ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆಗಸ್ಟ್ 13 ರಿಂದ 15 ರವರೆಗೆ ದೇಶಾದ್ಯಂತ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವಂತೆ ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ಕೊಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿ ಪೋಸ್ಟ್ ಆಫೀಸ್ ನಲ್ಲೂ ರಾಷ್ಟ್ರಧ್ವಜ ಮಾರಾಟ ಆಗುತ್ತಿದೆ.
ರಾಷ್ಟ್ರಧ್ವಜ ನಿರ್ಮಾಣಕ್ಕೆ ನಿಯಮವೇನಿದೆ?
ರಾಷ್ಟ್ರ ಧ್ವಜವು ಕೇವಲ ಕೈ ನೇಯ್ಗೆಯಿಂದಲೇ ಸಿದ್ಧವಾದ ಶುದ್ಧ ಖಾದಿಯಿಂದ ಮಾಡಿರಬೇಕು ಎಂಬ ನಿಯಮವಿತ್ತು. ಆದರೆ ಸರ್ಕಾರ ಇದನ್ನು ಇದೀಗ ತಿದ್ದುಪಡಿ ಮಾಡಿದೆ. ಕೇಸರಿ, ಬಿಳಿ, ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿ ಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ 24 ರೇಖೆಗಳಿರಬೇಕು. ಧ್ವಜದ ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರಬೇಕು ಎಂಬುದು ಧ್ವಜ ನಿಯಮವಾಗಿದೆ.
ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿಯಲ್ಲೇನಿದೆ?
ಈಗ ಭಾರತದ ಧ್ವಜ ಸಂಹಿತೆ, 2002 ರ ಭಾಗ IIರ ಪ್ಯಾರಾ 2.2ರ ಷರತ್ತು (11) ಅನ್ನು ಈಗ 'ಧ್ವಜವನ್ನು ಎಲ್ಲಾ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ ಅಥವಾ ನಾಗರಿಕರ ನಿವಾಸದಲ್ಲಿ ಪ್ರದರ್ಶಿಸಲಾಗುತ್ತದೆ, ಧ್ವಜವನ್ನು ಹಗಲು ರಾತ್ರಿ ಹಾರಿಸಲಾಗುತ್ತದೆ' ಎಂದು ತಿದ್ದುಪಡಿ ಮಾಡಲಾಗಿದೆ. ಈ ಹಿಂದೆ ತ್ರಿವರ್ಣ ಧ್ವಜವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಹಾರಿಸಲು ಅವಕಾಶವಿತ್ತು.
ಅದೇ ರೀತಿ, ಧ್ವಜ ಸಂಹಿತೆಯ ಇನ್ನೊಂದು ನಿಬಂಧನೆಯನ್ನು ತಿದ್ದುಪಡಿ ಮಾಡಲಾಗಿದ್ದು, ‘ರಾಷ್ಟ್ರಧ್ವಜವನ್ನು ಕೈಯಿಂದ ತಿರುಗಿಸಲಾಗುತ್ತದೆ ಮತ್ತು ಕೈಯಿಂದ ನೇಯಲಾಗುತ್ತದೆ ಅಥವಾ ಯಂತ್ರವನ್ನು ತಯಾರಿಸಲಾಗುತ್ತದೆ. ಎಂಬುದನ್ನು ತಿದ್ದುಪಡಿ ಮಾಡಿದ್ದು, ಇದನ್ನು ಹತ್ತಿ/ಪಾಲಿಯೆಸ್ಟರ್/ಉಣ್ಣೆ/ರೇಷ್ಮೆ ಖಾದಿಯಿಂದ ಮಾಡಲಾಗುವುದು.' ಎಂದು ಉಲ್ಲೇಖಿಸಲಾಗಿದೆ. ಈ ಹಿಂದೆ ಯಂತ್ರದಿಂದ ತಯಾರಿಸಿದ ಮತ್ತು ಪಾಲಿಯೆಸ್ಟರ್ ನಿರ್ಮಿತ ರಾಷ್ಟ್ರಧ್ವಜ ಬಳಕೆಗೆ ಅವಕಾಶವಿರಲಿಲ್ಲ.
ಏನು ಮಾಡಬೇಕು, ಏನು ಮಾಡಬಾರದು?
ಆಗಸ್ಟ್ 15ರ ನಂತರ ಧ್ವಜವನ್ನು ಏನು ಮಾಡಬೇಕು? ಅನುಸರಿಸಬೇಕಾದ ಅಂಶಗಳು ಯಾವವು?
1) ಧ್ವಜ ಹಾರಿಸುವಾಗ ಕೇಸರಿ ಬಣ್ಣ ಮೇಲಿರಬೇಕು. ಹಸಿರು ಬಣ್ಣ ಕೆಳಗಿರಬೇಕು.
2) ಧ್ವಜ ತಲೆಕೆಳಗಾಗಿ ಅಂದರೆ ಹಸಿರು ಬಣ್ಣ ಮೇಲಿರುವಂತೆ, ಕೇಸರಿ ಬಣ್ಣ ಕೆಳಗೆ ಮಾಡಿ ಹಾರಿಸಬಾರದು.
3) ಹರಿದಿರುವ, ಧಕ್ಕೆಯಾಗಿರುವ ಧ್ವಜ ಹಾರಿಸಲೇಬಾರದು.
4) ರಾಷ್ಟ್ರದ ಧ್ವಜವನ್ನು ಅಲಂಕಾರಿಕ ವಸ್ತುವಂತೆ ಉಪಯೋಗಿಸುವಂತಿಲ್ಲ. ಉದಾಹರಣೆಗೆ ಟೇಬಲ್ ಮೇಲೆ ಹೊದಿಸುವುದು ಇತ್ಯಾದಿ
5) ರಾಷ್ಟ್ರ ಧ್ವಜ ಹಾರಾಡುವಾಗ ಅದಕ್ಕೆ ಎತ್ತರದಲ್ಲಿ ಬೇರಾವುದೇ ಧ್ವಜ ಹಾರಿಸುವಂತಿಲ್ಲ
6) ನಾವು ತೊಡುವ ಬಟ್ಟೆಯಲ್ಲಿ ರಾಷ್ಟ್ರ ಧ್ವಜವನ್ನು ಸೊಂಟಕ್ಕಿಂತ ಕೆಳಭಾಗದಲ್ಲಿ ಉಪಯೋಗಿಸುವಂತಿಲ್ಲ
7) ಧ್ವಜವನ್ನು ಕತ್ತರಿಸಿ ಉಪಯೋಗಿಸುವಂತಿಲ್ಲ
8) ಧ್ವಜವನ್ನು ಯಾವುದೇ ಕಾರಣಕ್ಕೂ ನೆಲಕ್ಕೆ ತಾಕಿಸುವಂತಿಲ್ಲ
9) ಅಕಸ್ಮಾತ್ ಧ್ವಜ ಹರಿದರೆ ಅಥವಾ ಹಳತಾದರೆ ಅದನ್ನು ಯಾರಿಗೂ ಕಾಣದಂತೆ ಖಾಸಗಿಯಾಗಿ ಗೌರವಯುತವಾಗಿ ಅಗ್ನಿಗೆ ಅರ್ಪಿಸಬೇಕು
10) ಯಾವುದೇ ಕಾರಣಕ್ಜೂ ಧ್ವಜವನ್ನ ರಸ್ತೆಯಲ್ಲಿ. ತೊಟ್ಟಿಯಲ್ಲಿ ಬಿಸಾಡುವಂತಿಲ್ಲ.
11) ಮನೆ, ಮಳಿಗೆಗಳಲ್ಲಿ ಧ್ವಜ ಹಾರಿಸಿದವರು ಆಗಸ್ಟ್ 13ರ ಬೆಳಿಗ್ಗೆ 7ಗಂಟೆಗೆ ಧ್ವಜ ಹಾರಿಸಿ ಅದನ್ನು ಆಗಸ್ಟ್ 15ರ ಸಂಜೆ 6 ಗಂಟೆಗೆ ಇಳಿಸಬೇಕು, ಪ್ರತಿದಿನ ಸಂಜೆ ಧ್ವಜ ಇಳಿಸುವ ಅವಶ್ಯಕತೆ ಇಲ್ಲ.
ಆದರೆ ನಿಯಮಬದ್ಧವಾಗಿ ಸರ್ಕಾರಿ ಕಛೇರಿಗಳಲ್ಲಿ ಧ್ವಜಾರೋಹಣ ಮಾಡಿದವರು ಧ್ವಜವನ್ನು ಆಯಾ ದಿನ ಸಂಜೆ ಇಳಿಸಿ ಪುನಃ ಮಾರನೇ ದಿನ ಧ್ವಜಾರೋಹಣ ಮಾಡಬೇಕು.
12) ಧ್ವಜವನ್ನು ಯಾವುದೇ ಕಾರಣಕ್ಕೂ ವಾಹನಗಳಿಗೆ ಕಟ್ಟಬಾರದು, ಅದು ನಿಯಮದ ಉಲ್ಲಂಘನೆ ಆಗುತ್ತದೆ.
13) ಜಾಥಾ ಇದ್ದಲ್ಲಿ ಹಿಂಬದಿಯ ಪ್ರಯಾಣಿಕರು ಕೈಯಲ್ಲಿ ನೇರವಾಗಿ ಹಿಡಿದುಕೊಂಡು ಕೂರಬಹುದು.
14) ಆಗಸ್ಟ್ 15ರ ನಂತರ ಧ್ವಜವನ್ನು ಇತರೆ ಯಾವುದೇ ಬಳಕೆಗೆ ಬಳಸದಂತೆ ಜಾಗರೂಕತೆ ವಹಿಸಬೇಕು, ನಿಯಮಾನುಸಾರ ತ್ರಿವರ್ಣದಲ್ಲಿ ಬಿಳಿ ಬಣ್ಣ ಮೇಲೆ ಬರುವಂತೆ, ಹಾಗೂ ಅಶೋಕ ಚಕ್ರ ಕಾಣುವಂತೆ ಮಡಚಿ ಇಡಬೇಕು.
ನಿಯಮಗಳನ್ನು ಅನುಸರಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸೋಣ. ಮುಗಿಲೆತ್ತರದಲ್ಲಿ ಹಾರಲಿ ತ್ರಿವರ್ಣ ಧ್ವಜ. ನ್ಯೂಸ್ ಮಲ್ನಾಡ್ ವತಿಯಿಂದ ಸರ್ವರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

.jpeg)




0 Comments