ಕೊಡಗು : (ನ್ಯೂಸ್ ಮಲ್ನಾಡ್ ವರದಿ)  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣವು ಗಂಭೀರತೆ ಪಡೆದುಕೊಂಡು ಕಾಂಗ್ರೆಸ್ ಆಗಸ್ಟ್ 26ಕ್ಕೆ ಕೊಡಗು ಎಸ್ಪಿ ಕಛೇರಿಗೆ ಮುತ್ತಿಗೆ ಹಾಕುವ ಮೂಲಕ ಕೊಡಗು ಚಲೋ ಗೆ ಕರೆ ನೀಡಿತ್ತು. 

ಇದನ್ನೂ ಓದಿ : ನಾಲ್ಕು ಚಕ್ರಗಳ ಲಘು ವಾಹನ ಹೊಂದಿರುವವರು BPL ಕಾರ್ಡ್ ಹಿಂದಿರುಗಿಸುವ ಕುರಿತು ಸ್ಪಷ್ಟನೆ ನೀಡಿದ ಡಿ.ಎನ್ ಜೀವರಾಜ್

ಮತ್ತೊಂದೆಡೆ ಇದಕ್ಕೆ ಪ್ರತಿಯಾಗಿ ಬಿಜೆಪಿ ಆಗಸ್ಟ್ 26ಕ್ಕೆ ಜನಜಾಗೃತಿ ಸಮಾವೇಶ ನಡೆಸುವುದಾಗಿ ಘೋಷಿಸಿತ್ತು. ಈ ಸಂಬಂಧ ಎರಡೂ ಪಕ್ಷಗಳಿಂದ ರಾಜಕೀಯ ಬಲಪ್ರದರ್ಶನಕ್ಕೆ ತಯಾರಿ ಸಹ ನಡೆದಿತ್ತು. ರಾಜಕೀಯ ಕೆಸೆರೆರೆಚಾಟದಿಂದ ಕೊಡಗಿನ ಸಾಮಾನ್ಯ ಪ್ರಜೆಗಳು ಸಂಕಷ್ಟಕ್ಕೆ ಸಿಲುಕುವ ವಾತಾವರಣ ಏರ್ಪಟ್ಟಿತ್ತು.



ಈ ಹಿಂದೆ ಹಲವು ಪ್ರತಿಭಟನೆ, ಟಿಪ್ಪು ಜಯಂತಿ ಸಂದರ್ಭದಲ್ಲಿ ಗಲಭೆಗಳು ಉಂಟಾಗಿ ಹಲವು ಸಾವು ನೋವುಗಳಿಗೆ ಕೊಡಗು ಸಾಕ್ಷಿಯಾಗಿತ್ತು. ಹಲವು ವಾರಗಳ ನಿಷೇಧಾಜ್ಞೆಗೆ ಸಹ ಒಳಪಟ್ಟಿತ್ತು, ಇತ್ತೀಚೆಗೆ ನಡೆದ ಜೋಡಿ ಕೊಲೆ ಸಂಬಂಧ ಸಹ ವಾತಾವರಣ ತಿಳಿಯಾಗಿರಲಿಲ್ಲ.

ಈ ಎಲ್ಲಾ ಕಾರಣಗಳನ್ನು ಮನಗಂಡು ಕೊಡಗು ಎಸ್ಪಿ ಮಲಚೇರ ಅಯ್ಯಪ್ಪ ಮನವಿ ಮೇರೆಗೆ ಜಿಲ್ಲಾಧಿಕಾರಿಗಳು ಕೊಡಗಿನಲ್ಲಿ 24 ಆಗಸ್ಟ್ ಬೆಳಿಗ್ಗೆ 6ರಿಂದ 27 ಆಗಸ್ಟ್ ಸಂಜೆ 6ರವರೆಗೆ ಮಧ್ಯ ಮಾರಾಟ ನಿಷೇಧದ ಜೊತೆಗೆ ಸಂಪೂರ್ಣ ನಿಷೇದಾಜ್ಞೆ ಹೇರಿದ್ದು ಪೂರ್ವ ನಿಯೋಜಿತ ಮದುವೆ , ಗೃಹಪ್ರವೇಶ, ನಾಮಕರಣ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಯಾವುದೇ ಪ್ರತಿಭಟನೆ, ಮೆರವಣಿಗೆ, ಜಾಥಾ ಅಥವಾ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಪಟಾಕಿ ಸಿಡಿಸುವುದು, ಕಪ್ಪು ಬಟ್ಟೆ ಕಪ್ಪು ಬಾವುಟ ಬಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.