ಚಿಕ್ಕಮಗಳೂರು :
ಕಿಗ್ಗಾದಲ್ಲಿ ಅತೀವೃಷ್ಟಿ ನಿವಾರಣೆಗಾಗಿ ವಿಶೇಷ ಪೂಜೆ :
ಕೆಪಿಸಿಸಿ ವತಿಯಿಂದ ಕಿಗ್ಗಾದ ಶ್ರೀ ಋಷ್ಯ ಶೃಂಗೇಶ್ವರ ದೇವರಿಗೆ ಆತೀವೃಷ್ಟಿ ನಿವಾರಣೆಗಾಗಿ ಇಂದು ವಿಶೇಷ ಪೂಜೆ ಸಲ್ಲಿಕೆ ನಡೆಯಿತು. ಶೃಂಗೇರಿ ತಾಲೂಕಿನ ಕಿಗ್ಗಾದ ಪ್ರಸಿದ್ಧ ದೇವಾಲಯ ಋಷ್ಯ ಶೃಂಗೇಶ್ವರನ ಸನ್ನಿಧಿಯಲ್ಲಿ ಡಿ.ಕೆ ಶಿವಕುಮಾರ್ ಸೂಚನೆ ಮೇರೆಗೆ ಕರ್ನಾಟಕ ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಅವರ ನೇತೃತ್ವದಲ್ಲಿ ಮಳೆ ನಿಲ್ಲಿಸುವಂತೆ ಪ್ರಾರ್ಥಿಸಿ ಕಾಂಗ್ರೆಸ್ ಪದಾಧಿಕಾರಿಗಳು ವಿಶೇಷ ಪೂಜೆಯಲ್ಲಿ ಭಾಗಿಯಾದರು.
ಆನೆ ದಾಳಿಗೆ ನೂರಕ್ಕೂ ಹೆಚ್ಚು ಅಡಿಕೆ ಮರಗಳು ನಾಶ :
ನರಸಿಂಹರಾಜಪುರ : ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಾರ್ಯ ಗ್ರಾಮದಲ್ಲಿ ಆನೆ ದಾಳಿ ನಡೆಸಿ ಅಪಾರ ಪ್ರಮಾಣದ ಅಡಿಕೆ ಮರಗಳನ್ನು ಹಾನಿಗೊಳಿಸಿದೆ. ಸಾರ್ಯ ಗ್ರಾಮದ ರಘು ಕೆ.ಟಿ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿರುವ ಕಾಡಾನೆಗಳು ನೂರಕ್ಕೂ ಅಧಿಕ ಫಸಲು ನೀಡುವ ಅಡಿಕೆ ಮರಗಳನ್ನು ನಾಶಗೊಳಿಸಿದೆ. ಆನೆ ದಾಳಿ ನಿಯಂತ್ರಣದ ಸಲುವಾಗಿ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಂಡು ಕೃಷಿಕರಿಗೆ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಸ್ಥಳೀಯರು ಕೋರಿದ್ದಾರೆ.
N.R ಪುರ : ಉಕ್ಕಿ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಕಾರು ; ಚಾಲಕನ ದುರ್ಮರಣ :
ಹಳ್ಳದಲ್ಲಿ ಕಾರೊಂದು ಕೊಚ್ಚಿ ಹೋದ ಪರಿಣಾಮ ಕಾರಿನಲ್ಲಿದ್ದ ವ್ಯಕ್ತಿ ದುರ್ಮರಣವನ್ನಪ್ಪಿರುವ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಾತ್ಕೊಳ ಬಳಿಯಲ್ಲಿ ಈ ದುರಂತ ಸಂಭವಿಸಿದ್ದು, ಕಾರು ಕೊಚ್ಚಿ ಹೋಗುವ ಸಮಯದಲ್ಲಿ ಕಾರಿನೊಳಗಿದ್ದ 51 ವರ್ಷ ಪ್ರಾಯದ ಪ್ರಸನ್ನ ಎಂಬುವವರು ದುರ್ಮರಣವನ್ನಪ್ಪಿದ್ದಾರೆ. ಸಂಬಂಧಿಕರ ಮನೆಗೆ ತೆರಳುವ ವೇಳೆಯಲ್ಲಿ ಕಾರು ಕೊಚ್ಚಿ ಹೋಗಿದೆ.
ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ :
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊರವಲಯದಲ್ಲಿ ಮಂಗಳೂರಿನಿಂದ ಕೊಪ್ಪದ ಕಡೆಗೆ ತೆರಳುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ. ಶೃಂಗೇರಿ ಹೊರವಲಯದ ದುರ್ಗಾದೇವಸ್ಥಾನದ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಈ ರಸ್ತೆ ಅವಘಡ ಸಂಭವಿಸಿದ್ದು ವಾಹನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಸ್ಥಳೀಯರು ಹಾಗೂ ಇತರೆ ವಾಹನಗಳ ಪ್ರಯಾಣಿಕರು ಕಾರನ್ನು ಎತ್ತುವಲ್ಲಿ ಸಹಕರಿಸಿದ್ದಾರೆ.
ಹಾಸನ :
ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು :
ಚನ್ನರಾಯಪಟ್ಟಣ : ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲೂಕು ಡಿ.ತುಮಕೂರು ಗ್ರಾಮದಲ್ಲಿ ನಡೆದಿದೆ. ಪಾಪಚಾರಿ ಅಲಿಯಾಸ್ ಸಣ್ಣಯ್ಯ ಎಂಬುವವರು ಮೃತಪಟ್ಟ ವ್ಯಕ್ತಿ. ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದನ್ನು ಗಮನಿಸದೇ, ಜಮೀನಿಗೆ ಕಸ ಹಾಕಲೆಂದು ಸೈಕಲ್ ನಲ್ಲಿ ತೆರಳುತ್ತಿದ್ದ ವೇಳೆ ಪ್ರವಹಿಸಿ ಈ ದುರಂತ ಸಂಭವಿಸಿದೆ. ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ವಿದ್ಯುತ್ ತಂತಿ ತುಳಿದ ಪರಿಣಾಮ ಸ್ಥಳದಲ್ಲೇ ಅವರು ದಾರುಣವಾಗಿ ಅಂತ್ಯ ಕಂಡಿದ್ದಾರೆ.
ಕಾಡಾನೆಗಳಿಂದ ಸಂಭವಿಸಿದ ಬೆಳೆಹಾನಿ :
ಆನೆದಾಳಿಯಿಂದ ಹಾನಿಯಾದ ಪ್ರಮಾಣಗಳ ಕುರಿತಾಗಿ ಸಚಿವರಿಂದ ಮಾಹಿತಿ :
ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮನುಷ್ಯರ ಮೇಲೆ ದಾಳಿ, ಆಸ್ತಿ ಹಾನಿ ಸೇರಿದಂತೆ ಒಟ್ಟು 9,011 ಪ್ರಕರಣಗಳು ಘಟಿಸಿದ್ದು, ₹6.53 ಕೋಟಿ ನಷ್ಟ ಉಂಟಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆಯ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಉತ್ತರ ನೀಡಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಅವರು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು, ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕುಗಳಲ್ಲಿ 2000ರಿಂದ ಇಲ್ಲಿವರೆಗೆ 74 ಕಾಡಾನೆಗಳನ್ನು ಸೆರೆ ಹಿಡಿದು ಪುನರ್ ವಸತಿ ಕಲ್ಪಿಸಲಾಗಿದೆ. ಆನೆ ಹಾಗೂ ಮಾನವ ಸಂಘರ್ಷ ತಪ್ಪಿಸಲು ಹಾಸನ ವಲಯದಲ್ಲಿ ಕರ್ನಾಟಕ ಸರ್ಕಾರವು 9.50 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಹಾಗೂ 14 ಕಿ.ಮೀ. ಸೋಲಾರ್ ಬೇಲಿ ಅಳವಡಿಸಿದೆ ಎಂಬುದಾಗಿ ವಿವರ ದೊರಕಿದೆ.
ಶಿವಮೊಗ್ಗ :
ಮಲೆನಾಡಿನ ಹೆಮ್ಮೆಯ ಕ್ರೀಡಾಪ್ರತಿಭೆ ವಿಧಿವಶ :
ರಾಷ್ಟ್ರಮಟ್ಟದಲ್ಲಿ ಮಿಂಚಿದ್ದ ತೀರ್ಥಹಳ್ಳಿಯ ಪ್ರತಿಭಾನ್ವಿತ ಖೋ ಖೋ ಆಟಗಾರ ವಿನಯ್ (33) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ವಿನಯ್ ಗೆ ಜ್ವರ ಮೆದುಳಿಗೆ ಏರಿ ಮಣಿಪಾಲ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಕಳೆದ 7 ದಿನದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ವಿನಯ್ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಒಳಪಟ್ಟಿದ್ದರು ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ. ವಿದ್ಯಾರ್ಥಿದೆಸೆಯಿಂದಲೇ ಖೋ ಖೋ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ಉತ್ಸಾಹದಿಂದ ಕ್ರೀಡಾಪಟುವಾಗಿದ್ದ ವಿನಯ್ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟವನ್ನು ಖೋ ಖೋ ಕ್ರೀಡೆಯಲ್ಲಿ ಪ್ರತಿನಿಧಿಸಿ ಕೀರ್ತಿ ತಂದಿದ್ದರು. ಅವರ ಸಾವು ಕ್ರೀಡಾಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.
ಗೃಹ ಸಚಿವರಿಂದ ತೀವ್ರ ನಿಗಾ ಘಟಕದ ಉದ್ಘಾಟನೆ :
ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದ ಕೊಠಡಿಯನ್ನು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟನೆ ನಡೆಸಿದರು. ಶಸ್ತ್ರಚಿಕಿತ್ಸಾ ಕೊಠಡಿಯು ಮಳೆಯಿಂದ ಸೋರುತ್ತಿದ್ದು ಈ ಕೊಠಡಿ ಸೋರದಂತೆ ಮೇಲ್ಛಾವಣಿ ಶೀಟ್‌ಗಳನ್ನು ಅಳವಡಿಸಿಲಾಗಿದ್ದು, ಇವೆರಡನ್ನೂ ಮಂಗಳವಾರ ಗೃಹಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇದೊಂದು ಸಂತೋಷದ ವಿಚಾರ. ಸಾರ್ವಜನಿಕ ಆಸ್ಪತ್ರೆಯ ಬಹಳ ದೊಡ್ಡ ಪರಿವರ್ತನೆಗೆ ಹಣ ಬಿಡುಗಡೆ ಮಾಡಿಸುವ ಮತ್ತು ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಎರಡನೇ ಬಾರಿ ಮುಳುಗಿದ ಭದ್ರಾವತಿಯ ಹೊಸ ಸೇತುವೆ :
ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಭದ್ರಾ ನದಿಗೆ ಹೆಚ್ಚಿನ ನೀರು ಬಿಟ್ಟಿರುವುದರಿಂದ ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸ ಸೇತುವೆ ಎರಡನೇ ಬಾರಿ ಮುಳುಗಡೆಯಾಯಿತು. ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.
ಕೊಡಗು :
ಧಾರಾಕಾರ ಮಳೆಗೆ ಕಾಫಿ ತೋಟದಲ್ಲಿ ಜಲಸ್ಫೋಟ :
ವಿರಾಜಪೇಟೆಯ ಬಿರುನಾಣಿ ಗ್ರಾಮದ ಬೋಸ್ ಎಂಬುವವರ ತೋಟದಲ್ಲಿ ಭಾರಿ ಪ್ರಮಾಣದಲ್ಲಿ ಜಲ ಸ್ಫೋಟವಾಗಿದೆ, ಜಲ ಸ್ಫೋಟದಿಂದಾಗಿ ಅಪಾರ ಪ್ರಮಾಣದ ಮಣ್ಣು ಕೊಚ್ಚಿ ಹೋಗಿದ್ದು ತೋಟದಲ್ಲಿ ಬೃಹದಾಕಾರದ ಕಂದಕ ನಿರ್ಮಾಣವಾಗಿದೆ. ಇದೇ ರೀತಿಯಾಗಿ ಮುಂದುವರೆದ ಲ್ಲಿ ಸಂಪೂರ್ಣವಾಗಿ ತೋಟವನ್ನು ಕಳೆದುಕೊಳ್ಳುವ ಭೀತಿಯಲ್ಲಿ ತೋಟದ ಮಾಲೀಕ ಬೋಸ್ ಇದ್ದಾರೆ. ಕಳೆದ ಐದು ದಿನಗಳಿಂದ ಭಾರಿ ಪ್ರಮಾಣದಲ್ಲಿ ಈ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು ಕೃಷಿಕರು ತತ್ತರಗೊಂಡಿದ್ದಾರೆ.
ಖತರ್ನಾಕ್ ಕಳ್ಳನ ಬಂಧನ :
ಅಂಗಡಿಯವೊಂದಕ್ಕೆ ಕಣ್ಣ ಹಾಕಿ ಲಕ್ಷಾಂತರ ರೂಪಾಯಿ ಹಣವನ್ನು ದೋಚಿದ್ದ ಖದೀಮನನ್ನು ಪೊನ್ನಂಪೇಟೆ ಪೊಲೀಸರು ಕಾರ್ಯಾಚರಣೆಯ ಮೂಲಕ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯನ್ನು ಹಾಸನ ಮೂಲದ ಮೊಹಮದ್ ಇಕ್ಬಾಲ್ ಎಂದು ಗುರುತಿಸಲಾಗಿದ್ದು ಬಂಧಿತನಿಂದ ನಗದನ್ನು ಹಾಗೂ ಕಳ್ಳತನಕ್ಕೆ ಬಳಸಿಕೊಂಡಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.


0 Comments