ಚಿಕ್ಕಮಗಳೂರು :

ಮೇಗುಂದಾ ಹೋಬಳಿಯ ಕೃಷಿಕರಿಗೆ ಸಾಗುವಳಿ ಚೀಟಿ ವಿತರಣೆ : 

ಇಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಕಚೇರಿ ಸಭಾಂಗಣದಲ್ಲಿ ಬಗರ್ ಹುಕುಂ ಅಕ್ರಮ ಸಕ್ರಮ ಸಮಿತಿ ಸಭೆಯಲ್ಲಿ ಮೇಗುಂದ ಹೋಬಳಿ ರೈತರಿಗೆ ಫಾರಂ ನಂಬರ್ 53 ರಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿಡಿ ರಾಜೇಗೌಡ ಅವರು ಸಾಗುವಳಿ ಚೀಟಿ ವಿತರಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಹಾಗೂ ತಾಲೂಕು ಕಚೇರಿಯ ಅಧಿಕರಿವರ್ಗ ಅಕ್ರಮ ಸಕ್ರಮ ಸಮಿತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಹಾಜರಿದ್ದರು.

ಶಾಲಾ ಕಟ್ಟಡ ಉದ್ಘಾಟನೆ :

ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಪ್ಪ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ನೂತನ ಕಟ್ಟಡದ ಉದ್ಘಾಟನೆಯನ್ನು ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ ಅವರು ನೆರವೇರಿಸಿದರು, ತಾಲ್ಲೂಕು ಪಂಚಾಯತಿ. ಇ.ಓ, ಅಧ್ಯಕ್ಷರು ಮತ್ತು ಸದಸ್ಯರು ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ಪ್ರಾಚಾರ್ಯರು, ಉಪನ್ಯಾಸಕರು,ಅಧ್ಯಾಪಕರು ಪ.ಪಂ.ಸದಸ್ಯರು.ಇಂಜಿನಿಯರ್, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಭೂಕುಸಿತದಿಂದ ಮನೆ ಹಾನಿಯಾಗುವ ಭೀತಿ :

ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ವರುಣ ಅನೇಕ ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಸುರಿಯುತ್ತಿರುವ ಭಾರೀ ಮಳೆಗೆ ನಲುಗಿರುವ ಅನೇಕರು ತಮ್ಮ ಆಶ್ರಯ, ರಸ್ತೆ ಸಂಪರ್ಕ ಸೇರಿದಂತೆ ಮೊದಲಾದ ಸೌಕರ್ಯಗಳನ್ನು ಕಳೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡು ಸಮೀಪದಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿದೆ. ಉದಯ್-ವನಿತಾ ಎಂಬುವರಿಗೆ ಸೇರಿದ ಮನೆ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣಿನ ರಾಶಿ ಬಿದ್ದಿದೆ. ಬಂಡೆ, ಮರಗಳ ಸಹಿತ ಮನೆ ಮೇಲೆ ಮಣ್ಣು ಜಾರಿ ಬಂದಿದೆ. ಮನೆ ಮೇಲೆ ಮಣ್ಣು ಬಿದ್ದಿರುವ ಪರಿಣಾಮ ಹಾಗೂ ಅಪಾಯ ಇರುವುದರಿಂದ ಬೇರೆಯವರ ಮನೆಯಲ್ಲಿ ಕುಟುಂಬದವರು ಆಶ್ರಯ ಪಡೆದಿದ್ದು ಸಮರ್ಪಕವಾದ ವ್ಯವಸ್ಥೆಯನ್ನು ಕೋರಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ಕುಟುಂಬಕ್ಕೆ ಸರ್ಕಾರದ ವತಿಯಿಂದ ಆದಷ್ಟು ಶೀಘ್ರವಾಗಿ ಪರಿಹಾರ ಕಲ್ಪಿಸಬೇಕಿದೆ. ಘಟನಾ ಸ್ಥಳಕ್ಕೆ ಪಂಚಾಯತ್ ಪಿಡಿಓ ಹಾಗೂ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.


ಚಿಕ್ಕಮಗಳೂರಿನ ನೂತನ ಎಸ್ಪಿಯಾಗಿ ಖಡಕ್ ಅಧಿಕಾರಿ ಉಮಾ ಪ್ರಶಾಂತ್ ನೇಮಕ :

ಚಿಕ್ಕಮಗಳೂರು : ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕರಾಗಿದ ಅಕ್ಷಯ್ ಎಂ ಹಾಕೆ, IPS ಅವರನ್ನು ಚಿಕ್ಕಮಗಳೂರಿನಿಂದ ವರ್ಗಾವಣೆಗೊಳಿಸಿ ಸರ್ಕಾರದ ಆದೇಶ ಹೊರಡಿಸಿದೆ. ಚಿಕ್ಕಮಗಳೂರಿನ ನೂತನ ಎಸ್ಪಿಯಾಗಿ ಎಸಿಬಿ ವಿಭಾಗದ ಉಮಾ ಪ್ರಶಾಂತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮಹಿಳಾ ಐಪಿಎಸ್ ಉಮಾ ಪ್ರಶಾಂತ್ ಅವರು ಎಸಿಬಿ ಬೆಂಗಳೂರಿನ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಪತಿ ಪ್ರಶಾಂತ್ ಕುಮಾರ್ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು ಎಸ್ಪಿ ಆಗಿ ಕಾರ್ಯ ನಿರ್ವಹಿಸಿದ್ದ ಅಕ್ಷಯ್ ಹಾಕೆ ಅವರು ವರ್ಗಾವಣೆಗೊಂಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಮಹಿಳಾ ಎಸ್ಪಿ ಉಮಾ ಪ್ರಶಾಂತ್ ನೇಮಕಗೊಂಡಿದ್ದಾರೆ. ಈ ಹಿಂದೆ ಉಮಾ ಪ್ರಶಾಂತ್ ಅವರ ನೇತೃತ್ವದ 100ಕ್ಕೂ ಹೆಚ್ಚು ಅಧಿಕಾರಿಗಳನ್ನು ಹೊಂದಿದ್ದ ಎಸಿಬಿ ಅಧಿಕಾರಿಗಳ ತಂಡವು ಏಕಕಾಲದಲ್ಲಿ ಬೆಂಗಳೂರಿನ 09 ಕಡೆಗಳಲ್ಲಿ ದಾಳಿ ನಡೆಸಿದ್ದರು

ಶಿವಮೊಗ್ಗ :

ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಮನವಿ : 

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಮೇಗರವಳ್ಳಿಯಿಂದ- ತೀರ್ಥಹಳ್ಳಿಗೆ ದಿನಾಂಕ 08/08/2022ರ ಸೋಮವಾರ ಬೆಳಿಗ್ಗೆ 8.30 ಗಂಟೆಗೆ ನಾಡ ಕಚೇರಿ ಮುಂಭಾಗ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಕಿಸಾನ್ ಸೆಲ್ ವಕ್ತಾರರಾದ ಪಡುವಳ್ಳಿ ಹರ್ಷೇಂದ್ರ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ .

ಬೈಕ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ :

ತೀರ್ಥಹಳ್ಳಿ : ಬೈಕ್ ಹಾಗೂ ಓಮಿನಿ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಚಾಲನೆ ನಡೆಸುತ್ತಿದ್ದ ಶಾಲಾ ಮುಖ್ಯೋಪಾಧ್ಯಾಯರು ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಸಮೀಪ ಈ ದುರಂತ ಸಂಭವಿಸಿದ್ದು, ಕಟ್ಟೆಹಕ್ಲು ಬಳಿಯ ನಾಗರವಳ್ಳಿ ಸಮೀಪದ ರಸ್ತೆ ತಿರುವಿನಲ್ಲಿ ಓಮಿನಿ ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಶಾಲಾ ಮುಖ್ಯೋಪಾಧ್ಯಾಯ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತ ಶಾಲಾ ಮುಖ್ಯೋಪಾಧ್ಯಯರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೊಮ್ಲಾಪುರ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಶಾಲಾ ಕಾರ್ಯದ ನಿಮಿತ್ತ ತೆರಳುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಮೃತ ಶಿಕ್ಷಕ ವೆಂಕಟೇಶ್ ಅವರು ಉತ್ತಮ ಶಿಕ್ಷಕ ಎಂದು ಈ ಭಾಗದಲ್ಲಿ ಹೆಸರು ಮಾಡಿದ್ದರು. ನೆಚ್ಚಿನ ಶಿಕ್ಷಕನನ್ನು ಕಳೆದುಕೊಂಡ ಶಾಲಾ ವಿದ್ಯಾರ್ಥಿಗಳು ಹಾಗೂ ಶಾಲೆಯ ಸಹ ಶಿಕ್ಷಕರು ಮೃತರ ಸಾವಿನ ಕುರಿತು ಅತೀವ ಬೇಸರವನ್ನು ಹೊರಹಾಕಿದ್ದಾರೆ. ಸ್ಥಳೀಯರು ಕೂಡ ಉತ್ತಮ ಶಿಕ್ಷಕರಾಗಿದ್ದ ವೆಂಕಟೇಶ್ ಅವರ ಸಾವಿನ ಕುರಿತು ಸಂತಾಪ ಸೂಚಿಸಿದ್ದಾರೆ. ಘಟನಾ ಸಂಬಂಧ ತೀರ್ಥಹಳ್ಳಿಯ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು : 

ಹಿಂದೂ ಜಾಗರಣಾ ವೇದಿಕೆಯಿಂದ ಬೃಹತ್ ಪಂಜಿನ ಮೆರವಣಿಗೆ

ಅಖಂಡ ಭಾರತ ಸಂಕಲ್ಪ ದಿವಸದ ಅಂಗವಾಗಿ ಕೊಡಗಿನ ಹಿಂದೂ ಜಾಗರಣಾ ವೇದಿಕೆ ವತಿಯಿಂದ ವಿರಾಜಪೇಟೆಯಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದು ಸಾರ್ವಜನಿಕರು, ದೇಶಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಬೃಹತ್ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ. ಆಗಸ್ಟ್ 09 ರಂದು ನಡೆಯುವ ಈ ಪಂಜಿನ ಮೆರವಣಿಗೆಯಲ್ಲಿ ಅನೇಕ ಸಂಘಟನೆಗಳ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿರಲಿದ್ದಾರೆ ಎಂದು ಆಯೋಜಕರು ತಿಳಿಸಿದರು. 

ಭಾರೀ ಮಳೆಗೆ ಜನಜೀವನ ತತ್ತರ : 

ಕರಾವಳಿ ಹಾಗೂ ಮಲೆನಾಡು ಭಾಗವಾದ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದ್ದು ಸಾರ್ವಜನಿಕರು ತಮ್ಮ ಮನೆಗಳನ್ನು, ರಸ್ತೆಗಳನ್ನು ಸೇರಿದಂತೆ ಅನೇಕರು ನಿರಾಶ್ರಿತರಾಗಿದ್ದಾರೆ. ವರುಣನ ಆರ್ಭಟ ಜೋರಾಗಿದ್ದು ಹಲವೆಡೆ ಭೂಕುಸಿತ ಸಹ ಸಂಭವಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.