ಕೊಡಗು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಎಡೆಬಿಡದೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.

ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿ ವರುಣನ ರೌದ್ರ ನರ್ತನ ಮುಂದುವರೆದಿದೆ. ಸಂಪಾಜೆ ಬಳಿಯ ಚೆಂಬು ಗ್ರಾಮ ವ್ಯಾಪ್ತಿಯ ದಬ್ಬಡ್ಕದಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. ಭೂ ಕುಸಿತದತೀವ್ರತೆಗೆ ಇಲ್ಲಿನ ನಾಲ್ಕು ಕಾಲು ಬೆಟ್ಟ ಏಳು ಕಿ.ಮೀ ದೂರ ಕೊಚ್ಚಿ ಬಂದಿದೆ. ಭೂ ಕುಸಿತದ ವೇಳೆ ಭಾರೀ ಜಲಸ್ಪೋಟ ಉಂಟಾಗಿದ್ದು ಜನರಲ್ಲಿ ಆತಂಕ ಎದುರಾಗಿದೆ. 

ಇದನ್ನೂ ಓದಿ : ಮನೆಯ ಹಿಂಭಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ


ಭಾರೀ ಶಬ್ದ : 

ಭಯಾನಕ ಶಬ್ದದೊಂದಿಗೆ ನಾಲ್ಕು ಕಾಲು ಗುಡ್ಡ ಕೊಚ್ಚಿ ಬಂದಿದೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಭಯಭೀತರದಾದ ದಬ್ಬಡ್ಕ, ಕೊಪ್ಪ, ಅಡ್ಡಹೊಳೆ ನಿವಾಸಿಗಳು ಊರು ತೊರೆದು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಇನ್ನೂ ಭೂ ಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಡಬ್ಬಡ್ಕದ 7 ಮಂದಿ ನಿರಾಶ್ರಿತರಿಗೆ ಊರುಬೈಲು ಶಾಲೆಯನ್ನು ಕಾಳಜಿ ಕೇಂದ್ರವನ್ನಾಗಿ ತೆರೆಯಲಾಗಿದೆ. ಊಟಕ್ಕೆ ಶಾಲಾ ಅಡುಗೆ ಕೋಣೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ಜನರು ಅಪಾಯ ಎದುರಾಗುವ ಭೀತಿಯಲ್ಲಿದ್ದಾರೆ. 

ಹದಿನೈದಕ್ಕೂ ಹೆಚ್ಚು ಕಡೆಗಳಲ್ಲಿ ಸಂಭವಿಸಿದ ಭಾರೀ ಪ್ರಮಾಣದ ಭೂ ಕುಸಿತ :

ಮಳೆಯ ತೀವ್ರತೆಗೆ ನಲುಗಿರುವ ಕೊಡಗಿನ ಜನ ಭೂಕುಸಿತದಿಂದ ನಲುಗಿದ್ದಾರೆ. ಸರಣಿ ಭೂ ಕಂಪನದ ಕೇಂದ್ರ ಬಿಂದು, ಮಡಿಕೇರಿ ತಾಲೂಕಿನ ಚೆಂಬು ಗ್ರಾಮವಾಗಿದೆ. ಈ ಭಾಗದಲ್ಲಿ ಭಾರೀ ಮಳೆಯಾಗಿದ್ದು ಕಳೆದ 4 ದಿನಗಳ ಅಂತರದಲ್ಲಿ ಚೆಂಬು ಗ್ರಾಮಕ್ಕೆ ದಾಖಲೆಯ 551 ಮಿ.ಮೀ ಮಳೆ ಸುರಿದಿದೆ. ಮಳೆಯ ತೀವ್ರತೆಯು ಸಹಜವಾಗಿಯೇ ಅನಾಹುತಗಳಿಗೆ ಕಾರಣವಾಗಿದೆ. ಸರಣಿ ಭೂ ಕಂಪನಗಳಿಗೆ ತುತ್ತಾಗಿದ್ದ ಸಂಪಾಜೆ, ಚೆಂಬು, ದಬ್ಬಡ್ಕ, ಊರುಬೈಲು, ಕುದುರೆಪಾಯ, ಅರೆಕಲ್ಲು ಮತ್ತಿತ್ತರ ಕಡೆಗಳಲ್ಲಿ ಆಗಸ್ಟ್ ತಿಂಗಳ ಪ್ರಾರಂಭ ದಲ್ಲೇ 15ಕ್ಕೂ ಹೆಚ್ಚು ಕಡೆಗಳಲ್ಲಿ ಭಾರೀ ಭೂ ಕುಸಿತ ಸಂಭವಿಸಿದೆ. ಎಲ್ಲಿಯೂ ಮನೆ, ಪ್ರಾಣಹಾನಿ ನಡೆಯದ ಹಿನ್ನೆಲೆಯಲ್ಲಿ ಈ ಘಟನೆಗಳು ತಡವಾಗಿ ವರದಿಯಾಗಿದೆ.

ನಲುಗಿದ ಗಡಿ ಭಾಗದ ಜನ ಜೀವನ :

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗಡಿಭಾಗದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೆಲವೆಡೆ ಗುಡ್ಡ ಕುಸಿದಿದ್ದು ರಸ್ತೆ ಹಾನಿಯಾದ ಪ್ರಕರಣಗಳು ಸಂಭವಿಸಿದೆ. ಮನೆಯಲ್ಲಿರಲು ಕೆಲವರು ಭಯಪಡುತ್ತಿದ್ದರೆ ಮುಂದೇನೋ ಎಂಬ ಭೀತಿಯಲ್ಲಿ ಜನ ಸಮಯವನ್ನು ಕಳೆಯುವಂತಾಗಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಪಯಸ್ವಿನಿ ನದಿ ತುಂಬಿ ಹರಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿ ನೀರಿನಿಂದ ಆವೃತ್ತವಾಗಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ಗಂಟೆಗಳ ಕಾಲ ನೀರು ತುಂಬಿತ್ತು. ಇದರ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಪ್ರವಾಹದಿಂದ ಕಲ್ಲುಗುಂಡಿಯ ಕೆಲವು ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಮಳೆ ಕಡಿಮೆಯಾದ ಬಳಿ ನೀರು ತಗ್ಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತೆ ಮುಂದುವರಿದಿದೆ. ಸಂಪಾಜೆಯಿಂದ ಮಡಿಕೇರಿ ಕಡೆಗೆ ತೆರಳುವ 5 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬಿರುಕು ಕಾಣಿಸಿಕೊಂಡಿದ್ದು, ಭಾರಿ ಪ್ರಮಾಣದ ಗೂಡ್ಸ್‌ ಲಾರಿಗಳು, ಟ್ಯಾಂಕರ್‌ಗಳು ಸಂಚರಿಸಿದರೆ ರಸ್ತೆ ಕುಸಿಯುವ ಭೀತಿ ಇದ್ದು, ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್‌ ಹಾಕಲಾಗಿದೆ.


ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಅಬ್ಬರ ಹೆಚ್ಚಿದ್ದು, ಸಂಗಮದಲ್ಲಿ ನೀರಿನ ಹರಿವು ಹೆಚ್ಚಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆಯ ಕಾರಣ ಮಡಿಕೇರಿ, ಭಾಗಮಂಡಲ, ತಣ್ಣಿಮಾಣಿ, ಕರಿಕೆ ರಸ್ತೆ ಮಾರ್ಗದಲ್ಲಿ ಅಲ್ಲಲ್ಲಿ ಮರಗಳು ಉರುಳಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಬಿದ್ದಿರುವ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಮಳೆ ಕಾರಣ ಸಾರ್ವಜನಿಕ ರಸ್ತೆ ಮೇಲೆ ಮಣ್ಣು, ಕಲ್ಲು, ಮರದ ರೆಂಬೆಕೊಂಬೆಗಳು ಮುರಿದು ಬಿದ್ದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ತೆರವು ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ. ರಸ್ತೆಯ ಮೇಲಿರುವ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸಲು ಸಿಬ್ಬಂದಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಭಾಗದಲ್ಲಿ ಕೃಷಿಕರು ಬೆಳೆದ ಬೆಳೆಯೂ ಸಹ ನಾಶವಾಗಿದ್ದು ಜನ ದಿಕ್ಕುತೋಚದ ಸ್ಥಿತಿ ತಲುಪಿದ್ದಾರೆ. ಅತೀ ವೃಷ್ಟಿಯು ಕೊಡಗು ಹಾಗೂ ಮಡಿಕೇರಿ ಭಾಗದ ಜನರ ಜೀವನವನ್ನು ಅತ್ಯಂತ ದುಸ್ತರಗೊಳಿಸಿದ್ದು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಅಗತ್ಯವಿರುವ ಸ್ಥಳಗಳಲ್ಲಿ ತಮ್ಮ ಕ್ಷಿಪ್ರಕಾರ್ಯಾಚರಣೆಯನ್ನು ಮುಂದುವರೆಸಿದೆ.