ಕೊಡಗು : (ನ್ಯೂಸ್ ಮಲ್ನಾಡ್ ವರದಿ): ಮೊಟ್ಟೆ ಕಾಟ ಮುಗಿಯವ ಮೊದಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋಳಿ ಕಾಟ ಎದುರಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹಿಂದೆ ವಿವಾದ ಎಂಬುದು ಬೆನ್ನುಹತ್ತಿದೆ. ವೀರ ಸಾವರ್ಕರ್ ಕುರಿತಾಗಿ ನೀಡಿದ ಹೇಳಿಕೆಯು ರಾಜ್ಯಾದ್ಯಂತ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು. ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾನಿ ವೀಕ್ಷಣೆ ಮಾಡಲು ಆಗಮಿಸಿದ ಸಿದ್ದರಾಮಯ್ಯ ಅವರ ವಿರುದ್ಧ ವ್ಯಾಪಕವಾದ ವಿರೋಧ ಹಾಗೂ ಗೋ ಬ್ಯಾಕ್ ಕೂಗು ಎದುರಾಗಿತ್ತು. ಪ್ರತಿಭಟನೆ ಸಮಯ ಕೊಡಗಿನಲ್ಲಿ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿ ಸಾಕಷ್ಟು ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.
ಆದರೆ ಈ ನಡುವೆ ಸಿದ್ದರಾಮಯ್ಯ ಅವರಿಗೆ ಕೋಳಿ ಕಾಟ ಎದುರಾಗಿದೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗು ಪ್ರವಾಸದ ವೇಳೆ ಮಾಂಸ ಊಟ ಮಾಡಿ ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನುವ ಆರೋಪವನ್ನು ಬಿಜೆಪಿ ಮಾಡಿದೆ. ಈ ಕುರಿತಾಗಿ ಕಾಂಗ್ರೆಸ್ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ರಾಜ್ಯ ರಾಜಕಾರಣದಲ್ಲಿ ಮಾಂಸಾಹಾರ ಸೇವನೆಮಾಡಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಆರೋಪ-ಪ್ರತ್ಯಾರೋಪಗಳು ತೀವ್ರವಾಗಿ ಸದ್ದು ಮಾಡುತ್ತಿದ್ದು ಇನ್ನು ಸಿದ್ದರಾಮಯ್ಯನವರು ಮಾಂಸವನ್ನು ಊಟ ಮಾಡಿದ್ದಾರೋ ಇಲ್ಲವೋ ಎಂಬ ಕುರಿತಾಗಿ ಸ್ವತಃ ಊಟದ ವ್ಯವಸ್ಥೆ ಮಾಡಿಸಿದ್ದ ಕಾಂಗ್ರೆಸ್ ನಾಯಕಿ ವೀಣಾ ಅಚ್ಚಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ಕೊಡ್ಲಿಪೇಟೆಯಲ್ಲಿ ಮಳೆಗಾಲದ ವಿಶೇಷ ಆಹಾರ ಕಳಲೆ ಮತ್ತು ಅಕ್ಕಿರೊಟ್ಟಿ ತಿಂದಿದ್ದಾರೆ.ಜೊತೆಗೆ ಅನ್ನ, ತರಕಾರಿ ಸಾಂಬಾರು ಸೇವಿಸಿದ್ದಾರೆ. ಸ್ವತಃ ನಾನೇ ಅವರಿಗೆ ಊಟ ಬಡಿಸಿದ್ದೇನೆ, ಸಿದ್ದರಾಮಯ್ಯ ಅವರು ಮಾಂಸಾಹಾರ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗಿಲ್ಲ ಈ ಆರೋಪ ಸುಳ್ಳು ಎಂದು ವೀಣಾ ಅಚ್ಚಯ್ಯ ತಿಳಿಸಿದರು.
ಮೊಟ್ಟೆ ಹೊಡೆದವ ಬಿಜೆಪಿಯವನು :
ಸಿದ್ದರಾಮಯ್ಯ ಅವರ ಕಾರ್ ಗೆ ಮೊಟ್ಟೆ ಹೊಡೆದ ಸಂಪತ್ ಶಾಸಕ ಅಪ್ಪಚ್ಚುರಂಜನ್ ಅವರ ಪಕ್ಕಾ ಶಿಷ್ಯ, ಇದು ಎಲ್ಲರಿಗೂ ಗೊತ್ತಿದೆ. ಎಲ್ಲೋ ನಿಂತು ಕಾಂಗ್ರೆಸ್ ಶಲ್ಯ ಹಾಕಿಕೊಂಡ ಮಾತ್ರಕ್ಕೆ ಆತ ಕಾಂಗ್ರೆಸ್ ಕಾರ್ಯಕರ್ತನಾಗುತ್ತಾನೆಯೆ ಇದೊಂದು ಹಾಸ್ಯಾಸ್ಪದ ವಿಚಾರ ಎಂದು ವೀಣಾ ಅಚ್ಚಯ್ಯ ಮಾತನಾಡಿದ್ದಾರೆ.
ಖಂಡಿತವಾಗಿಯೂ ಸಂಪತ್ ಕಾಂಗ್ರೆಸ್ಸಿಗನಲ್ಲ. ಸಿದ್ದರಾಮಯ್ಯರ ಬಗ್ಗೆ ನೋವಿದ್ದರೆ ಆತ ನಮಗೆ ಹೇಳುತ್ತಿದ್ದ. ಕೊಡಗಿನ ಶಾಸಕರು ಯಾಕೆ ಆತನನ್ನು ಹೋಗಿ ಪೊಲೀಸ್ ಠಾಣೆಯಿಂದ ಬಿಡಿಸಿಕೊಂಡು ಬರುತ್ತಾರೆ. ಪ್ರತೀತಿಯಿರುವ ಕಾವೇರಿ ಮಾತೆಯ ನಾಡಿನಲ್ಲಿ ಅವರಿಬ್ಬರು ಹೇಳುತ್ತಿರುವ ಸುಳ್ಳು ಮುಂದಿನ ದಿನಗಳಲ್ಲಿ ಅವರಿಗೇ ಮಾರಕವಾಗಿ ಪರಿಣಮಿಸಿದೆ ಎಂದರು.
ಆದರೆ ಆರೋಪಿ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ, ಕಾಂಗ್ರೆಸ್ ಶಾಲು ಹಾಕಿದ, ಜೆಡಿಎಸ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದ ಫೋಟೋಗಳು ಸಹ ಲಭ್ಯವಾಗಿದೆ. ಎಲ್ಲಾ ಪಕ್ಷಗಳ ಆಲ್ರೌಂಡರ್ ಕಾರ್ಯಕರ್ತನ ಮೊಟ್ಟೆ ಎಸೆತ ಒಂದು ವಿವಾದವಾಗಿದ್ದರೆ. ಕೋಳಿ ಮಾಂಸದ ವಿಚಾರ ಮತ್ತೊಂದು ವಿವಾದವಾಗಿದೆ.




0 Comments