ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲೂಕು ಪತ್ರಕರ್ತರ ಭವನದ ಶಂಕುಸ್ಥಾಪನೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಶೃಂಗೇರಿಯಲ್ಲಿ ನಡೆಯಿತು.
ಶೃಂಗೇರಿಯ ಶಾರದಾನಗರದಲ್ಲಿ 85 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತಾಲೂಕು ಪತ್ರಕರ್ತರ ಸಂಘದ ಕಟ್ಟಡಕ್ಕೆ ಶೃಂಗೇರಿ ಶಾರದಾಪೀಠದ ವೇ.ಬ್ರ ಶ್ರೀ ದಕ್ಷಿಣಾಮೂರ್ತಿ ತಂಗಿಲಾರ ಅವರು ಶಂಕುಸ್ಥಾಪನೆ ನಡೆಸಿದರು. ಜಗನ್ಮಾತೆ ದೇವಿ ಶಾರದೆಯ ಹಾಗೂ ಉಭಯ ಶ್ರೀಗಳ ಅನುಗ್ರಹದಿಂದ ಆದಷ್ಟು ವೇಗವಾಗಿ ಈ ಕಾಮಗಾರಿಯು ಪೂರ್ಣಗೊಳ್ಳಲಿ ಎಂದು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಎಂ ರಾಜಶೇಖರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಶೋಭಾ ಅನಂತಯ್ಯ, ಜೆ.ಡಿ.ಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾಕರ್ ಎಸ್.ಶೆಟ್ಟಿ, ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಪಟ್ಟಣ ಪಂಚಾಯತ್ ನ ಅಧ್ಯಕ್ಷರು ಹಾಗೂ ಸದಸ್ಯಮಂಡಳಿಯವರು ಇದ್ದರು.
ಪತ್ರಿಕೆಯು ನೈಜತೆ ಹಾಗೂ ವಾಸ್ತವವನ್ನು ಪ್ರಚುರಪಡಿಸಬೇಕು, ಪತ್ರಕರ್ತರ ಭವನಕ್ಕೆ ಅನುದಾನ ಬಿಡುಗಡೆಯ ಕುರಿತಾಗಿ ಸಂಬಂಧಿಸಿದವರೊಂದಿಗೆ ಚರ್ಚಿಸಿ ಸರ್ಕಾರದ ವತಿಯಿಂದಲೂ ಹಣ ಬಿಡುಗಡೆಗೆ ಪ್ರಯತ್ನಿಸುತ್ತೇನೆ - ಡಿ.ಎನ್ ಜೀವರಾಜ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಸ್ವಾತಂತ್ರ್ಯಾ ಪೂರ್ವದ ಅವಧಿಯಿಂದ ಜಿಲ್ಲೆಯಲ್ಲಿ ಪತ್ರಕರ್ತರು ನಿರಂತರವಾಗಿ ಸಮಾಜದ ಹಿತಕ್ಕಾಗಿ ಅವರ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಸರ್ವರ ಸಹಕಾರದಿಂದ ಶೃಂಗೇರಿಯಲ್ಲಿ ಪತ್ರಕರ್ತರ ಭವನ ನಿರ್ಮಾಣ ಆಗಬೇಕಿದೆ - ಜಿ.ಎಂ ರಾಜಶೇಖರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ
ಆದಿಚುಂಚನಗಿರಿ ಶಾಖಾಮಠದ ಆವರಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಶ್ರೀ.ಶ್ರೀ ಗುಣನಾಥ ಸ್ವಾಮೀಜಿಗಳು ದಿವ್ಯ ಸಾನಿಧ್ಯವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪೂಜ್ಯರು ಯಾವುದನ್ನೂ ಬಯಸದೇ ನಿಸ್ವಾರ್ಥವಾಗಿ ಸಮಾಜಕ್ಕಾಗಿ ಶ್ರಮಿಸುವುದು ಪತ್ರಿಕಾ ಧರ್ಮವಾಗಿದೆ. ಜೀವಕ್ಕೇ ಮಾರಕವಾದ ಕೊರೋನ ಹೆಮ್ಮಾರಿ ಜಗತ್ತನ್ನು ಆವರಿಸಿದ ಸಂದರ್ಭದಲ್ಲೂ ಧೃತಿಗೆಡದೆ ಪತ್ರಕರ್ತರು ಕಾರ್ಯನಿರ್ವಹಿಸಿದ್ದಾರೆ. ಕೊರೋನ ರೋಗಕ್ಕೆ ತುತ್ತಾಗಿ ಮೃತಪಟ್ಟ ಪತ್ರಕರ್ತರ ಮಕ್ಕಳಿಗೆ ತಮ್ಮ ಸಂಸ್ಥೆಯಲ್ಲಿಯೇ ಉಚಿತ ಶಿಕ್ಷಣವನ್ನು ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಪತ್ರಕರ್ತರು ಶಾಸಕಾಂಗ ಹಾಗೂ ಕಾರ್ಯಾಂಗಗಳನ್ನು ಬೆಸೆಯುವ ಉತ್ತಮಕೆಲಸವನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುತ್ತಾರೆ. ಇನ್ನಷ್ಟು ಉತ್ತಮಕಾರ್ಯಗಳು ಪತ್ರಕರ್ತರಿಂದ ಸಮಾಜಕ್ಕಾಗಲಿ ಎಂದರು.
ಪತ್ರಕರ್ತರಿಂದ ನೇತ್ರದಾನ :
ಈ ಶುಭ ಸಂದರ್ಭದಲ್ಲಿ ಜಿಲ್ಲೆಯ ಪತ್ರಕರ್ತರು ತಮ್ಮ ನಂತರದಲ್ಲಿ ಉಪಯೋಗಕ್ಕೆ ಬರುವ ನೇತ್ರಗಳನ್ನು ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡು ಸಮಾಜಕ್ಕೆ ಮಾದರಿಯಾದರು. ಶ್ರೀಗಳು ನೇತ್ರದಾನ ಮಾಡಿದ ಪತ್ರಕರ್ತರಿಗೆ ಹಾರೈಸಿದರು.
ನಿರಂತರವಾಗಿ 42 ವರ್ಷಗಳ ಕಾಲ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಪ್ರಕಾಶ್ ಭಟ್, ಉರಗ ಪ್ರೇಮಿ ಅರ್ಜುನ್, ಸುಮಂಗಲ ಆನಂದಸ್ವಾಮಿ, ಚಾಲಕ ಕೃಷ್ಣ, ಚಿತ್ರಕಲಾವಿದ ಭರತ್ ಗೆ ಸನ್ಮಾನ ನಡೆಯಿತು.
ವರದಿಗಾರ ಪ್ರಶಾಂತ್, ಪಿ.ಆರ್ ಕುಮಾರ್, ನಂದೀಶ್, ಶ್ರೀಕಾಂತ್ ಅವರಿಗೆ ವಿಶೇಷ ಪುರಸ್ಕಾರ ಹಾಗೂ ಬಹುಮಾನ ವಿತರಣೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಎಂ ರಾಜಶೇಖರ್, ಶಾಸಕ ಟಿ.ಡಿ ರಾಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಖಾದರ್ ಶಾ, ಶೃಂಗೇರಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ಶೋಭಾ ಅನಂತಯ್ಯ, ಪಟ್ಟಣ ಪಂಚಾಯತ್ ಅಧ್ಯಕ್ಷ ಹರೀಶ್ ವಿ.ಶೆಟ್ಟಿ, ದಕ್ಷಿಣ ವಲಯ ಪತ್ರಕರ್ತರ ಸಂಘ ಹಾಗೂ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಜರಿದ್ದರು.


.jpeg)


0 Comments