ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ)  ಮದುವೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮದುವೆಯಲ್ಲಿ ಭಾಗಿಯಾದವರು ಸೇರಿದಂತೆ 11 ಜನರ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮದುವೆಯಾಗಿದ್ದ ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಸೇರಿಸಲಾಗಿದೆ.

ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ ಯುವಕ ಸೇರಿದಂತೆ ಮದುವೆ ನಡೆಸಿಕೊಟ್ಟ ಅರ್ಚಕ, ಅಡುಗೆ ಸಿದ್ಧಪಡಿಸಿದ್ದ ವ್ಯಕ್ತಿ, ಲಗ್ನಪತ್ರಿಕೆ ಮುದ್ರಕ, ಫೋಟೋಗ್ರಾಫರ್ ಹಾಗೂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಕೆಲವು ಸ್ನೇಹಿತರು, ಸಂಬಂಧಿಕರ ಮೇಲೂ ಪ್ರಕರಣ ದಾಖಲಿಸಲಾಗಿದೆ.


ಸುಮಾರು ಎರಡು ವರ್ಷಗಳ ಹಿಂದೆ ಕುಟುಂಬಸ್ಥರ ಗೃಹಪ್ರವೇಶ ಸಮಾರಂಭದಲ್ಲಿ ಬಾಲಕಿಯನ್ನು ದೂರದ ಸಂಬಂಧಿ ಸಂತೋಷ್ ಎಂಬಾತ ಪರಿಚಯ ಮಾಡಿಕೊಂಡಿದ್ದ. ನಂತರ ಇಬ್ಬರ ನಡುವೆ ಪ್ರೀತಿ ಬೆಳೆದು ನಂತರದಲ್ಲಿ ವಿಷಯ ತಿಳಿದ ಮನೆಯವರು ಮದುವೆ ಮಾತುಕತೆಯನ್ನೂ ನಡೆಸಿದ್ದರು. ಎರಡೂ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಜುಲೈ ಕೊನೆಯಲ್ಲಿ ದೇವಸ್ಥಾನವೊಂದರಲ್ಲಿ ಮದುವೆಯಾಗಿತ್ತು. ಆದರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮದುವೆ ವಿಚಾರ ತಿಳಿದಿದ್ದರಿಂದ ಬಾಲಕಿ ಹಾಗೂ ವರನ ಪಾಲಕರ ಸಹಿತ ಮದುವೆಯಲ್ಲಿ ಭಾಗಿಯಾದವರ ವಿರುದ್ಧವೂ ದೂರು ದಾಖಲಿಸಿ ಎಫ್.ಐ.ಆರ್ ದಾಖಲಾಗಿದೆ. ಸಧ್ಯ ಬಾಲಕಿಯನ್ನು ರಕ್ಷಿಸಿ ಬಾಲಮಂದಿರದಲ್ಲಿ ಬಿಡಲಾಗಿದೆ.