ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅನೇಕ ಕಾರ್ಯಕರ್ತರು ಹಾಗೂ ಮುಖಂಡರು ನಿನ್ನೆ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು. 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ಶ್ರೀ ವಿದ್ಯಾಗಣಪತಿ ಸಮುದಾಯಭವನದಲ್ಲಿ ನಿನ್ನೆ ಬಾಳೆಹೊನ್ನೂರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ನಡೆಯಿತು. ಈ ಸಭೆಯಲ್ಲಿ ಬಾಳೆಹೊನ್ನೂರು ಹಾಗೂ ಖಾಂಡ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಇನ್ನೂರಕ್ಕೂ ಅಧಿಕ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಅವರ ಸಮ್ಮುಖದಲ್ಲಿ ಬಿಜೆಪಿಯನ್ನು ಸೇರ್ಪಡೆಗೊಂಡರು. ಬಿಜೆಪಿಯ ಶಾಲ್ ನ್ನು ಹಾಕುವುದರ ಮೂಲಕ ಡಿ.ಎನ್ ಜೀವರಾಜ್ ಅವರು ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿದರು. 

ಇದನ್ನೂ ಓದಿ : ಶೃಂಗೇರಿ, ಮೂಡಿಗೆರೆ ಸೇರಿ ಹಲವು ಠಾಣೆಯ ವೃತ್ತ ನಿರೀಕ್ಷಕರ ವರ್ಗಾವಣೆ.

ಈ ಕಾರ್ಯಕ್ರಮದ ಮೊದಲು ಕಳೆದ ಕೆಲದಿನಗಳ ಹಿಂದಷ್ಟೇ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮೌನಾಚರಣೆ ನಡೆಯಿತು. 

ದೇಶಕ್ಕೆ ಹಾಗೂ ರಾಜ್ಯಕ್ಕೆ ಬಿಜೆಪಿ ಸರ್ಕಾರ ಅತ್ಯಂತ ಅವಶ್ಯಕವಾಗಿದೆ, ಜನರು ಇದನ್ನು ಮನಗಂಡು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡು ಸಮಾಜದ ಹಿತಕ್ಕಾಗಿ ಶ್ರಮಿಸುವಲ್ಲಿ ಮುಂದಾಗುತ್ತಿದ್ದಾರೆ, ಹೊಸಬರು ಹಳಬರು ಎಂಬ ಯಾವುದೇ ಭಿನಾಭಿಪ್ರಾಯವಿಲ್ಲದೇ ಎಲ್ಲರೂ ಒಗ್ಗೂಡಿ ಮುನ್ನಡೆಸುವ ಸಂಕಲ್ಪ ಮಾಡೋಣ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ನೆರೆದವರನ್ನುದ್ದೇಶಿಸಿ ಮಾತನಾಡಿದರು. 

ವಿಧಾನಸಭಾ ಚುನಾವಣೆ ಸಮೀಪಿಸಲು ಇನ್ನೇನು ಕೆಲವೇ ತಿಂಗಳುಗಳ ಅಂತರವಿದ್ದು ಎಲ್ಲಾ ರಾಜಕೀಯ ಪಕ್ಷಗಳು ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಮಗ್ನರಾಗಿದ್ದು ಅಧಿಕಾರ ಪಡೆದುಕೊಳ್ಳುವ ಸಲುವಾಗಿ ಅನೇಕ ರೀತಿಯ ಕಸರತ್ತುಗಳನ್ನು ಈಗಾಗಲೇ ಆರಂಭಿಸಿದೆ. 


ಈ ಸಂದರ್ಭದಲ್ಲಿ ವೆನಿಲ್ಲಾ ಭಾಸ್ಕರ್, ನರಸಿಂಹರಾಜಪುರ ಬಿಜೆಪಿ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್, ಜೆ.ಪುಣ್ಯಪಾಲ್, ಕಲ್ಮಕ್ಕಿ ಉಮೇಶ್, ಸಂತೋಷ್ ಅರೆನೂರು, ವೆಂಕಟೇಶ್, ಪ್ರಭಾಕರ್ ಪ್ರಣಸ್ವಿ ಸೇರಿದಂತೆ ಪ್ರಮುಖರು ಹಾಜರಿದ್ದರು.