ಚಿಕ್ಕಮಗಳೂರು :

ಭಾರೀ ಮಳೆಯ ಮುನ್ಸೂಚನೆ :

ಇಂದಿನಿಂದ ಆಗಸ್ಟ್​ 31ರವರೆಗೂ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಇಂದು ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ. ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಕೆಲ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ನೀಡಿದೆ.

ಮೃತರಾದವರಿಗೂ ದೊರೆತ ಸದಸ್ಯ ಸ್ಥಾನ : 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 21 ವಿವಿಧ ಟ್ರಸ್ಟ್ ಮತ್ತು ಪ್ರತಿಷ್ಠಾನಗಳ ನೂತನ ಅಧ್ಯಕ್ಷರು ಹಾಗೂ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆದರೆ ಈ ಪೈಕಿ ಎಡವಟ್ಟು ಮಾಡಿಕೊಂಡಿದೆ.ಚಿಕ್ಕಮಗಳೂರಿನ ಮೂಡಿಗೆರೆಯ ಸಾಹಿತಿ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನೂತನ ಸದಸ್ಯರ ಪಟ್ಟಿಯಲ್ಲಿ ತೇಜಸ್ವಿ ಅವರ ಧರ್ಮಪತ್ನಿ ದಿ. ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರ ಹೆಸರಿದ್ದು, ಆದರೆ ಅವರು ಕಳೆದ ವರ್ಷ ಡಿಸೆಂಬರ್ ನಲ್ಲೇ ನಿಧನರಾಗಿದ್ದಾರೆ. ಮೃತರಾದವರಿಗೂ ಸದಸ್ಯ ಸ್ಥಾನ ನೀಡಿ ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೀಡಾಗಿದೆ.

ಕಳ್ಳತನ ಎಸಗಿದ್ದ ಆರೋಪಿಯ ಬಂಧನ :

ಕೊಪ್ಪ : ಮನೆ ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿಯ ಮೌಲ್ಯ ತಲೆ ಬಾಳುವ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದ ಖದೀಮನನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅರಳಿಕೊಪ್ಪ ಗ್ರಾಮದ ಒಂದು ಮನೆಯಲ್ಲಿ ಕಳ್ಳತನ ನಡೆಸಿದ್ದ ಆರೋಪಿಯನ್ನು ಬಾಳೆಹೊನ್ನೂರು ಪಿಎಸ್ಸೈ ಅವರ ನೇತೃತ್ವದ ಪೊಲೀಸರ ತಂಡ ಬಂಧಿಸಿ, ಆರೋಪಿಯು ಕಳ್ಳತನ ನಡೆಸಿದ್ದ 1.17 ಲಕ್ಷ ಮೌಲ್ಯದ 21.832 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಗಾಂಜಾ ಮಾರಾಟ ನಡೆಸುತ್ತಿದ್ದ ಆರೋಪಿ ಸೆರೆ :

ಚಿಕ್ಕಮಗಳೂರು ನಗರದ ಸಂತೆ ಮಾರ್ಕೆಟ್ ನ ಲಾರಿ ಸ್ಟಾಂಡ್ ಸಮೀಪದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಬಂದಿಸಿದ್ದಾರೆ. ಈ ಕಾರ್ಯಾಚರಣೆಯನ್ನು CEN ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಪೊಲೀಸರ ತಂಡ ನಡೆಸಿದ್ದು ಆರೋಪಿಯಿಂದ 410 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. 

ಶಿವಮೊಗ್ಗ: 

ಪ್ರೇಮ್ ಸಿಂಗ್ ಗೆ ಚಾಕು ಇರಿತ ಪ್ರಕರಣ ; ಪ್ರಮುಖ ಆರೋಪಿಗಳ ಬಂಧನ :

ಶಿವಮೊಗ್ಗದಲ್ಲಿ ಗಲಭೆಗೆ ಕಾರಣವಾಗಿದ್ದ ಪ್ರೇಮ್ ಸಿಂಗ್​​ ಚಾಕು ಇರಿತ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಜಬಿವುಲ್ಲಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಎಸ್​​ಡಿಪಿಐ ಲಿಂಕ್ ಹಿನ್ನೆಲೆ ಶಿವಮೊಗ್ಗದ ನ್ಯೂ ಮಂಡ್ಲಿ ಸರ್ಕಲ್​​ನಲ್ಲಿರುವ ಎಸ್​​ಡಿಪಿಐ ಕಚೇರಿ, ಜಬಿವುಲ್ಲಾ ಸಹೋದರ ಹಾಗೂ ನಾಲ್ವರು ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಎಸ್​​ಡಿಪಿಐ ಕಚೇರಿಯಲ್ಲಿ ಮೊಬೈಲ್​​​​ಗಳು ಹಾಗೂ ಕೆಲ ದಾಖಲೆಗಳು ಪತ್ತೆಯಾಗಿವೆ ಎಂದು ಶಿವಮೊಗ್ಗ ಎಸ್​​ಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ. ಕುರಿತಾಗಿ ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು ಸಂಪೂರ್ಣ ತನಿಖೆಯ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಈಶ್ವರಪ್ಪರಿಗೆ ನಾಲಿಗೆ ಕತ್ತರಿಸುವುದಾಗಿ ಬೆದರಿಕೆ ಪತ್ರ :

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಗೆ ಯಾರೋ ದುಷ್ಕರ್ಮಿಗಳು ಪತ್ರ ಬರೆದು ನಾಲಿಗೆ ಕತ್ತರಿಸುತ್ತೇವೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅನಾಮಧೇಯ ಪತ್ರವೊಂದು ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಕೆ.ಎಸ್ ಈಶ್ವರಪ್ಪ ಅವರ ಮನೆಗೆ ಬಂದಿದ್ದು ಈ ಪತ್ರವನ್ನು ತೆಗೆದು ನೋಡಿದಾಗ ಸದಾ ಮುಸಲ್ಮಾನರನ್ನು ಗೂಂಡಾಗಳು ಎಂಬುದಾಗಿ ಉಚ್ಚರಿಸುವ ನಿನ್ನ ನಾಲಗೆಯನ್ನು ಕತ್ತರಿಸುತ್ತೇವೆ, ಎಂದು ಮುಸಲ್ಮಾನರ ವಿಚಾರಕ್ಕೆ ಬಾರದಂತೆ ಬೆದರಿಕೆ ಹಾಕಿದ್ದಾರೆ.

ಕೊಡಗು : 

ವ್ಯಾಪಾರಕ್ಕೆ ಅವಕಾಶ ನೀಡಿ; ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಮನವಿ

ಕೊಡಗು ಜಿಲ್ಲೆಯಲ್ಲಿ ಆ.27 ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಆರ್ಥಿಕ ಹಿನ್ನಡೆ ಉಂಟಾಗಲಿದೆ. ಆದ್ದರಿಂದ ನಿಷೇಧಾಜ್ಞೆ ತೆರವುಗೊಳಿಸಬೇಕೆಂದು ಕೊಡಗು ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟವು ಒತ್ತಾಯಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಕುಮಾರ್ ಕೋವಿಡ್ ಸಂಕಷ್ಟದ ದಿನಗಳಿಂದ ಈಗಷ್ಟೇ ಹೊರ ಬಂದು ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿರುವ ಹೊತ್ತಲ್ಲೇ ನಿಷೇಧಾಜ್ಞೆಯಂತಹ ಕ್ರಮಗಳನ್ನು ಕೈಗೊಂಡರೆ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಎಂದು ನೋವನ್ನು ತೋಡಿಕೊಂಡಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರವನ್ನೇ ನಂಬಿ ಕೊಡಗಿನ ಸಾವಿರಾರು ಮಂದಿ ಜೀವನ ಸಾಗಿಸುತ್ತಿದ್ದಾರೆ. ವಾರಾಂತ್ಯದಲ್ಲಷ್ಟೇ ಹೆಚ್ಚಿನ ವ್ಯಾಪಾರವಾಗುತ್ತಿದ್ದು, ಈ ಸಂದರ್ಭದಲ್ಲೇ ನಿಷೇಧಾಜ್ಞೆ ಜಾರಿಯಲ್ಲಿದ್ದರೆ ಪ್ರವಾಸಿಗರ ಆಗಮನ ಕ್ಷೀಣಿಸಲಿದೆ. ಅಲ್ಲದೆ ಜಿಲ್ಲೆಯ ಬಗ್ಗೆ ತಪ್ಪು ಅಭಿಪ್ರಾಯ ರವಾನೆಯಾಗುವುದರಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಆಟೋ ಚಾಲಕನಿಂದ ಹಿಡಿದು ಹೊಟೇಲ್, ರೆಸಾರ್ಟ್ ಮಾಲೀಕನವರೆಗೂ ದೊಡ್ಡ ನಷ್ಟ ಎದುರಾಗಲಿದೆ. ಆದ್ದರಿಂದ ಜಿಲ್ಲಾಡಳಿತ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಷೇಧಾಜ್ಞೆ ಹಾಗೂ ಮದ್ಯ ಮಾರಾಟ ನಿಷೇಧದ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ತಾಕತ್ತಿದ್ದರೆ ಆರೋಪವನ್ನು ಸಾಬೀತು ಮಾಡಲಿ, ಬೋಪಯ್ಯ ಸವಾಲು : 

ಸಸ್ಪೆಂಡ್​​ ಆದ ಇಂಜಿನಿಯರ್​​ ಮರು ನೇಮಕಕ್ಕೆ 2.5 ಕೋಟಿ ಲಂಚ ಪಡೆಯಲಾಗಿದೆ ಎಂದು ವಿರಾಜಪೇಟೆ ಬಿಜೆಪಿ ಶಾಸಕರಾದ ಕೆ.ಜಿ.ಬೋಪಯ್ಯ ವಿರುದ್ಧ ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಜಿ ಬೋಪಯ್ಯ ಅವನು ಸ್ವಯಂಘೋಷಿತ ಅಧ್ಯಕ್ಷ, ಆಧಾರರಹಿತ ಸುಳ್ಳು ಹೇಳಿಕೆ ಕೊಡುವುದು, ಬ್ಲ್ಯಾಕ್ಮೇಲ್ ಮಾಡುವುದು ಅವನ ಕೆಲಸ. ಹೇಳಿಕೆ ಕೊಡುವುದು ಬಿಟ್ಟು ತಾಕತ್ತಿದ್ದರೆ ಸಾಭೀತು ಮಾಡಲಿ. ಅವನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.

ಹಿಂದೂ ಎಕಾನಮಿಕ್ ಫೋರಂ ನ ಕೊಡಗು ಘಟಕ ಉದ್ಘಾಟನೆ : 

ಮಡಿಕೇರಿ: ವಿವಿಧ ವ್ಯವಹಾರಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ಹೊಸದಾಗಿ ತೊಡಗಿಸಿಕೊಳ್ಳಲು ಇಚ್ಚಿಸುವ ಹಿಂದೂ ಸಮಾಜದ ಮಂದಿಯನ್ನು ಸಂಘಟಿಸುವ ಉದ್ಧೇಶದಿಂದ ಹಾಗೂ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಕಾರ್ಯಾಚರಿಸುತ್ತಿರುವ ಹಿಂದೂ ಎಕನಾಮಿಕ್ ಫೋರಂ ನ ಕೊಡಗು ಜಿಲ್ಲಾ ಘಟಕವು ಉದ್ಘಾಟನೆಗೊಂಡಿದೆ.ಪಟ್ಟಣದ ಹೊರ ವಲಯದ ಖಾಸಗಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಹಿಂದೂ ಎಕನಾಮಿಕ್ ಫೋರಂ ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಸ್ವಾಮಿ ವಿಜಯಾನಂದ ಕೊಡಗು ಘಟಕ ಉದ್ಘಾಟನೆ ಮಾಡಿದರು. ಈ ಕುರಿತು ಮಾತನಾಡಿದ ಅವರು ಹಿಂದೂ ಸಮಾಜದ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವ್ಯಾಪಾರಿಗಳು,, ಹೂಡಿಕೆದಾರರು, ತಂತ್ರಜ್ಞರು, ವೃತ್ತಿಪರರು, ಇತರೆ ತಜ್ಞರು ಹಾಗೂ ವ್ಯವಹಾರಿಕ ಚಿಂತನೆಯ ನಾಯಕರನ್ನು ಸ್ವಯಂ ಸಂಘಟಿಸುವ ಕಾರ್ಯವನ್ನು ಹಿಂದೂ ಎಕನಾಮಿಕ್ ಫೋರಂ ಮಾಡುತ್ತಿದ್ದು. ವಿವಿಧ ದೇಶಗಳಲ್ಲಿ ವ್ಯವಹಾರ ಯಶಸ್ಸಿನ ದಿಕ್ಕಿನತ್ತ ಸಾಗಿದೆ ಎಂದರು.

ಹಾಸನ :

ಹಾಲು ಒಕ್ಕೂಟದ ಸದಸ್ಯರಿಗೆ ಭರ್ಜರಿ ಗಿಫ್ಟ್ 

ಹಾಸನ ಹಾಲು ಒಕ್ಕೂಟ ತನ್ನ ಸದಸ್ಯರಿಗೆ ಭರ್ಜರಿ ಗಿಫ್ಟ್ ಘೋಷಣೆ ಮಾಡಿದೆ. ಒಕ್ಕೂಟದ ಅಧ್ಯಕ್ಷರಾದ ಮಾಜಿ ಸಚಿವ H.D ರೇವಣ್ಣ ಇಂದು ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಹಾಲು ಉತ್ಪಾದಕರಿಗೆ ಬಂಪರ್ ಉಡುಗೊರೆ ಘೋಷಣೆ ಮಾಡಿದ್ದಾರೆ. ರೈತರಿಗೆ ಲೀಟರ್ ಗೆ ಒಂದುಕಾಲು ರೂಪಾಯಿ ಖರೀದಿ ದರ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ ರೇವಣ್ಣ ಸೆಪ್ಟೆಂಬರ್ 1ರಿಂದಲೇ ಈ ಹಚ್ಚುವರಿ ದರ ರೈತರಿಗೆ ಸಿಗಲಿದೆ ಎಂದು ಹೇಳೋ ಮೂಲಕ ಹಾಲು ಒಕ್ಕೂಟದ ವ್ಯಾಪ್ತಿಗೆ ಬರುವ ಹಾಸನ, ಕೊಡಗು, ಚಿಕ್ಕಮಗಳೂರು ಭಾಗದ ರೈತರಿಗೆ ಗೌರಿ ಹಬ್ಬದ ಗಿಫ್ಟ್ ನೀಡಿದ್ರು. ಹಾಸನ ಹಾಲು ಒಕ್ಕೂಟ 2021-2022 ರ ಸಾಲಿನಲ್ಲಿ ಬರೋಬ್ಬರಿ 1700 ಕೋಟಿ ವ್ಯವಹಾರ ನಡೆಸಿದ್ದು, 22.77 ಕೋಟಿ ಲಾಭ ಗಳಿಸಿದೆ. ಹೆಚ್ಚುವರಿ ಲಾಭವನ್ನು ರೈತರಿಗೆ ನೀಡೋ ಸಲುವಾಗಿ ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡಲಾಗಿದ್ದು ರಾಜ್ಯದ 15 ಹಾಲು ಒಕ್ಕೂಟಗಳಲ್ಲಿಯೇ ಹಾಸನ ಹಾಲು ಒಕ್ಕೂಟ ರೈತರಿಗೆ ಹೆಚ್ಚಿನ ದರ ನೀಡಿ ಹಾಲು ಖರೀದಿಸೋ ಸಂಸ್ಥೆ ಎಂಬ ತನ್ನ ಹೆಗ್ಗಳಿಕೆಯನ್ನು ಮತ್ತೆ ಉಳಿಸಿಕೊಂಡಿದೆ. ಈ ಮೂಲಕ ರೈತರಿಗೆ ಗೌರಿ ಗಣೇಶ ಚತುರ್ಥಿಯ ಗಿಫ್ಟ್ ನೀಡಿದೆ.