ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಳೆದೆರಡು ದಿನಗಳಿಂದ ಚಿಕ್ಕಮಗಳೂರು, ಮೂಡಿಗೆರೆ, ಕಳಸ ಭಾಗದಲ್ಲಿ ಭಾರೀ ಅವಾಂತರಗಳು ಸೃಷ್ಟಿಯಾಗಿದ್ದು ಮಳೆಗೆ ಮಲೆನಾಡಿಗರು ತತ್ತರಗೊಂಡಿದ್ದಾರೆ. 

ಮರಬಿದ್ದು ಗಂಟೆಗಟ್ಟಲೇ ಟ್ರಾಫಿಕ್ ಜಾಮ್ :

ಮಲೆನಾಡಿನ ರಾಷ್ಟ್ರೀಯ ಹೆದ್ದಾರಿ 173 ರ ಮೂಡಿಗೆರೆ ತಾಲೂಕಿನ ಬಿಳಗುಳ ರಸ್ತೆ ಸಮೀಪ ಮರ ಉರುಳಿ ಬಿದ್ದ ಪರಿಣಾಮ ಗಂಟೆಗಟ್ಟಲೆ ಕಿಲೋಮೀಟರ್ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಭಾರೀ ಗಾತ್ರದ ಮರಗಳು ಉರುಳುತ್ತಿದ್ದು ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಅತ್ಯಂತ ಜಾಗರೂಕತೆಯಿಂದ ಪ್ರಯಾಣಿಸಬೇಕಿದೆ.


ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ :

ಭಾರೀ ಮಳೆಗೆ ನದಿ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು ಅಜಾಗರೂಕತೆಯಿಂದ ನೀರಿನಲ್ಲಿ ವಾಹನ ಚಾಲನೆ ಮಾಡಿದ ವ್ಯಕ್ತಿ ಅದೃಷ್ಟವಶಾತ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಈ ಘಟನೆ ನಡೆದಿದ್ದು ರಸ್ತೆ ಮೇಲೆ ಐದಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ನೀರು ಹರಿಯುತ್ತಿತ್ತು. ಈ ವೇಳೆ ಕಾರು ಚಾಲನೆ ನಡೆಸಿದ ಚಾಲಕ ಕಾರಿನ ಸಮೇತ ಕೊಚ್ಚಿ ಹೋಗಿದ್ದಾನೆ. ಈ ದೃಶ್ಯವನ್ನು ಗಮನಿಸಿದ ಸ್ಥಳೀಯರು ಕೂಡಲೇ ಸಮೀಪಕ್ಕೆ ಧಾವಿಸಿ ಕಾರಿನ ಗ್ಲಾಸ್ ಒಡೆದು ಹಗ್ಗ ಕಟ್ಟಿ ಜೆಸಿಬಿ ಮೂಲಕ ಕಾರಿನಲ್ಲಿದ್ದವರ ರಕ್ಷಣೆ ಮಾಡಿದ್ದಾರೆ. 

ಸ್ಥಳೀಯರ ಸಮಯಪ್ರಜ್ಞೆ ಹಾಗೂ ತುರ್ತು ಕಾರ್ಯಾಚರಣೆಯ ಮೂಲಕ ಇಬ್ಬರ ಪ್ರಾಣ ಉಳಿದಿದ್ದು, ಹರಿಯುವ ನೀರಿನಲ್ಲಿ ಈ ರೀತಿಯ ಅಪಾಯಕಾರಿ ಚಟುವಟಿಕೆಗಳಿಗೆ ಸಾರ್ವಜನಿಕರು ಮುಂದಾಗಬಾರದು ಎಂದು ಸೂಚಿಸಲಾಗಿದೆ. 


ಮಳೆಯ ತೀವ್ರತೆಗೆ ಕುಸಿತಗೊಂಡ ಮನೆ :

ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಕೂವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆನೆಗುಂಡಿ ಬಳಿ ಮಳೆಯ ತೀವ್ರತೆಗೆ ಮನೆ ಕುಸಿತಗೊಂಡಿದೆ. ನಿನ್ನೆ ಈ ಭಾಗದ ಶಾಲಾ ಹೆಂಚುಗಳು, ಕೆಲ ಶಾಲಾ ಕಟ್ಟಡಗಳು ನೆಲಕ್ಕುರುಳಿತ್ತು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಿ.ಕೆ.ಚಂದ್ರು ಎಂಬುವವರಿಗೆ ಸೇರಿದ್ದ ಮನೆಯ ಗೋಡೆ ನೆಲಸಮವಾಗಿದ್ದು ಈ ಕುರಿತು ಅಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ಕಳುಹಿಸಿ ಅತೀ ಶೀಘ್ರವಾಗಿ ಪರಿಹಾರ ಒದಗಿಸಬೇಕೆಂದು ಮನೆಯವರು ಸರ್ಕಾರವನ್ನು ಹಾಗೂ ಜನಪ್ರತಿನಿಧಿಗಳನ್ನು ಕೋರಿದ್ದಾರೆ.

ಮನೆ ಬಿದ್ದು ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆ :

ಭಾರೀ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ನ ವಳಿಯಮ್ಮ ಎಂಬುವವರ ಮನೆಯ ಮೇಲ್ಛಾವಣಿ ಸಮೇತ ಧರೆಗುರುಳಿದೆ. ಈ ಸಮಯದಲ್ಲಿ ಅದೃಷ್ಟವಶಾತ್ ಎಂಬಂತೆ ಮನೆಯಲ್ಲಿದ್ದ ಮಹಿಳೆ ವಳಿಯಮ್ಮ ಪಾರಾಗಿದ್ದಾರೆ. ಈ ಬಾರಿ ಬಯಲುಸೀಮೆ ಭಾಗಗಳಲ್ಲೂ ಭಾರೀ ಪ್ರಮಾಣದ ಮಳೆಯಾಗುತ್ತಿದ್ದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಘಟನಾ ಸಂಬಂಧ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.