. ಹೋಂಸ್ಟೇ, ರೆಸಾರ್ಟ್ ಮಾಲೀಕರಿಗೆ ಆಗಮಿಸುವ ಪ್ರವಾಸಿಗರ ದಾಖಲಾತಿಗಳನ್ನ ಕಡ್ಡಾಯವಾಗಿ ಪಡೆಯುವಂತೆ ಖಡಕ್ ಸೂಚನೆ ನೀಡಿದ್ದಾರೆ. ಆಗಮಿಸುವ ಪ್ರತಿಯೊಬ್ಬರ ಚಲನ-ವಲನಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೂ ಎಸ್ಪಿ ಅಕ್ಷಯ್ ಹಾಕೆ ಆದೇಶ ಹೊರಡಿಸಿದ್ದಾರೆ.
ರಕ್ಷಣೆಗಾಗಿ ಗನ್ ಮ್ಯಾನ್ ನಿಯೋಜನೆ ಮಾಡುವಂತೆ ಕೋರಿದ ನಗರಸಭಾ ಸದಸ್ಯ :
ಚಿಕ್ಕಮಗಳೂರು : ರಾಜ್ಯದ ಕರಾವಳಿ ಭಾಗದಲ್ಲಿ ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಸದಸ್ಯ ಎ.ಸಿ.ಕುಮಾರ್ ತಮ್ಮಗೆ ಅಂಗರಕ್ಷಕನನ್ನು ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಕುರಿತಂತೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿರುವ ಅವರು, ನಗರಸಭೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿ, ಅಕ್ರಮಗಳನ್ನು ಬಯಲಿಗೆಳೆದಿದ್ದು, ಇದರಿಂದ ಈಗಾಗಲೇ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರು ನಗರಸಭೆ ಸಿಬ್ಬಂದಿಗಳನ್ನು ಪ್ರಚೋದಿಸಿ ನನ್ನ ವಿರುದ್ದ ದೂರು ನೀಡಿದ್ದಾರೆ. ಅಕ್ರಮ ಕಟ್ಟಡಗಳ ಬಗ್ಗೆ ಮಾಹಿತಿ ಹೊರಹಾಕಿದ್ದು, ಅಕ್ರಮ ಕಟ್ಟಡ ಮಾಲೀಕರನ್ನು ನನ್ನ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ನನ್ನ ಮನೆಯನ್ನು ಅಕ್ರಮವಾಗಿ ಕಟ್ಡಲಾಗಿದೆ ಎಂದು ಆಪಾದಿಸಿ ನೋಟಿಸ್ ಅಂಟಿಸಲಾಗಿದೆ. ಈ ಬೆಳವಣಿಗಳ ನಡುವೆ ರಾಜ್ಯದಲ್ಲಿ ಕೋಮುಸಂಘರ್ಷ, ಜಾತಿದ್ವೇಷ ಹಿನ್ನಲೆಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದ್ದು. ನಗರಸಭೆ ಅಕ್ರಮಗಳ ಬಗ್ಗೆ ಧ್ವನಿ ಎತ್ತಿರುವ ತಮ್ಮಗೆ ಪೊಲೀಸ್ ಇಲಾಖೆ ಅಂಗರಕ್ಷಕ ನನ್ನು ನೀಡಬೇಕೆಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಅವರನ್ನು ಮನವಿ ಮಾಡಿದ್ದಾರೆ.
ಶಿವಮೊಗ್ಗ :
ಮೀಸಲಿಟ್ಟ ಸ್ಮಶಾನ ಜಾಗವನ್ನು ತೆರವುಗೊಳಿಸಲು ಅಧಿಕಾರಿಗಳಿಂದ ಅಸಡ್ಡೆ ಸ್ಥಳೀಯರ ಆರೋಪ :
ಶಿವಮೊಗ್ಗದ ಸಂತೆಕಡೂರು ವ್ಯಾಪ್ತಿಯಲ್ಲಿ ಮೀಸಲಿಟ್ಟ ಸ್ಮಶಾನ ಜಾಗವನ್ನು ತೆರವುಗೊಳಿಸಲು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ಪಂಚಾಯತ್ ಆಫೀಸ್ ಎದುರು ಆಕ್ರೋಶ ಹೊರಹಾಕಿದರು. ಶಿವಮೊಗ್ಗ ತಾಲ್ಲೂಕಿನ ಸಂತೆಕಡೂರು ಗ್ರಾಮದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ 3 ಎಕರೆ ಜಾಗವನ್ನು ಕೆಲವರು ಒತ್ತುವರಿ ಮಾಡಿ ಮನೆಕಟ್ಟಿದ್ದು, ಸ್ಮಶಾನ ಜಾಗವನ್ನು ತೆರವುಗೊಳಿಸಲು ಅಸಡ್ಡೆ ತೋರಿದ ಪಂಚಾಯತ್ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಇಂದು ಪಂಚಾಯತ್ ಆಫೀಸನಲ್ಲಿ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ ತಾಲೂಕು ನಿಧಿಗೆ ಹೋಬಳಿ ಸಂತೆಕಡೂರು ಗ್ರಾಮದ ಸ.ನಂ.95 ರಲ್ಲಿ 3 ಎಕರೆ ಜಮೀನನ್ನು ಸ್ಮಶಾನದ ಉದ್ದೇಶಕ್ಕೆ ಕಾಯ್ದಿರಿಸಿದ ಜಾಗವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಬಡ ಜನರಿಂದ ಮನೆಕಟ್ಟಲು ಸೈಟ್ ಕೊಡುತ್ತೆವೆ ಎಂದು ಲಕ್ಷಗಟ್ಟಲೆ ಹಣ ಪಡೆದು ಈಗಾಗಲೇ ಒತ್ತುವರಿ ಮಾಡಿ ಮನೆಕಟ್ಟಲು ಪ್ರೇರೇಪಣೆ ನೀಡುತ್ತಿದ್ದಾರೆ ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ ಎನ್ನಲಾಗಿದೆ.
ನನ್ನ ವಿರುದ್ಧ ಪ್ರತಿಭಟಿಸುತ್ತಿರುವವರು ನನ್ನವರೇ ; ಆರಗಜ್ಞಾನೇಂದ್ರ ಬೇಸರದ ನುಡಿ
ರಾಜ್ಯಸರ್ಕಾರ ಹಾಗೂ ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ನಮ್ಮವರೇ. ಅವರದ್ದು ಸಾತ್ವಿಕ ಸಿಟ್ಟು. ಈ ಪ್ರತಿಭಟನೆಯ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯದ ಗೃಹ ಸಚಿವರಾದ ಆರಗಜ್ಞಾನೇಂದ್ರ ಬೇಸರದಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿನಾಯಕ ಪ್ರವೀಣ್ ಹತ್ಯೆ ನನಗೂ ನೋವುಂಟು ಮಾಡಿದೆ. ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಹರ್ಷನ ಬಳಿಕ ಪ್ರವೀಣ್ ನೆಟ್ಟಾರು ಅವರನ್ನು ಕಳೆದುಕೊಂಡಿದ್ದೇವೆ. ಪ್ರವೀಣ್ ಹತ್ಯೆ ವಿಷಯ ಕೇಳಿ ನನಗೆ ಎರಡು ದಿನ ನಿದ್ರೆಯೇ ಬರಲಿಲ್ಲ. ಹರ್ಷನ ಹತ್ಯೆ ಆರೋಪಿಗಳನ್ನು ಬಂಧಿಸಿದಂತೆ ಪ್ರವೀಣ್ ಹಂತಕರನ್ನು ಗುರುತಿಸಿ ಶಿಕ್ಷೆ ವಿಧಿಸುವ ಭರವಸೆಯಿದೆ ಎಂದರು.


0 Comments