ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನ ಹೆಮ್ಮೆಯ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದ ತೀರ್ಥಹಳ್ಳಿಯ ಪ್ರತಿಭಾನ್ವಿತ ಖೋ ಖೋ ಆಟಗಾರ ವಿನಯ್ (33) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ವಿನಯ್ ಗೆ ಜ್ವರ ಮೆದುಳಿಗೆ ಏರಿ ಮಣಿಪಾಲ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಕಳೆದ 7 ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ವಿನಯ್ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಒಳಪಟ್ಟಿದ್ದರು ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ವಿದ್ಯಾರ್ಥಿದೆಸೆಯಿಂದಲೇ ಖೋ ಖೋ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ಉತ್ಸಾಹದಿಂದ ಕ್ರೀಡಾಪಟುವಾಗಿದ್ದ ವಿನಯ್ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಖೋ ಖೋ ಕ್ರೀಡೆಯಲ್ಲಿ ಪ್ರತಿನಿಧಿಸಿ ಕೀರ್ತಿ ತಂದಿದ್ದರು. ಅವರ ಸಾವು ಕ್ರೀಡಾಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. 


ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ವಿನಯ್ ಕೊರೋನಾ ಬಳಿಕ ತನ್ನ ಊರಾದ ತೀರ್ಥಹಳ್ಳಿಗೆ ಮರಳಿದ್ದರು. ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯಲ್ಲಿ ಅಂಗಡಿ ಮತ್ತು ಹೋಲ್ ಸೇಲ್ ಬ್ಯುಸಿನೆಸ್ ನಡೆಸುತ್ತಿದ್ದ ವಿನಯ್ ಜೀವನವನ್ನು ಉತ್ತಮವಾಗಿಯೇ ನಡೆಸುತ್ತಿದ್ದರು. ತಂದೆ ಹೂವಪ್ಪ ಗೌಡ ಕಳೆದ ವರ್ಷ ಸಾವಿಗೀಡಾಗಿದ್ದು ಕಿರಿಯ ಪುತ್ರವಿನಯ್ ಸಾವು ಇಡೀ ಕುಟುಂಬವನ್ನು ಕಣ್ಣೀರಿಗೆ ತಳ್ಳಿದೆ. ವಿನಯ್ ಮದುವೆಯಾಗಿ 2 ವರ್ಷ ಕಳೆದಿದ್ದು ಅವರಿಗೆ 8 ತಿಂಗಳ ಹೆಣ್ಣು ಮಗುವಿದೆ. ತೀರ್ಥಹಳ್ಳಿಯಲ್ಲಿ ಅಪಾರ ಸ್ನೇಹಿತರನ್ನು ಹೊಂದಿರುವ ವಿನಯ್ ಸಾವು ತಡೆಯಲಾರದ ದುಃಖವನ್ನುಂಟು ಮಾಡಿದೆ.

ಉತ್ತಮ ಕ್ರೀಡಾ ಪ್ರತಿಭೆಯನ್ನು ಕಳೆದುಕೊಂಡ ಮಲೆನಾಡು :

ವಿನಯ್ ತೀರ್ಥಹಳ್ಳಿಯನ್ನು ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಟ್ಟಕ್ಕೆ ಕೊಂಡೊಯ್ದಿದ್ದರು. ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಹಾಗೂ ಕರ್ನಾಟಕವನ್ನು ಪ್ರತಿನಿಧಿಸಿ 2 ಬಾರಿ ರನ್ನರ್ ಆಗಿದ್ದರು. ತಮ್ಮ ಸಾಧನೆಗಾಗಿ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವ ನೀಡಿತ್ತು. ಇದೀಗ ಅವರು ತೀರ್ಥಹಳ್ಳಿಯ ಅವರ ಕುಟುಂಬ, ಅಪಾರ ಸ್ನೇಹಿತರನ್ನು ಅಗಲಿದ್ದು ಅವರ ಸ್ನೇಹಿತರು ಸಂಪೂರ್ಣ ಕುಟುಂಬವರ್ಗ ಸ್ಥಳೀಯರು ದುಃಖ ವ್ಯಕ್ತಪಡಿಸಿ ನೀರವ ಮೌನಕ್ಕೆ ಜಾರಿದ್ದಾರೆ.