ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಡ್ರೋನ್ ಕ್ಯಾಮೆರಾ, ಮಾನವ ರಹಿತ ವಿಮಾನ ಬಳಕೆ ಕುರಿತು ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಮಂಗಳೂರು ಪೊಲೀಸ್ ಕಮಿಷನರೇಟ್ ಘಟಕದ ಒಟ್ಟು 27 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಜ್ಯದಲ್ಲಿ ಪ್ರಥಮವಾಗಿ ಪಶ್ಚಿಮ ವಲಯದಲ್ಲಿ ತರಬೇತಿ ಆರಂಭವಾಗಿದ್ದು, ಬೆಂಗಳೂರಿನ ಆಂತರಿಕ ಭದ್ರತೆ ವಿಭಾಗದ ತಜ್ಞರ ತಂಡ ತರಬೇತಿ ಕಾರ್ಯಾಗಾರವನ್ನು ಆರಂಭಿಸಿದೆ. 

ಇದನ್ನೂ ಓದಿ : ಆಗುಂಬೆ ಘಾಟ್ ನಲ್ಲಿ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಭಂಧ ಮುಂದುವರಿಕೆ

ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ಅವರು ಎರಡು ವಾರಗಳ ತರಬೇತಿಯನ್ನು ಸೋಮವಾರ ಉದ್ಘಾಟಿಸಿದರು. ಪೊಲೀಸ್ ಅಧಿಕಾರಿಗಳಿಗೆ ಈ ತರಬೇತಿಯನ್ನು ದೇಶದಲ್ಲೇ ಮೊದಲು ಕರ್ನಾಟಕ ರಾಜ್ಯ ಹಮ್ಮಿಕೊಂಡಿದೆ. ತರಬೇತಿಯಲ್ಲಿ ಡ್ರೋನ್ ಕುರಿತ ವಿವರ ಮತ್ತು ಕಾನೂನುಗಳು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪರಿಕರಗಳ ಬಳಕೆ, ರಾತ್ರಿ ವೇಳೆ ಸೂಕ್ಷ್ಮ ಪ್ರದೇಶ, ಕಾಡು, ಬೆಟ್ಟ-ಗುಡ್ಡಗಳಲ್ಲಿ ಇವನ್ನು ಹಾರಿಸಿ, ಮಾಹಿತಿ ಸಂಗ್ರಹಿಸುವ ಬಗ್ಗೆ ಕೂಡ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.


ಪೊಲೀಸರಿಗೆ ಅವಶ್ಯಕವಾಗಿರುವ ತರಬೇತಿಯನ್ನು ನೀಡಿ, ಆಧುನಿಕ ತಂತ್ರಜ್ಞಾನಗಳ ಕುರಿತು ಹೆಚ್ಚಿನ ಮಾಹಿತಿ ಹಾಗೂ ಡ್ರೋನ್ ಕ್ಯಾಮೆರಾಗಳ ಬಳಕೆಯ ಕುರಿತು ಒದಗಿಸುತ್ತಿರುವ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಡೆಯುತ್ತಿದ್ದಾರೆ. 

ಆಗುಂಬೆ ಘಾಟ್ ನಲ್ಲಿ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧ ಮುಂದುವರಿಕೆ :

ಶಿವಮೊಗ್ಗ: ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಸುರಿದ ರಣಮಳೆಗೆ ಕುಸಿತಗೊಂಡಿದ್ದ ಆಗುಂಬೆ ಘಾಟಿಯಲ್ಲಿ, ಭಾರೀ ಪ್ರಮಾಣದ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧವನ್ನು ಹೇರಿತ್ತು. ಪ್ರಸ್ತುತ ಜಿಲ್ಲಾಡಳಿತ ಅದೇ ನಿರ್ಬಂಧವನ್ನು ಮುಂದುವರೆಸಿ ಆದೇಶಿಸಿದೆ. 


ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಜುಲೈ ತಿಂಗಳಿನಲ್ಲಿ ಭೂ ಕುಸಿತ ಉಂಟಾಗಿತ್ತು. ಈ ಹಿನ್ನೆಲೆ ಆಗಸ್ಟ್ 31 ರ ವರೆಗೆ ಜಿಲ್ಲಾಡಳಿತ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿತ್ತು. ಇದೀಗ ತಜ್ಞರ ಸೂಚನೆ ಮೇರೆಗೆ ಸೆಪ್ಟೆಂಬರ್ 30 ರವರೆಗೆ ಭಾರೀ ವಾಹನಗಳ ಸಂಚಾರ ನಿಷೇಧಿಸಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಆಗುಂಬೆ ಘಾಟಿಯಲ್ಲಿ ಸದ್ಯ ಭಾರೀ ವಾಹನಗಳಿಗೆ ಮಾತ್ರ ಸಂಚಾರ ನಿರ್ಬಂಧ ಮಾಡಲಾಗಿದೆ. ಆದರೆ ಆಗುಂಬೆ ಘಾಟಿಯಲ್ಲಿ ಲಘು ವಾಹನ ಮತ್ತು ಬಸ್ಸುಗಳ ಸಂಚಾರ ಎಂದಿನಂತೆಯೇ ಇರಲಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. 


ಶೃಂಗೇರಿಯಿಂದ ಆಗುಂಬೆಯನ್ನು ಸಂಪರ್ಕಿಸುವ ಶೃಂಗೇರಿ ಹೊರವಲಯದ ನೇರಳೆಕುಡಿಗೆ ರಸ್ತೆ ಸಹ ಈ ಭಾಗದಲ್ಲಿ ಸಂಭವಿಸಿದ್ದ ಮಳೆಗೆ ಭಾರೀ ಪ್ರಮಾಣದಲ್ಲಿ ಕುಸಿತಗೊಂಡಿತ್ತು. ಇಲ್ಲೂ ಸಹ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಭಾರೀ ಗಾತ್ರದ ವಾಹನಗಳು ಶೃಂಗೇರಿಯಿಂದ ಪರ್ಯಾಯ ರಸ್ತೆಗಳ ಮೂಲಕ ಈಗಲೂ ಸಂಚಾರ ನಡೆಸುತ್ತಿದೆ.