ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ ಪರಿಣಾಮ) ಭಾರಿ ಮಳೆಯಿಂದಾಗಿ ಮಲೆನಾಡಿನ ಕುಗ್ರಾಮದಲ್ಲಿರುವ ಮನೆಯೊಂದು ಕುಸಿದುಬಿದ್ದು ಮನೆಯಲ್ಲಿದ್ದ ವಯೋವೃದ್ಧರು ನಿರಾಶ್ರಿತರರಾಗಿದ್ದರು. 

ಇದನ್ನೂ ಓದಿ : ಬಾಳೆಹೊನ್ನೂರು : ಕೆಲಸ ಮಾಡುತ್ತಿದ್ದ ಮನೆಯವರಿಗೇ 27 ಲಕ್ಷ ರೂಪಾಯಿ ವಂಚಿಸಿದ್ದ ಖತರ್ನಾಕ್ ಡ್ರೈವರ್ ಅಂದರ್

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ನಾಡು ಗ್ರಾಮದ ಮುಂಡೋಡಿ ಕುಗ್ರಾಮ ಇಂದಿಗೂ ವಿದ್ಯುತ್ ಹಾಗೂ ಸೂಕ್ತವಾದ ರಸ್ತೆ ವ್ಯವಸ್ಥೆಯನ್ನು ಹೊಂದಿಲ್ಲ. ಈ ಮಧ್ಯೆ ಸುರಿದ ಭಾರಿ ಮಳೆಗೆ ಇಲ್ಲಿನ ಸೀತಮ್ಮ ಹಾಗೂ ಶೇಷಗೌಡ್ಲು ಎಂಬ ವಯೋವೃದ್ಧರಿರುವ ಮನೆಯು ಕುಸಿತಗೊಂಡಿತ್ತು. ಈ ಕುರಿತಾಗಿ ಮಾಹಿತಿಯನ್ನು ಪಡೆದ ನ್ಯೂಸ್ ಮಲ್ನಾಡ್ ತಂಡವು ವಿಸ್ಕೃತವಾದ ವರದಿಯನ್ನು ಬಿತ್ತರಿಸಿ ಸಂಬಂಧಿಸಿದ ಅಧಿಕಾರಿಗಳ ಗಮನವನ್ನು ಸೆಳೆದಿತ್ತು ಹಾಗೂ ವಯೋವೃದ್ಧರು ಎದುರಿಸುತ್ತಿರುವ ಸಮಸ್ಯೆಯನ್ನು ಮನದಟ್ಟುಮಾಡಿತ್ತು.

ತಹಸೀಲ್ದಾರ್ ರಿಂದ ದೊರೆತ ತ್ವರಿತ ಸ್ಪಂದನೆ :  

ಈ ಕುರಿತಾಗಿ ತಕ್ಷಣವೇ ಸ್ಪಂದಿಸಿದ ಶೃಂಗೇರಿ ತಾಲೂಕಿನ ತಹಸೀಲ್ದಾರ್ ಗೌರಮ್ಮ ಅವರು ಅಗತ್ಯವಿದ್ದ ಮಾಹಿತಿಯನ್ನು ಪಡೆದು ಸಮಸ್ಯೆಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು, ಇದೆಲ್ಲದರ ಪರಿಣಾಮವಾಗಿ ಖುದ್ದಾಗಿ ಸಂಬಂಧಿಸಿದ ಅಧಿಕಾರಿಗಳೇ ಹಾನಿಗೀಡಾದ ವಯೋವೃದ್ಧರ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಈ ಕುರಿತಾದ ವರದಿಯನ್ನು ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸಲಿದೆ. 


ಮಲ್ನಾಡು ಗ್ರಾಮದ ಮುಂಡೋಡಿಯ ಕುಗ್ರಾಮಕ್ಕೆ ವಯೋವೃದ್ಧರ ಕುಸಿತಗೊಂಡ ಮನೆಯ ಪರಿಶೀಲನೆಗಾಗಿ ತೆರಳಿದ ಅಧಿಕಾರಿಗಳಾದ ಶೃಂಗೇರಿಯ ಆರ್.ಐ ವಿನಯ್, ಹಾಗೂ ಇಂಜಿನಿಯರ್ ಸೈಫುಲ್ಲಾ ಅವರು ಈ ಕುರಿತಾದ ವರದಿಯನ್ನು ತಯಾರಿಸಿದ್ದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ ವಯೋವೃದ್ಧರಿಗೆ ನೆರವಾಗುವ ಭರವಸೆಯನ್ನು ನೀಡಿದ್ದಾರೆ.

ಸ್ವಾತಂತ್ರ್ಯಪೂರ್ವದಿಂದಲೂ ಸಮರ್ಪಕವಾದ ರಸ್ತೆ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಕಾಣದೆ ಇರುವ ಈ ಕುಗ್ರಾಮಕ್ಕೆ ಸ್ವಾತಂತ್ರದ ಅಮೃತ ಮಹೋತ್ಸವದ ಈ ಸಮಯದಲ್ಲಾದರೂ ಮೂಲಭೂತ ಅವಶ್ಯಕತೆಯಾದ ರಸ್ತೆ ವಿದ್ಯುತ್ ಮತ್ತು ನೆಟ್ವರ್ಕ್ ವ್ಯವಸ್ಥೆಗಳು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಲಭಿಸಬೇಕಿದೆ ಎಂಬುದು ನ್ಯೂಸ್ ಮಲ್ನಾಡ್ ನ ಆಶಯವಾಗಿದೆ.