ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಮಂಗಳಮುಖಿಯಾದ ಕಾರಣ ಸ್ಥಳೀಯರು ಮನೆ ಕೊಡಲು ನಿರಾಕರಣೆ ಮಾಡುತ್ತಿದ್ದಾರೆ, ಲಾಡ್ಜ್ ಗಳಿಗೆ ದುಬಾರಿ ಮೊತ್ತದ ಬಾಡಿಗೆ ಹಣ ನೀಡಿ ಸಾಕಾಗಿದೆ. ದಯಾಮರಣಕ್ಕೆ ಅನುಮತಿ ನೀಡಿ ಎಂದು ಮಂಗಳಮುಖಿ ಬೇಡಿಕೊಳ್ಳುತ್ತಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಇದನ್ನೂ ಓದಿ : ಥಲೆಸ್ಸೀಮಿಯ ಖಾಯಿಲೆಯಿಂದ ಬಳಲುತ್ತಿರುವ ಬಾಲಕನ ಚಿಕಿತ್ಸೆಗೆ ಅವಧೂತ ವಿನಯ್ ಗುರೂಜಿಯಿಂದ ನೆರವು
ಮಡಿಕೇರಿಯಲ್ಲಿ ವಾಸ ಮಾಡುತ್ತಿರುವ ಮಂಗಳಮುಖಿ ರಿಹಾನ, ಜೀವನಕ್ಕಾಗಿ ಭಿಕ್ಷಾಟನೆ ನಡೆಸುತ್ತಿದ್ದಾರೆ. ಆಶ್ರಯಕ್ಕಾಗಿ ಬಾಡಿಗೆ ಮನೆಯ ಅಗತ್ಯವಿದ್ದರೂ ಕೂಡ ಮಂಗಳಮುಖಿಯಾದ ಕಾರಣಕ್ಕೆ ಯಾರೂ ಮನೆ ನೀಡಲು ಒಪ್ಪುತ್ತಿಲ್ಲ, ಮನೆ ಖಾಲಿಯಿದ್ದರೂ ಇಲ್ಲ ಎನ್ನುತ್ತಾರೆ, ಪ್ರತಿ ದಿನ ಲಾಡ್ಜ್ ಗೆ ಹಣ ಪಾವತಿ ಮಾಡಬೇಕಾಗುತ್ತದೆ ಇದು ಕಷ್ಟಕರವಾಗಿದೆ, ಖರ್ಚು ವೆಚ್ಚಕ್ಕೆ ಅತಿಯಾದ ಸಮಸ್ಯೆ ಎದುರಾಗಿದೆ ಎಂದು ತಮ್ಮಗೋಳನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಕೊಡಗಿನ ಜಿಲ್ಲಾಧಿಕಾರಿಗಳಲ್ಲಿ ಐದಾರು ಬಾರಿ ಅರ್ಜಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನಗಳಾಗಿಲ್ಲ, ಜೀವನಕ್ಕೆ ತೀವ್ರತರಹದ ಸಮಸ್ಯೆಗಳು ಎದುರಾಗಿದ್ದು ಯಾರದೇ ಸಹಕಾರ ದೊರೆಯದ ಕಾರಣ ದಯಾಮರಣಕ್ಕೆ ಅನುವು ಮಾಡುವಂತೆ ಇಂದು ಅರ್ಜಿ ಸಲ್ಲಿಸಿದ್ದಾರೆ.
ಮಂಗಳ ಮುಖಿಯರಿಗೆ ಬದುಕುವ ಹಕ್ಕಿಲ್ಲವೇ, ನಮ್ಮನ್ನು ಸಮಾಜ ಯಾಕೆ ಇಂತಹ ಕೆಟ್ಟ ಕಣ್ಣಿನಲ್ಲಿ ನೋಡುತ್ತದೆ, ನಾವೇನು ಭಿಕ್ಷೆ ಕೇಳುತ್ತಿಲ್ಲ, ಹಣ ನೀಡುತ್ತೇವೆ ಎಂದರೂ ಮನೆ ಕೊಡುತ್ತಿಲ್ಲ ಎಂಬುದಾಗಿ ಎದುರಾಗಿರುವ ಸಮಸ್ಯೆಯ ಕುರಿತಾಗಿ ರಿಹಾನ ಅಳಲನ್ನು ತೋಡಿಕೊಂಡಿದ್ದಾರೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಕುರಿತಾಗಿ ಸೂಕ್ತವಾದ ಕ್ರಮಗಳನ್ನು ಕೈಗೊಂಡು, ಲೈಂಗಿಕ ಅಲ್ಪಸಂಖ್ಯಾತರಿಗೆ ಸೂಕ್ತವಾದ ಆಶ್ರಯವನ್ನು ಕಲ್ಪಿಸಬೇಕಿದೆ.






0 Comments