ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ವೈದ್ಯಕೀಯ ಕಾಲೇಜಿಗೆ 2022-23 ನೆಯ ಶೈಕ್ಷಣಿಕ ಸಾಲಿನಿಂದ 150 ಎಂಬಿಬಿಎಸ್ ಸೀಟುಗಳೊಂದಿಗೆ ಪ್ರವೇಶಾತಿ ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿಸಿದೆ. ಈ ವಿಷಯ ಜಿಲ್ಲೆಯ ಜನರಿಗೆ ಅತೀ ಹೆಚ್ಚಿನ ಸಂತೋಷವನ್ನು ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಅವಕಾಶವನ್ನು ಒದಗಿಸಿದೆ.
ಈ ಕುರಿತಂತೆ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವನಾಗಿ 3 ವರ್ಷಗಳಲ್ಲಿ ರಾಜ್ಯಕ್ಕೆ 4 ವೈದ್ಯಕೀಯ ಕಾಲೇಜು ಮತ್ತು 700 ಹೆಚ್ಚುವರಿ ಎಂಬಿಬಿಎಸ್ ಸೀಟು ಕಲ್ಪಿಸಿರುವುದು ಸರ್ಕಾರಕ್ಕೆ ಹಾಗೂ ವೈಯುಕ್ತಿಕವಾಗಿ ಹೆಮ್ಮೆ ಹಾಗೂ ತೃಪ್ತಿ ಮೂಡಿಸಿದೆ ಎಂದು ತಿಳಿಸಿದ್ದಾರೆ. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ವರ್ಷ ಪೂರೈಸಿದ ದಿನದಂದೇ ಈ ಸುದ್ದಿ ಬಂದಿರುವುದು ಸಂತಸವಾಗಿದೆ. ವೈದ್ಯಕೀಯ ಶಿಕ್ಷಣ ಬಲಪಡಿಸುವ ನಿಟ್ಟಿನಲ್ಲಿ ನನ್ನ ಎಲ್ಲಾ ಪ್ರಯತ್ನಗಳಿಗೆ ಬೆಂಬಲ ನೀಡಿದ ಕೇಂದ್ರ ಸರ್ಕಾರಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಹಾಗೂ ಈ ಯೋಜನೆಯನ್ನು ಪೂರ್ಣಗೊಳಿಸಲು ಸಂಪೂರ್ಣ ಬೆಂಬಲ ನೀಡಿದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಹಂಚಿಕೊಂಡಿದ್ದಾರೆ.
ಕಳೆದವಾರವಷ್ಟೇ ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳ ನೂತನ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ತಲಾ 150 ವೈದ್ಯ ಸೀಟುಗಳ ಪ್ರವೇಶಾತಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅನುಮತಿ ನೀಡಿತ್ತು. ಪ್ರಸ್ತುತ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜಿಗೆ 150 ಸೀಟುಗಳು ದೊರೆತಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಓದಬೇಕೆಂದು ಹಂಬಲಿಸುತ್ತಿದ್ದ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲಕರವಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಓದಿ ಮನ್ನಣೆ ಪಡೆಯಲು ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳು ಹೊರ ಜಿಲ್ಲೆ ಹಾಗೂ ರಾಜ್ಯಗಳನ್ನು ಅವಲಂಬಿಸಿದ್ದರು. ಜಿಲ್ಲೆಯಲ್ಲೇ ವೈದ್ಯಕೀಯ ಕೋರ್ಸ್ ಆರಂಭವಾಗುತ್ತಿರುವ ಕಾರಣ ಪ್ರಸ್ತುತ ಅವರ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದು.






0 Comments