ಚಿಕ್ಕಮಗಳೂರು :
500 ಕೆಜಿ ಪ್ಲಾಸ್ಟಿಕ್ ವಶ :
ಚಿಕ್ಕಮಗಳೂರು ನಗರದ ರಿಲಯನ್ಸ್ ಮಾರ್ಟ್ ನ್ನು ದಾಳಿ ನಡೆಸಿದ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ನೇತೃತ್ವದ ತಂಡವು ಸುಮಾರು 500 ಕೆಜಿ ಗೂ ಹೆಚ್ಚು ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದೆ. ಅಂತೆಯೇ ಒಂದು ಲಕ್ಷ ರೂಪಾಯಿಗಳ ಭಾರೀ ಮೊತ್ತದ ದಂಡವನ್ನು ವಿಧಿಸಿದೆ. ಅಂತೆಯೇ ಪೌರಾಯುಕ್ತರ ಇನ್ನೊಂದು ತಂಡವು ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆ ಯಲ್ಲಿರುವ ಐಯ್ಯಂಗಾರ್ ಬೇಕರಿ, ಎಸ್.ಕೆ.ಎನ್. ಟ್ರೇಡರ್ಸ್ ಸೇರಿದಂತೆ ಇನ್ನಿತರ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಕ್ಕೆ ಪಡೆದುಕೊಂಡು 10,000 ರೂ ಗಳ ದಂಡವನ್ನು ಪ್ಲಾಸ್ಟಿಕ್ ಬಳಕೆ ನಡೆಸುತ್ತಿದ್ದವರ ಮೇಲೆ ವಿಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತಾಗಿ ಮಾತನಾಡಿದ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸರ್ಕಾರ ವಿಧಿಸುವ ಕಾನೂನುಗಳನ್ನು ಯಾರೂ ಉಲ್ಲಂಘನೆ ಮಾಡದೆ ತಲೆಬಾಗಿ ಅದನ್ನು ಪಾಲಿಸಬೇಕು. ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ನಿರ್ಮೂಲನೆ ಮಾಡುವ ಸಲುವಾಗಿ ಪಣತೊಡಬೇಕು ಪ್ರಸ್ತುತ ಪ್ಲಾಸ್ಟಿಕ್ ನಿಷೇಧವಿದ್ದು, ನಗರಸಭೆಯು ಚಿಕ್ಕಮಗಳೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾದರಿ ನಗರವಾಗಿ ಮಾಡಲು ಯೋಜನೆ ರೂಪಿಸಿದ್ದು ಇದಕ್ಕೆ ಪ್ರತಿಯೊಬ್ಬರೂ ಸಕರಿಸಬೇಕು ಎಂದರು. ಅಂತೆಯೇ ನಿಯಮವನ್ನು ಮೀರಿ ಪ್ಲಾಸ್ಟಿಕ್ ಬಳಕೆ ಮಾಡಿದರೆ ಅದಕ್ಕೆ ತಕ್ಕದಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜನತಾ ಪಾರ್ಟಿ ಪದಾಧಿಕಾರಿಗಳ ಆಯ್ಕೆ :
ಜನತಾಪಾರ್ಟಿಯ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಇಂದು ನಡೆಯಿತು. ಕೊಪ್ಪ ತಾಲ್ಲೂಕಿನ ಮೇಗುಂದ ಹೋಬಳಿ ಘಟಕದ ಅಧ್ಯಕ್ಷರಾಗಿ ಎತ್ತಿನೆಟ್ಟಿ ಶ್ರೀ ಜಯಂತ್ ಆಚಾರ್ಯ ಹಾಗೂ ಹೋಬಳಿ ಕಾರ್ಯದರ್ಶಿಯಾಗಿ ಶ್ರೀ ಗಣೇಶ ರವರು ಅಧಿಕಾರ ಸ್ವೀಕರಿಸಿದರು. ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧ್ಯಕ್ಷರಾಗಿ ಅಗಳಗಂಡಿಯ ಶ್ರೀ ಚಂದನ್ ಅಧಿಕಾರ ವಹಿಸಿಕೊಂಡರು. ಹಲವು ಕಾರ್ಯಕರ್ತರು ಜನತಾ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಟಿ.ಸಿ.ರಾಜೇಂದ್ರ, ಜಿಕ್ಕಮಗಳೂರು ಜಿಲ್ಲಾಧ್ಯಕ್ಷ ರಜಿತ್ ಗೌಡ ಬೇಸೂರ್, ಶೃಂಗೇರಿ ವಿಧಾನಸಭಾ ಕ್ಷೇತ್ರಾಧ್ಯಕ್ಷ ಕೆ.ಎಸ್.ವೆಂಕಪ್ಪ ಆಚಾರ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಚಾಲಕನ ಸಮೇತ ಹೊಂಡಕ್ಕೆ ಬಿದ್ದ ತ್ಯಾಜ್ಯ ತುಂಬಿದ್ದ ಆಟೋ :
ಕಸವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಡಂಪಿಂಗ್ ಯಾರ್ಡ್ ನ ಹೊಂಡಕ್ಕೆ ತ್ಯಾಜ್ಯವನ್ನು ತುಂಬಿಕೊಂಡಿದ್ದ ಆಟೋ ಬಿದ್ದಿರುವ ಘಟನೆ ವರದಿಯಾಗಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಗಟ್ಟೆ ಮಾರ್ಗದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಡಂಪಿಂಗ್ ಯಾರ್ಡ್ ನಿರ್ಮಿಸಿದೆ, ಸುತ್ತಲಿನ ಗ್ರಾಮಗಳ ಕಸವನ್ನು ಸಂಗ್ರಹಿಸಿ ಡಂಪಿಂಗ್ ಯಾರ್ಡ್ ನಲ್ಲಿ ಡಂಪ್ ಮಾಡುವ ವೇಳೆ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್ ಒಳಕ್ಕೆ ಬಿದ್ದಿದೆ. ಕಸ ವಿಲೇವಾರಿ ಘಟಕದ ಬಳಿ ಸೂಕ್ತವಾದ ರಸ್ತೆ ಇಲ್ಲದೆ ಇರುವುದರಿಂದ ಮಳೆ ಬಂದು ಸಾಕಷ್ಟು ಕೆಸರು ತುಂಬಿದ ಪರಿಣಾಮ ಆಟೋ ಕೆಳಬಿದ್ದಿದೆ ಎನ್ನಲಾಗಿದೆ. ಈ ಅವಘಡ ಸಂಭವಿಸಿದ ಕೆಲ ಸಮಯದ ಬಳಿಕದಲ್ಲಿ ಜೆಸಿಬಿಯನ್ನ ಕರೆಸಿ ಸುಮಾರು 12 ಅಡಿ ಆಳದ ಗುಂಡಿಯೊಳಕ್ಕೆ ಬಿದ್ದಿದ್ದ ಆಟೋವನ್ನು ಮೇಲಕ್ಕೆತ್ತಲಾಗಿದೆ. ಕಸದ ಆಟೋ ಜೊತೆಗೆ ಆಟೋ ಚಾಲಕ ಕೂಡ ಗುಂಡಿಯೊಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ಎಂಬಂತೆ ಯಾವುದೇ ಗಂಭೀರ ಸ್ವರೂಪದ ಸಮಸ್ಯೆಗಳು ಆತನಿಗೆ ಆಗದೆ ಸಣ್ಣ ಪುಟ್ಟ ಗಾಯಗಳಾಗಿದೆ. ಆಟೋ ಗುಂಡಿಯೊಳಕ್ಕೆ ಬಿದ್ದ ಕೂಡಲೇ ಚಾಲಕ ಮೇಲೆದ್ದು ಬಂದಿದ್ದಾನೆ ಎನ್ನಲಾಗಿದೆ.
ಕಾಲೇಜಿನಲ್ಲೆ ರೀಲ್ ಮಾಡಿದ ಪ್ರಾಂಶುಪಾಲರ ಧರ್ಮಪತ್ನಿ ; ಸಾಮಾಜಿಕ ಜಾಲತಾಣದಲ್ಲಿ ತೀವ್ರ ತರಾಟೆ
ಕೊಪ್ಪ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಧರ್ಮ ಪತ್ನಿಯೊಬ್ಬರ ‘ರೀಲ್ಸ್ ಹುಚ್ಚು’ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೊಳಗಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಧರ್ಮಪತ್ನಿ ಕಾಲೇಜಿನ ಕಾರಿಡಾರ್ ನಲ್ಲಿ ರೀಲ್ಸ್ (Short Video) ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಸ್ವತಃ ಪ್ರಾಂಶುಪಾಲರು ಕೂಡ ಇದ್ದು, ಸದ್ಯ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. 14 ಸೆಕೆಂಡ್ ಇರುವ ಈ ವೀಡಿಯೋ ತುಣುಕು ಕಾಲೇಜಿನ ವಿದ್ಯಾರ್ಥಿಗಳ ಮೊಬೈಲ್ ಸ್ಟೇಟಸ್ ಗಳಲ್ಲೇ ವೈರಲ್ ಆಗಿದ್ದು, ‘ನಾವು ಹುಡುಗೀರು ರೆಡಿ ಆಗೋದು ಊರೋರೆಲ್ಲಾ ನೋಡ್ಲಿ ಅಂತ ಜನ ಅನ್ಕೋತಾರೆ.. ಯಾರ್ ಗುರು ಹೇಳಿದ್ದು.. ನಮ್ ಹುಡ್ಗ ನೋಡ್ಲಿ ಅಂತ’ ಎಂಬ ಹಿನ್ನಲೆ ಧ್ವನಿ ಮುಗೀತಿದ್ದಾಗೆ ಮೇಡಮ್ಮು ತಮ್ಮ ಹುಡ್ಗನ್ನ ವೀಡಿಯೋದಲ್ಲಿ ತೋರಿಸಿದ್ದಾರೆ. ಮೇಲ್ಮಹಡಿಯಲ್ಲಿ ನಿಂತು ಕೆಳಗೆ ಕಾರಿಡಾರ್ ನಲ್ಲಿ ನಡ್ಕೊಂಡು ಬರ್ತಿರೋ ತಮ್ಮ ಪತಿಯನ್ನ (ಕಾಲೇಜು ಪ್ರಾಂಶುಪಾಲರು) ತೋರ್ಸಿದ್ದಾರೆ. ಇತ್ತ ಬೆಲ್ ಬೆಲ್ ಬೆಲ್ಲೂ ಹೊಡಿತಾನೆ.. ಎದೆಯಾ ಒಳಗೆ ಗಲ್ ಗಲ್.. ಎನ್ನುತ್ತಾ ರೀಲ್ಸ್ ಮುಗಿಯುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ತರಾಟೆ :
ಇನ್ನು ಈ ವೀಡಿಯೋವನ್ನು ಕಾಲೇಜಿನ ವಿದ್ಯಾರ್ಥಿಗಳ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದು, ಇದೀಗ ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇವರು ಮಾಡಿರುವ ವೀಡಿಯೋದಲ್ಲಿರುವ ಡೈಲಾಗ್ ಗಳು, ಸಾಂಗ್ ಗಳು ವಿದ್ಯಾರ್ಥಿಗಳಿಗೆ ಏನು ಸಂದೇಶ ನೀಡಿದಂತಾಗುತ್ತದೆ? ಕಾಲೇಜಿನ ಮುಖ್ಯಸ್ಥರೇ ಈ ರೀತಿ ವರ್ತಿಸಿದರೆ ವಿದ್ಯಾರ್ಥಿಗಳು ಇದನ್ನೇ ಫಾಲೋ ಮಾಡುವುದಿಲ್ಲವೇ ಎಂಬ ಪ್ರಶ್ನೆಗಳು ಮೂಡಿವೆ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಾಂಶುಪಾಲರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿಬಂದಿವೆ. ಈ ಘಟನೆಯ ಬಳಿಕದಲ್ಲಿ ಕಾಲೇಜಿನಲ್ಲಿ ಇನ್ನು ಮುಂದೆ ಟಿಕ್ ಟಾಕ್/ ರೀಲ್ಸ್ ಮಾಡುವಂತಿಲ್ಲ ಎಂದು ಪ್ರಾಂಶುಪಾಲರಿಂದಲೇ ನೋಟೀಸ್ ಬಿಡುಗಡೆಯಾಗಿದೆ. ವಿವಿಧ ಸಂಘಟನೆಗಳ ಮುಖಂಡರು ಕಾಲೇಜಿಗೆ ಭೇಟಿ ನೀಡಿದ್ದು ಪ್ರಾಂಶುಪಾಲರನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಈ ಬಳಿಕ ಪ್ರಿನ್ಸಿಪಾಲ್ ಕ್ಷಮೆ ಕೇಳಿದ್ದು ಇನ್ನು ಮುಂದೆ ಕಾಲೇಜಿನ ಆವರಣದಲ್ಲಿ ಟಿಕ್ ಟಾಕ್/ ರೀಲ್ಸ್/ಫೋಟೋ/ ವೀಡಿಯೋ ಮಾಡಲು ಅವಕಾಶವಿಲ್ಲ. ನಿಯಮ ಮೀರಿದಲ್ಲಿ ಮೇಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ವರದಿ ಮಾಡಲಾಗುವುದು ಎಂದು ನೋಟಿಸ್ ನಲ್ಲಿ ಸ್ವತಃ ಪ್ರಾಂಶುಪಾಲರೇ ತಿಳಿಸಿದ್ದಾರೆ.
ಕೊಡಗು :
ಭಾರೀ ಮಳೆಗೆ ರಸ್ತೆ ಜಲಾವೃತ :
ಕೊಡಗು ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗ್ರಾಮಸ್ಥರಿಗೆ ಜಲ ಸಂಕಷ್ಟ ಎದುರಾಗಿದೆ. ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪಯಸ್ವಿನಿ ನದಿ ತುಂಬಿ ಹರಿದು ಸಂಪಾಜೆ ಸಮೀಪದ ಕಲ್ಲುಗುಂಡಿ ರಸ್ತೆ ಸಂಪೂರ್ಣ ಜಲಾವೃತಗೊಂಡಿತು.
NDRF ಪಡೆಯಿಂದ ನದಿಯಲ್ಲಿ ಸಿಲುಕಿದ ಮರಗಳ ತೆರವು ಕಾರ್ಯಾಚರಣೆ :
ಕೊಡಗು ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಪಯಸ್ವಿನಿ ನದಿಯ ಕಿಂಡಿ ಸೇತುವೆಗೆ ಸಿಲುಕಿರುವ ಮರಗಳ ದಿಮ್ಮಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಸರ್ಕಾರ ನಿಯೋಜಿಸಿದೆ. ಗುಡ್ಡದಿಂದ ಹರಿದು ಬರುತ್ತಿರುವ ಹೊಳೆಗೆ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಸೇತುವೆಗೆ ಸಿಲುಕಿ ನೀರು ಹೊಳೆತೀರದ ಮನೆಗಳಿಗೆ ನೀರು ನುಗ್ಗಿದೆ. ನೀರು ಸರಾಗವಾಗಿ ಹರಿಯುವ ಸಲುವಾಗಿ ಅಡ್ಡಲಾಗಿ ಸಿಲುಕಿರುವ ಮರದ ದಿಮ್ಮಿಗಳನ್ನು ತೆಗೆಯುವ ಕೆಲಸವನ್ನು NDRF ಪಡೆ ನಡೆಸುತ್ತಿದೆ.
ಹಾಸನ :
ಅಪಾಯದ ಕುರಿತು ಎಚ್ಚರಿಕೆ ನೀಡಿದ ಕೋಡಿ ಶ್ರೀಗಳು :
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ಶುಭಕೃತ ನಾಮ ಸಂವತ್ಸರದ ಫಲವಾಗಿ ಮಳೆ, ಗುಡುಗು, ಮಿಂಚಿನ ಮೂಲಕ ಪ್ರಕೃತಿಯಲ್ಲಿ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡಲಿದೆ. ಬಯಲು ಸೀಮೆ ಮಲೆನಾಡು, ಮಲೆನಾಡು ಬಯಲು ಸೀಮೆಯಾಗಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. ಇನ್ನೂ ಮೇಘ ಘರ್ಜಿಸೀತು, ಭೂಮಿ ತಲ್ಲಣಗೊಂಡು, ಭೂಮಿ ಕಂಪಿಸಲಿದೆ. ಕೆರೆ ಕಟ್ಟೆ ಒಡೆದು, ಗುಡ್ಡಗಳು ಕುಸಿಯಲಿವೆ. ಹಿಂಗಾರು ಮಳೆ ಕಡಿಮೆಯಾಗಲಿದೆ. ಅಕಾಲಿಕ ಮಳೆಯಿಂದಾಗಿ ಹಲವು ಅನಾಹುತ ಉಂಟಾಗಲಿವೆ. ಇದು ಈ ಸಂವತ್ಸರದ ಕೊನೆಯವರೆಗೂ ಇರಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ.


0 Comments