ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ವಿವಾದಿತ ಹಾಗೂ ಧಾರ್ಮಿಕ ಕ್ಷೇತ್ರವಾದ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠದ ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಸೆ.5 ರವರೆಗೆ ಯಥಾಸ್ಥಿತಿ ಕಾಪಾಡಬೇಕು ಎಂದು ಕರ್ನಾಟಕ ಹೈಕೋರ್ಟ್​ ಆದೇಶ ಮಾಡಿದೆ. 

ಇದನ್ನೂ ಓದಿ : ಶೃಂಗೇರಿ : ಕೆರೆಕಟ್ಟೆ ಮಾರ್ಗದಲ್ಲಿ ಲಾರಿ ಹಾಗೂ ಕಾರ್ ನಡುವೆ ರಸ್ತೆ ಅಪಘಾತ

ಪೂಜಾ ಪದ್ಧತಿ ಕುರಿತಾಗಿ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಲಯವು ವಾದಗಳನ್ನು ಆಲಿಸಿತು. ಈ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ಕೆ.ನಾವದಗಿ, ಈ ಸಂಬಂಧ ಸರ್ಕಾರವು ಜುಲೈ 19 ರಂದು ಸಂಪುಟದ ಉಪಸಮಿತಿ ಶಿಫಾರಸಿನಂತೆ ಕ್ರಮ ಕೈಗೊಂಡಿದೆ. ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಪೂಜಾವಿಧಿ ನಡೆಸಲು ಮುಜಾವರ್ ಹಾಗೂ ಅರ್ಚಕರಿಗೆ ಅವಕಾಶ ನೀಡಲಾಗಿದೆ ಎಂದರು. ಸಚಿವ ಸಂಪುಟದ ನಿರ್ಧಾರ ಮತ್ತು ನಡಾವಳಿಗಳನ್ನು ಹೈಕೋರ್ಟ್​ಗೆ ಸಲ್ಲಿಸಲಾಯಿತು. ವಾದ ಆಲಿಸಿದ ನಂತರ ಹೈಕೋರ್ಟ್​ ಯಥಾಸ್ಥಿತಿ ಮುಂದುವರಿಸಲು ಸೂಚಿಸಿತು. ಸರ್ಕಾರದ ಕೈಗೊಂಡಿರುವ ನಿರ್ಧಾರದ ಪ್ರತಿಯನ್ನು ಅರ್ಜಿದಾರರಿಗೂ ನೀಡಬೇಕು ಎಂಬುದಾಗಿ ಸೂಚಿಸಿ, ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 5 ಕ್ಕೆ ಮುಂದೂಡಿತು.


ಇನಾಂ ದತ್ತಪೀಠದ ಗುಹೆಯ ಒಳಗೆ ನಂದಾದೀಪ ಬೆಳಗಿಸುವುದು, ದತ್ತಾತ್ರೇಯ ಪೀಠ, ಪಾದುಕೆಗಳಿಗೆ ಹೂ ಸಮರ್ಪಿಸಿ ನಿತ್ಯದ ಧಾರ್ಮಿಕ ವಿಧಿವಿಧಾನ ನಿರ್ವಹಿಸಬೇಕು. ಇದಕ್ಕಾಗಿ ಆಗಮ ಶಾಸ್ತ್ರದಲ್ಲಿ ಉತ್ತೀರ್ಣರಾದ ಅರ್ಹ ಹಿಂದೂ ಅರ್ಚಕರನ್ನು ವ್ಯವಸ್ಥಾಪನಾ ಸಮಿತಿ ನೇಮಿಸಬೇಕು ಎಂದು ಹೇಳಿತ್ತು. ಇದೇ ಸಮಿತಿಯು ಮುಸ್ಲಿಂ ಧಾರ್ಮಿಕ ವಿಧಿಗಳನ್ನು ಬಲ್ಲ ಮುಜಾವರ್ ಅವರನ್ನೂ ಪೀಠದ ಕೈಂಕರ್ಯಕ್ಕೆ ನೇಮಿಸಬೇಕು, ಮುಜಾವರ್ ಅವರು ಪ್ರತಿ ಸೋಮವಾರ ಮತ್ತು ಗುರುವಾರದ ನಮಾಜ್‌ ನಂತರ ಹಾಗೂ ಪ್ರತಿದಿನ ಸಂಜೆ ದರ್ಗಾದಲ್ಲಿ ಲೋಬಾನ ಹಾಕಿ, ಫಾತೇಹ್ ಅರ್ಪಿಸಬೇಕು ಎಂದು ಸರ್ಕಾರದ ಸುತ್ತೋಲೆಯು ಸೂಚಿಸಿತ್ತು.

ಹುಣ್ಣಿಮೆ ಪೂಜೆ, ದತ್ತಮಾಲಾ, ದತ್ತ ಜಯಂತಿ ಮತ್ತು ಇತರ ವಿಶೇಷ ಹಿಂದೂ ಧಾರ್ಮಿಕ ಆಚರಣೆಗಳನ್ನು ಸುಗಮವಾಗಿ ನೆರವೇರಿಸಲು ವ್ಯವಸ್ಥಾಪನಾ ಸಮಿತಿಯು ಕ್ರಮ ಕೈಗೊಳ್ಳಬೇಕು. ಅರ್ಚಕರು, ಮಠಗಳ ಪೀಠಾಧಿಪತಿಗಳು ಅಥವಾ ಗುರುಗಳನ್ನು ಗುಹೆಯ ಒಳಗೆ ಕರೆದೊಯ್ದು ಪಾದುಕೆಗಳಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಮರುದಿನದಿಂದ ಮೂರು ದಿನಗಳ ಕಾಲ ಉರುಸ್‌ ನಡೆಸುವ ಜವಾಬ್ದಾರಿಯನ್ನೂ ವ್ಯವಸ್ಥಾಪನಾ ಸಮಿತಿಯೇ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ದತ್ತಾತ್ರೇಯ ಪೀಠದ ವಿಚಾರದಲ್ಲಿ ಹೋರಾಟಗಳು, ವಿವಾದಗಳು ಈ ಹಿಂದಿನಿಂದಲೂ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆಯುತ್ತಲೇ ಇದ್ದು ಪ್ರಸ್ತುತ ಕೋರ್ಟ್ ಸಹ ವಿಚಾರಣೆ ನಡೆಸುತ್ತಿದ್ದು ನಿಗದಿತ ದಿನಗಳವರೆಗೆ ಯಥಾಸ್ಥಿತಿಯನ್ನು ಕಾಪಾಡುವಂತೆ ಸೂಚನೆ ನೀಡಲಾಗಿದೆ.