ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮಹಿಳೆ ಯೋರ್ವಳಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಗೆ ಲಕ್ಷಾಂತರ ರೂಪಾಯಿ ಹಣವನ್ನು ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಆಗುಂಬೆ ಘಾಟ್ ನಲ್ಲಿ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧ ಮುಂದುವರಿಕೆ

ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಮಹಿಳೆಗೆ ಮ್ಯಾಟ್ರಿಮೋನಿ ಯೊಂದರಲ್ಲಿ ಪರಿಚಯವಾದ ವಿಜಯರಾಜ್ ಗೌಡ ಎಂಬಾತ ವಂಚಿಸಿದ್ದಾನೆ ಎಂಬುದಾಗಿ ಮಹಿಳೆ ಆರೋಪಿಸಿದ್ದು, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂಪಾಯಿ ಹಣ ಪಡೆದುಕೊಂಡು ವಂಚಿಸಿದ್ದಾನೆ ಎನ್ನಲಾಗಿದೆ.


ಬೆಂಗಳೂರಿನಲ್ಲಿ ವಾಸವಾಗಿರುವ ವಿಜಯರಾಜ್ ಗೌಡ ಮ್ಯಾಟ್ರಿಮೋನಿ ಸೈಟ್ ನಲ್ಲಿ ಮಹಿಳೆಗೆ ಪರಿಚಯವಾಗಿದ್ದು, ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಚಾಟಿಂಗ್ ಮಾಡಿದ್ದಾರೆ. ತನ್ನ ಮನೆ ಮೇಲೆ ಐಟಿ ದಾಳಿಯಾಗಿದ್ದು, ಹಣದ ಅವಶ್ಯಕತೆಯಿದೆ ಎಂದು ವಿಜಯರಾಜ್ ಗೌಡ ಮಹಿಳೆಗೆ ಸಂದೇಶ ಕಳುಹಿಸಿದ್ದು, ಇದನ್ನು ನಂಬಿದ ಮಹಿಳೆ ಆಗಸ್ಟ್ 5 ರಿಂದ 22ರ ವರೆಗೆ ಹಂತ ಹಂತವಾಗಿ 13.55 ಲಕ್ಷ ರೂ. ಆತನ ಖಾತೆಗೆ ಹಾಕಿದ್ದಾರೆ. ಕೊಟ್ಟ ಹಣ ಕೇಳಿದಾಗ ಆತ ಕರೆ ಸ್ವೀಕರಿಸಿಲ್ಲ. ವಂಚನೆಗೊಳಗಾದ ಮಹಿಳೆ ಸಿಇಎನ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಘಟನಾ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಗೆ ವಂಚನೆಗೊಳಗಾದ ಮಹಿಳೆ ದೂರು ನೀಡಿ ಕಳೆದುಕೊಂಡಿರುವ ಹಣ ಹಾಗೂ ಆಗಿರುವ ವಂಚನೆಗೆ ನ್ಯಾಯ ಒದಗಿಸಿಕೊಡುವಂತೆ ಕೋರಿದ್ದಾರೆ. ಅಪರಿಚಿತರ ನಂಬರ್ ಗಳಿಂದ ಬರುವ ಮೆಸೇಜ್, ಲಿಂಕ್ ಮುಂತಾದ ಆಫರ್ ಗಳಂತೆ ಬಿಂಬಿಸುವ ಯಾವುದನ್ನೂ ಸಹ ಒಮ್ಮೆಲೇ ಜನರು ನಂಬಬಾರದು ಎಂಬುದಾಗಿ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ.


ದೇಶದಲ್ಲೇ ಪ್ರಥಮ ಬಾರಿಗೆ ಡ್ರೋನ್, ಯುಎವಿ ಬಳಕೆ ಕುರಿತು ಪೊಲೀಸರಿಗೆ ತರಬೇತಿ ಆರಂಭ 

ಚಿಕ್ಕಮಗಳೂರು : ಡ್ರೋನ್ ಕ್ಯಾಮೆರಾ, ಮಾನವ ರಹಿತ ವಿಮಾನ ಬಳಕೆ ಕುರಿತು ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಮಂಗಳೂರು ಪೊಲೀಸ್ ಕಮಿಷನರೇಟ್ ಘಟಕದ ಒಟ್ಟು 27 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರಾಜ್ಯದಲ್ಲಿ ಪ್ರಥಮವಾಗಿ ಪಶ್ಚಿಮ ವಲಯದಲ್ಲಿ ತರಬೇತಿ ಆರಂಭವಾಗಿದ್ದು, ಬೆಂಗಳೂರಿನ ಆಂತರಿಕ ಭದ್ರತೆ ವಿಭಾಗದ ತಜ್ಞರ ತಂಡ ತರಬೇತಿ ಆರಂಭಿಸಿದೆ. 

ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ ಅವರು ಎರಡು ವಾರಗಳ ತರಬೇತಿಯನ್ನು ಸೋಮವಾರ ಉದ್ಘಾಟಿಸಿದರು. ಪೊಲೀಸ್ ಅಧಿಕಾರಿಗಳಿಗೆ ಈ ತರಬೇತಿಯನ್ನು ದೇಶದಲ್ಲೇ ಮೊದಲು ಕರ್ನಾಟಕ ರಾಜ್ಯ ಹಮ್ಮಿಕೊಂಡಿದೆ. ತರಬೇತಿಯಲ್ಲಿ ಡ್ರೋನ್ ಕುರಿತ ವಿವರ ಮತ್ತು ಕಾನೂನುಗಳು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪರಿಕರಗಳ ಬಳಕೆ, ರಾತ್ರಿ ವೇಳೆ ಸೂಕ್ಷ್ಮ ಪ್ರದೇಶ, ಕಾಡು, ಬೆಟ್ಟ-ಗುಡ್ಡಗಳಲ್ಲಿ ಇವನ್ನು ಹಾರಿಸಿ, ಮಾಹಿತಿ ಸಂಗ್ರಹಿಸುವ ಬಗ್ಗೆ ಕೂಡ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಪೊಲೀಸರಿಗೆ ಅವಶ್ಯಕವಾಗಿರುವ ತರಬೇತಿಯನ್ನು ನೀಡಿ, ಆಧುನಿಕ ತಂತ್ರಜ್ಞಾನಗಳ ಕುರಿತು ಹೆಚ್ಚಿನ ಮಾಹಿತಿ ಹಾಗೂ ಡ್ರೋನ್ ಕ್ಯಾಮೆರಾಗಳ ಬಳಕೆಯ ಕುರಿತು ಒದಗಿಸುತ್ತಿರುವ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಡೆಯುತ್ತಿದ್ದಾರೆ.