ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುವ ಮೊದಲೇ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಶೃಂಗೇರಿ ಪಟ್ಟಣ ಪಂಚಾಯತ್ ನ ಕೆಲವು ಸದಸ್ಯರು ಆರೋಪಿಸಿದ್ದಾರೆ.
ಇದನ್ನೂ ಓದಿ : ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಅತೀವೃಷ್ಠಿ ಹಾನಿ ಸಭೆ
ಶೃಂಗೇರಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಪಟ್ಟಣದ ವಾರ್ಡ್ ನಂ 10 ರ ಕುವೆಂಪು ಬಸ್ ನಿಲ್ದಾಣದಲ್ಲಿರುವ ಕೌ ಗೇಟ್ ಗಳನ್ನು ತೆಗೆದು ಕಾಂಕ್ರೀಟ್ ಹಾಕುವ ಕಾಮಗಾರಿ ಸೇರಿದಂತೆ ಪಟ್ಟಣ ವ್ಯಾಪ್ತಿಯ 09 ಕಾಮಗಾರಿಗಳಿಗೆ ಪಟ್ಟಣ ಪಂಚಾಯತ್ ಕಾರ್ಯಾಲಯವು ಟೆಂಡರ್ ಪ್ರಕಟಣೆಯನ್ನು ಹೊರಡಿಸಿತ್ತು. ದಿನಾಂಕ 24 ಆಗಸ್ಟ್ 2022 ರವರೆಗೆ ಗುತ್ತಿಗೆದಾರರಿಗೆ ಕೊಟೇಶನ್ ನೀಡುವ ಸಲುವಾಗಿ ಸಮಯವನ್ನು ನಿಗದಿಪಡಿಸಲಾಗಿತ್ತು ಆದರೆ ಟೆಂಡರ್ ಪ್ರಕ್ರಿಯೆ ನಡೆಯುವ ಮೊದಲೇ ಕಾಮಗಾರಿ ಆರಂಭಿಸಲಾಗಿದೆ ಎಂಬುದಾಗಿ ಪಟ್ಟಣ ಪಂಚಾಯತ್ ನ ಕೆಲ ಸದಸ್ಯರು ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಲಾಗಿದೆ.
ಕೌ ಗೇಟ್ ನ ಕೆಲವು ರಾಡುಗಳು ಎದ್ದು ಬಸ್ಸುಗಳ ಟಯರ್ ಪಂಚರ್ ಆದ ಪರಿಣಾಮ, ಹಾಗೂ ಆ ರಾಡ್ ತಾಗಿ ಓರ್ವ ವ್ಯಕ್ತಿಯ ಕಾಲಿಗೆ ಗಾಯಗಳಾದುದರಿಂದ ತುರ್ತಾಗಿ ಕಾಮಗಾರಿಯ ಅವಶ್ಯಕತೆಯಿದ್ದ ಪರಿಣಾಮ ಆ ವಾರ್ಡಿನ ಸದಸ್ಯರ ಜೊತೆಗೆ ಮಾತನಾಡಿ ಕಾಮಗಾರಿಯನ್ನು ಆರಂಭಿಸಲಾಗಿತ್ತು, ಜನರ ಅವಶ್ಯಕತೆಗೆ ಪೂರಕವಾಗಿ ಸ್ಪಂದಿಸಿದ್ದೇವೆ - ಹರೀಶ್ ವಿ. ಶೆಟ್ಟಿ, ಅಧ್ಯಕ್ಷರು, ಶೃಂಗೇರಿ ಪಟ್ಟಣ ಪಂಚಾಯತ್
ವರ್ಕ್ ಆರ್ಡರ್ ಪಡೆಯದೇ ಈ ರೀತಿಯಾಗಿ ಕಾಮಗಾರಿಗಳನ್ನು ನಡೆಸುವುದು ಸೂಕ್ತವಲ್ಲ ಎಂದು ಸದಸ್ಯರು ಈ ಸಂಬಂಧ ಆರೋಪಿಸಿದ್ದರೆ, ಕೌ ಗೇಟ್ ನ ರಾಡ್ ಬಸ್ಸುಗಳ ಟಯರ್ ಗಳಿಗೆ ತಾಗಿ ಪಂಚರ್ ಆಗಿದ್ದು, ಸಾರ್ವಜನಿಕರೋರ್ವರ ಕಾಲಿಗೆ ರಾಡ್ ತಾಗಿದ ಪರಿಣಾಮ ಅವರ ಕಾಲಿಗೆ ಗಾಯವಾಗಿದ್ದು ಅಂತೆಯೇ ಬಸ್ಟಾಂಡ್ ನಲ್ಲಿರುವ ಆಟೋ ಚಾಲಕರು ತುರ್ತು ಕಾಮಗಾರಿಗೆ ಮನವಿ ಮಾಡಿದ್ದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಕ್ರಮ ವಹಿಸುವ ಸಲುವಾಗಿ ಕಾಮಗಾರಿಯನ್ನು ಆರಂಭಿಸಲಾಗಿತ್ತು ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ತಿಳಿಸಿದ್ದಾರೆ.
ಆಕ್ಷೇಪವಿರುವ ಕಾರಣ ಹಾಗೂ ವರ್ಕ್ ಟೆಂಡರ್ ಇಲ್ಲದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದ್ದು ಆಗಸ್ಟ್ 24 ರ ಬಳಿಕದಲ್ಲಿ ಕಾಮಗಾರಿ ಮುಂದುವರೆಯಲಿದೆ.
ಒಟ್ಟಾರೆ ರಾಜಕೀಯ ಕೆಸೆರೆರೆಚಾಟದಿಂದ ಸಾರ್ವಜನಿಕರಿಗೆ ಮಾತ್ರ ತೀವ್ರ ಅನಾನುಕೂಲ ಉಂಟಾಗಿದೆ.






0 Comments