ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಭಾರಿ ಪ್ರಮಾಣದ ಸಮಸ್ಯೆಗಳನ್ನು ಎದುರು ಮಾಡಿದೆ.
ಒಂದೆಡೆ ಮಳೆಯ ಅಬ್ಬರಕ್ಕೆ ಭೂಕುಸಿತ ಉಂಟಾಗಿ ಒಂದು ಎಕರೆ ವ್ಯಾಪ್ತಿಯ ಕಾಫಿ ತೋಟವು ಕೊಚ್ಚಿ ಹೋಗಿದ್ದರೆ, ಇನ್ನೊಂದೆಡೆ ಮನೆಯ ಎದುರು ಭಾಗ 20 ಅಡಿ ಆಳದಷ್ಟು ಭೂಕುಸಿತ ಉಂಟಾಗಿದೆ.
ಇದನ್ನೂ ಓದಿ : ಬಡತನವಿದ್ದರೂ ರಾಷ್ಟ್ರಭಕ್ತಿಯ ವಿಚಾರದಲ್ಲಿ ಹೃದಯ ಶ್ರೀಮಂತಿಕೆ ಮೆರೆದ ಕಾಫಿನಾಡಿನ ಕುರಿಗಾಯಿ ಕುಟುಂಬ ವರ್ಗ
ಚಿಕ್ಕಮಗಳೂರು ಜಿಲ್ಲೆಯ ಕೆಳಗೂರಿನ ದಿಣ್ಣೆಕೆರೆಯಲ್ಲಿ ಹರೀಶ್ ಎಂಬುವವರಿಗೆ ಸೇರಿದ ಕಾಫಿ ತೋಟವು ಭೂಕುಸಿತದಿಂದಾಗಿ ಕೊಚ್ಚಿ ಹೋಗಿದೆ. ಸರಿಸುಮಾರು ಒಂದು ಎಕರೆ ವ್ಯಾಪ್ತಿಯಷ್ಟು ತೋಟ ಕೊಚ್ಚಿ ಹೋಗಿದ್ದು ಶ್ರಮವಹಿಸಿ ಬೆಳೆಸಿದ್ದ ಅಡಿಕೆ ಮರಗಳು ಕಾಫಿ ಗಿಡ ಹಾಗೂ ಕಾಳುಮೆಣಸಿನ ಬಳ್ಳಿಗಳು ಸಂಪೂರ್ಣವಾಗಿ ನಾಶವಾಗಿದೆ. ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತ ಉಂಟಾಗಿರುವ ಪರಿಣಾಮ ತೋಟದಲ್ಲಿ ಬೃಹದಾಕಾರದ ಕಂದಕವೇ ಸೃಷ್ಟಿಯಾಗಿದ್ದು ಕೃಷಿಕ ಹರೀಶ್ ತೀವ್ರ ಆತಂಕಕ್ಕೀಡಾಗಿದ್ದಾರೆ. ಮಲೆನಾಡು ಭಾಗದಲ್ಲಿ ಒಂದೆಡೆ ಅಡಿಕೆ ಬೆಳೆಗೆ ರೋಗಗಳು ಭಾದಿಸುತ್ತಿದ್ದರೆ ಇನ್ನೊಂದೆಡೆ ಈ ರೀತಿಯಾದ ಅವಘಡಗಳಿಂದ ಕೃಷಿಯನ್ನೇ ಜೀವನಧಾರವಾಗಿ ನಂಬಿಕೊಂಡು ಜೀವನ ನಡೆಸುತ್ತಿರುವ ಕೃಷಿಕರು ಅತಿವವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿರುಗಾಳಿ ಸಹಿತ ಮಳೆ ಹಾಗೂ ಸಂಭವಿಸಿದ ಭಾರಿ ಮಟ್ಟದ ಭೂಕುಸಿತದ ಪರಿಣಾಮ ಅಡಿಕೆ ಮರಗಳು ಮುರಿದುಬಿದ್ದು ಮಣ್ಣಿನಡಿಯಲ್ಲಿ ಸಿಲುಕಿದೆ.
ಈ ಕುರಿತಾಗಿ ತಮ್ಮ ಅಳಲನ್ನು ವ್ಯಕ್ತಪಡಿಸಿರುವ ಕೃಷಿಕ ಹರೀಶ್ ಅವರು ಸರ್ಕಾರ ಅತಿ ಶೀಘ್ರವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲೇ ಸೂಕ್ತವಾದ ಪರಿಹಾರವನ್ನು ಘೋಷಿಸಬೇಕು ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯು ತೀವ್ರ ತರಹದ ಸಮಸ್ಯೆಯನ್ನು ಎದುರು ಮಾಡಿದ್ದು ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಕೃಷಿಕರು ನರಳಾಟ ನಡೆಸುತ್ತಿದ್ದಾರೆ, ಈ ಕುರಿತಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
20 ಅಡಿ ಆಳಕ್ಕೆ ಕುಸಿದ ಭೂಮಿ :
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಗ್ಗಸಗೋಡು ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಮನೆ ಮುಂದಿನ ಜಾಗವು 20 ಅಡಿ ಆಳಕ್ಕೆ ಕುಸಿದಿದೆ. ಮೂಡಿಗೆರೆಯ ಬಗ್ಗಸಗೋಡು ಗ್ರಾಮದ ರವಿ ಎಂಬುವರ ಮನೆಯ ಮುಂಭಾಗದ ಭೂಮಿಯು ಮಳೆಯಿಂದಾಗಿ 20 ಅಡಿಗಳಷ್ಟು ಪ್ರಮಾಣಕ್ಕೆ ಕುಸಿತಗೊಂಡಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯು ಮನೆಯ ನಿವಾಸಿಗಳಲ್ಲಿ ತೀವ್ರ ತರಹದ ಆತಂಕವನ್ನು ಎದುರು ಮಾಡಿದೆ.
ಭಾರಿ ಶಬ್ದದೊಂದಿಗೆ ಭೂಮಿಯುಕುಸಿತಗೊಂಡಿದ್ದು ಈ ಭಾಗದಲ್ಲಿದ್ದ ಮರಗಳು ಹಾಗೂ ಬಾವಿಯೂ ಕೂಡ ಭೂಕುಸಿತದ ಹೊಡೆತಕ್ಕೆ ಸಿಲುಕಿ ಮಣ್ಣಿನೊಂದಿಗೆ ಜಾರಿದೆ. ಮನೆಯ ಅಂಗಳ ತೋಟಕ್ಕೆ ಹೋಗುವ ಸಲುವಾಗಿದ್ದ ಮೆಟ್ಟಿಲುಗಳು ಸೇರಿದಂತೆ ಭಾರಿ ಪ್ರಮಾಣದ ಹಾನಿ ಸಂಭವಿಸಿದ್ದು ಮನೆಯವರು ಇನ್ನಿಲ್ಲದ ಸಮಸ್ಯೆಯನ್ನು ಎದುರಿಸುವ ಸ್ಥಿತಿ ತಲೆದೋರಿದೆ.
ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತಾಗಿ ಗಮನಹರಿಸಿ ಸಂಭವಿಸಿರುವ ಅನಾಹುತಕ್ಕೆ ಸೂಕ್ತವಾದ ಪರಿಹಾರ ನೀಡಿ ಕುಟುಂಬದವರಿಗೆ ನೆರವಾಗಬೇಕಿದೆ.






0 Comments