ಕೊಟ್ಟಿಗೆಹಾರ : (ನ್ಯೂಸ್ ಮಲ್ನಾಡ್ ವರದಿ) 3 ವರ್ಷದಲ್ಲಿ 36,000 ಕಿ.ಮೀ ಅಂತರ ಸೈಕಲ್ ತುಳಿದ ಮಾಜಿ ಯೋಧರೋರ್ವರಿಂದ ತ್ರಿವರ್ಣ ಧ್ವಜವನ್ನು ಹಾರಿಸುವುದರ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಕೊಟ್ಟಿಗೆಹಾರದ ಜನರು ಆಚರಿಸಿದ್ದಾರೆ.
ಇಡೀ ದೇಶವೇ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ದೊರೆತಿದ್ದುಇಂದು ಬೆಳಗ್ಗಿನಿಂದ ಎಲ್ಲೆಡೆಯೂ ಅಂಗಡಿ, ಮನೆಗಳ ಮೇಲೆ, ಸಾರ್ವಜನಿಕ ಕಚೇರಿಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಅಂತೆಯೇ ಕಳೆದ 3 ವರ್ಷಗಳಲ್ಲಿ 36 ಸಾವಿರ ಕಿ. ಮೀ ಸೈಕಲ್ ತುಳಿದು ದೇಶದ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಗುಜರಾತ್ ಮೂಲದ ಮಾಜಿಯೋಧನ ಜೊತೆ ಹರ್ ಘರ್ ತಿರಂಗಾ ಅಭಿಯಾನ ಆಚರಿಸಿ ಅವರ ಕೈಯಲ್ಲೇ ಅವರ ಮನೆ ಮೇಲೆ ತ್ರಿವರ್ಣ ಧ್ವಜವನ್ನು ಕಟ್ಟಿಸಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮಿಸಿದ್ದಾರೆ.
ಇದನ್ನೂ ಓದಿ : ಕೊಪ್ಪ : ಹೊಂಡ, ಗುಂಡಿಗಳಿಂದ ತುಂಬಿರುವ ರಸ್ತೆಯ ದುರಸ್ತಿಗೆ ದೊರಕದ ಸ್ಪಂದನೆ
ಗುಜರಾತ್ ಮೂಲದ ಬಿ.ಎಸ್.ಎಫ್. ಮಾಜಿ ಯೋಧ ಬ್ರಿಜೇಶ್ ಶರ್ಮಾ ಕಳೆದ ಮೂರು ವರ್ಷಗಳಿಂದ ಸೈಕಲ್ ಜಾಥಾ ಮಾಡುತ್ತಿದ್ದು, ಈವರೆಗೆ 36 ಸಾವಿರ ಕಿ.ಮೀ. ಸೈಕಲ್ ತುಳಿದಿದ್ದಾರೆ. ಜಾಥಾ ನಡೆಸುತ್ತಾ ಬಂದ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೂ ಭೇಟಿ ನೀಡಿದ್ದರು. ಈ ವೇಳೆ ಕೊಟ್ಟಿಗೆಹಾರದ ಸಾಮಾಜಿಕ ಕಾರ್ಯಕರ್ತರಾದ ಸಂಜಯ್ ಕೊಟ್ಟಿಗೆಹಾರ ಅವರು ಮಾಜಿ ಯೋಧನಿಗೆ ತಮ್ಮ ಹೋಂ ಸ್ಟೇನಲ್ಲಿ ತಂಗಲು ಅವಕಾಶ ನೀಡಿ, ಇಂದು ಬೆಳಗ್ಗೆ ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆ ಅವರ ಕೈಯಿಂದಲೆ ತಮ್ಮ ಮನೆ ಮೇಲೆ ಬಾವುಟ ಕಟ್ಟಿಸಿದ್ದಾರೆ.
ಮಾಜಿ ಯೋಧ ಬ್ರಿಜೇಶ್ ಶರ್ಮಾ, ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ದಿನದಂದು ಸೈಕಲ್ ಜಾಥಾ ಆರಂಭಿಸಿದ್ದರು ಮೂರು ವರ್ಷಗಳಿಂದ ಅವರು ಸೈಕಲ್ ತುಳಿಯುತ್ತಿದ್ದಾರೆ. ಸಿಂಗಲ್ ಯೂಸ್ ಪ್ಲಾಸ್ಟಿಕ್‍ನಿಂದ ಏನೇನು ತೊಂದರೆಯಾಗಲಿದೆ ಎಂಬುದನ್ನ ಸಭೆ-ಸಮಾರಂಭ, ಶಾಲಾ-ಕಾಲೇಜಿಗೆ ಹೋಗಿ ಮಕ್ಕಳು ಹಾಗೂ ದೊಡ್ಡವರಿಗೂ ಮನವರಿಕೆ ಮಾಡುತ್ತಿದ್ದಾರೆ. ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯನ್ನ ಸಂಪೂರ್ಣವಾಗಿ ಬಿಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ. ಸ್ವಚ್ಛ ಭಾರತ್ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ, ರೈತ ಈ ದೇಶದ ಬೆನ್ನೆಲುಬು ಎಂದು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹೊಲಗದ್ದೆ-ತೋಟಗಳಲ್ಲಿ ಮಣ್ಣಿನ ಸವಕಳಿಯನ್ನ ಹೇಗೆ ತಡೆಯುವುದು ಎಂದು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ.
ಈ ರೀತಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮೂರು ವರ್ಷಗಳಿಂದ ಸೈಕಲ್ ತುಳಿಯುತ್ತಿರೋ ಮಾಜಿ ಯೋಧನ ದೇಶಪ್ರೇಮಕ್ಕೆ ಕೊಟ್ಟಿಗೆಹಾರದ ಜನ ಕೂಡ ಫುಲ್ ಫಿದಾ ಆಗಿ ಅವರನ್ನ ಕೊಟ್ಟಿಗೆಹಾರದಲ್ಲೇ ಉಳಿಸಿಕೊಂಡು, ನಂತರದಲ್ಲಿ ದೇಶ ಕಾರ್ಯಕ್ಕಾಗಿ ಅಲ್ಲಿಂದ ಆತ್ಮೀಯವಾಗಿ ಬೀಳ್ಕೊಟ್ಟಿದ್ದಾರೆ.
ಈ ರೀತಿಯಾಗಿ ದೇಶದ ಪರವಾದ ಚಿಂತನೆಗಳನ್ನು ಹೊಂದಿ ತಮ್ಮಿಂದಾದ ಸೇವೆಗಳನ್ನು ದೇಶದ ಜನರಿಗೆ ಮಾಡುವ ದೇಶಪ್ರೇಮಿಗಳನ್ನು ಸದಾ ಜನರೇ ಗುರುತಿಸಿ ಅವರ ಸೇವೆಯನ್ನು ಶ್ಲಾಘಿಸುತ್ತಾರೆ.



.jpeg)


0 Comments