ಹಸುವಿನ ಕುತ್ತಿಗೆಗೆ ಚೂರಿ ಹಾಕಿದ ಕಿಡಿಗೇಡಿಗಳು :
ಬಾಳೆಹೊನ್ನೂರು : ಕಿಡಿಗೇಡಿಗಳು ಹಸುವಿನ ಕುತ್ತಿಗೆಗೆ ಚೂರಿ ಹಾಕಿರುವ ಘಟನೆ ಬಾಳೆಹೊನ್ನೂರಿನಲ್ಲಿ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಕಡ್ಲೇಮಕ್ಕಿಯ ಬಳಿಯಲ್ಲಿ ದುಷ್ಕರ್ಮಿಗಳು ಹಸುವಿನ ಕುತ್ತಿಗೆಗೆ ಚೂರಿಹಾಕಿದ್ದಾರೆ ಎನ್ನಲಾಗಿದ್ದು, ಹಸು ಕಟುಕರಿಂದ ತಪ್ಪಿಸಿಕೊಂಡು ಬಚಾವಾಗಿದೆ. ಆದರೆ ಅದರ ಗಂಟಲಿನ ಭಾಗದಲ್ಲಿ ಉಂಟಾಗಿರುವ ಗಾಯದ ತೀವ್ರತೆ ಹೆಚ್ಚಿದ್ದು ಹಸುವನ್ನು ಹಿಡಿದ ಬಾಳೆಹೊನ್ನೂರಿನ ಬಜರಂಗದಳದ ಕಾರ್ಯಕರ್ತರು ಕೂಡಲೇ ಅದನ್ನು ಬಾಳೆಹೊನ್ನೂರಿನ ಪಶುವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗೊಳಪಡಿಸಿದ್ದಾರೆ. ಹಸುವಿನ ಆರೈಕೆ ಮಾಡುತ್ತಿದ್ದು, ರಾಜ್ಯದಲ್ಲಿ ಗೋವುಗಳ ಸಂರಕ್ಷಣೆಗಾಗಿ ಕಾಯ್ದೆಗಳು ಜಾರಿಯಲ್ಲಿದ್ದರೂ ಕೂಡ ಇಂತಹ ಕೃತ್ಯಗಳು ನಡೆಯುತ್ತಿದ್ದು, ಗೋಹತ್ಯೆ ಎಸಗುವವರ ಮೇಲೆ ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕೆರೆಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಅಕ್ಕಿಯಿದ್ದ ಲಾರಿ :
ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕಳಸ, ಕುದುರೆಮುಖ, ಕಾರ್ಕಳ, ಮಂಗಳೂರು ಭಾಗವನ್ನು ಸಂಪರ್ಕಿಸುವ ಮಾರ್ಗಮಧ್ಯೆಯಾದ ಕೆರೆಕಟ್ಟೆಯ ಪಾಂಡರಮಕ್ಕಿ ಬಳಿಯಲ್ಲಿ ಈ ಅವಘಡ ಸಂಭವಿಸಿದ್ದು, ಅಕ್ಕಿ ತುಂಬಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಉರುಳಿದೆ. ಮರದ ಸಹಾಯದಿಂದ ಸಂಪೂರ್ಣವಾಗಿ ಉರುಳದೇ ಹಾಗೆ ನಿಂತಿದ್ದು, ಲಾರಿಯಲ್ಲಿದ್ದ ಮೂವರ ಅದೃಷ್ಟವಶಾತ್ ಎಂಬಂತೆ ಬಚಾವಾಗಿದ್ದಾರೆ. ಕಳೆದ ಕೆಲದಿನಗಳ ಹಿಂದೆಯಷ್ಟೇ ಈ ಮಾರ್ಗದಲ್ಲಿ ಲಾರಿ ಹಾಗೂ ಕಾರಿನ ನಡುವೆ ರಸ್ತೆ ಅಪಘಾತ ಸಂಭವಿಸಿತ್ತು. ಲಾರಿಯು ಕಾರ್ಕಳದ ಕಡೆಗೆ ಹೋಗುತ್ತಿತ್ತು ಎನ್ನಲಾಗಿದ್ದು, ಕಡಿದಾದ ತಿರುವು ಹಾಗೂ ಕಿರಿದಾದ ರಸ್ತೆಯನ್ನು ಹೊಂದಿರುವ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ವಾಹನ ಸವಾರರು ರಸ್ತೆ ನಿಯಮಗಳನ್ನು ಪಾಲಿಸಿಕೊಂಡು ನಿಧಾನಗತಿಯಲ್ಲಿ ಸಾಗಬೇಕಿದೆ.
ಮೂಡಿಗೆರೆಯಲ್ಲಿ ಹುಲಿದಾಳಿಗೆ ಹಸು ಬಲಿ :
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹುಲಿದಾಳಿ ಮುಂದುವರಿದಿದೆ. ಕೆಲ ದಿನಗಳ ಹಿಂದಷ್ಟೇ ಹಸುವನ್ನು ಬಳಿ ಪಡೆದುಕೊಂಡಿದ್ದ ಹುಲಿ ಮತ್ತೆ ದಾಳಿನಡೆಸಿದ್ದು ಜಾನುವಾರನ್ನು ಬಲಿಪಡೆದುಕೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾನಳ್ಳಿ ಗ್ರಾಮದಲ್ಲಿ ಹುಲಿ ದಾಳಿಗೆ ಜಾನುವಾರು ಬಲಿಯಾಗಿದೆ. ಮೂಡಿಗೆರೆಯ ಬಾನಳ್ಳಿಸುಂದರೇಶ್ ಎಂಬುವರಿಗೆ ಸೇರಿದ ಜಾನುವಾರು ಇಂದು ಮುಂಜಾನೆ ವ್ಯಾಘ್ರನ ದಾಳಿಗೆ ಬಲಿಯಾಗಿದೆ. ಆಗಾಗ ಜಾನುವಾರುಗಳನ್ನು ಹುಲಿ ಬಲಿ ಪಡೆಯುತ್ತಿದ್ದು ಸ್ಥಳೀಯರು ಆತಂಕಕ್ಕೆ ಸಿಲುಕಿದ್ದಾರೆ. ಬಾನಳ್ಳಿ, ಮತ್ತಿಕಟ್ಟೆ, ಹೊಸಳ್ಳಿ, ಭಾರತಿಬೈಲು ಸುತ್ತಮುತ್ತ ಹುಲಿ ಓಡಾಡುತ್ತಿದ್ದೆ ಎನ್ನಲಾಗಿದ್ದು ತೋಟ, ಗದ್ದೆಗಳಲ್ಲಿ ಕೆಲಸ ಮಾಡುವ ರೈತರು, ಓಡಾಡುವ ಜನಸಾಮಾನ್ಯರು ಭಯದ ವಾತಾವರಣದಲ್ಲಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಸನ:
ಅಗಿಲೆ ಯೋಗೇಶ್ ನೇತೃತ್ವದಲ್ಲಿ ಜಾಗೃತಿ ಜಾಥಾ:
ಜನರ ತೆರಿಗೆ ಹಣ, ಜನರಿಗಾಗಿ ಬಳಕೆಯಾಗಬೇಕು. ಜನರು ಕಟ್ಟುವ ತೆರಿಗೆ ಹಣದ ಮಾಹಿತಿಯನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಶೀಘ್ರ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಎಎಪಿ ಮುಖಂಡ ಅಗಿಲೆ ಯೋಗೇಶ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಬ್ಬ ಕೂಲಿ ಕಾರ್ಮಿಕ ದಿನಕ್ಕೆ, ತಿಂಗಳಿಗೆ ಎಷ್ಟು ತೆರಿಗೆ ಕಟ್ಟುತ್ತಿದ್ದಾನೆ ಎಂಬುದನ್ನು ಮನವರಿಕೆ ಮಾಡುವುದು ಜಾಥಾದ ಉದ್ದೇಶ. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು. ಸ್ಥಳೀಯರ ಶಾಸಕರು ಮೀಟರ್ ಬಡ್ಡಿಗೆ ಸಾಲ ಪಡೆದು, ನಂತರ ಸಾವಿರಾರು ಕೋಟಿ ಸಂಪಾದನೆ ಮಾಡಿದ್ದೇಗೆ, ಅಭಿವೃದ್ಧಿಗೆ ತಂದ ಅನುದಾನದಲ್ಲೂ ಲೂಟಿ ಹೊಡೆಯುತ್ತಿದ್ದಾರೆ. ಇದರ ಬಗ್ಗೆಯೂ ಅರಿವುದು ಮೂಡಿಸಿವುದು ಜಾಥಾದ ಉದ್ದೇಶ ಎಂದರು. ಪ್ರೀತಂಗೌಡ ಅವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸೀರೆ ಹಂಚಿಕೆ ಮಾಡುವ ಮೂಲಕ ನಿಮ್ಮ ಮತದ ಬೆಲೆ ಇಷ್ಟು. ಕ್ಷೇತ್ರದಲ್ಲಿ ನನಗಿಂತ ಯಾರೂ, ಏನು ಕೊಡಲು ಆಗಲ್ಲ ಎಂದು ಸಾಬೀತು ಮಾಡಲು ಹೋಗಿದ್ದಾರೆ ಎಂದು ದೂರಿದರು. ಈಗ ಪ್ರತಿಭಾ ಪುರಸ್ಕಾರ, ಬಾಗಿನದ ಹೆಸರಿನಲ್ಲಿ ಆಮಿಷ ಒಡ್ಡುತ್ತಿರುವವರು, ಇಷ್ಟು ವರ್ಷ ಮೌನವಾಗಿದ್ದುದು ಏಕೆ ಎಂದು ಪ್ರಶ್ನಿಸಿದರು. ಅವರ ಸಂಬಳ ಮಾಸಿಕ 2.5 ಲಕ್ಣ, ಆದರೆ ಸೀರೆಗಾಗಿ ಮೂರು ಕೋಟಿ ಖರ್ಚು ಮಾಡಿರುವ ಹಣ ಎಲ್ಲಿಂದ ಬಂತು. ಅವರು ಶಾಸಕರಾದ ವರ್ಷದಿಂದ ಇಂಥ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಮಾಡಿದ್ದರೆ ನಮ್ಮ ತಕರಾರಿಲ್ಲ. 50 ಸಾವಿರ ಲೀಡ್‌ನಿಂದ ಗೆಲ್ಲುತ್ತೇನೆ ಎಂದು ಹೇಳಿದ್ದವರಿಗೆ ಏಕಿಷ್ಟು ಭಯ ಎಂದರು.
ಶಿವಮೊಗ್ಗ :
ಸಾವರ್ಕರ್ ಹಾಗೂ ತಿಲಕರ ಫ್ಲೆಕ್ಸ್ ವಿತರಣೆ
ಇನ್ನೇನು ನಾಲ್ಕು ದಿನಗಳಲ್ಲಿ ನಡೆಯಲಿರುವ ಅದ್ಧೂರಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಎಲ್ಲೆಡೆ ವ್ಯಾಪಕ ತಯಾರಿಗಳು ಆರಂಭವಾಗಿದ್ದು ಅಂತೆಯೇ ಶಿವಮೊಗ್ಗದಲ್ಲೂ ಭರದ ಸಿದ್ಧತೆಗಳು ನಡೆಯುತ್ತಿದೆ. ಶಿವಮೊಗ್ಗ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗಣೇಶೋತ್ಸವ ಸಮಿತಿಯವರಿಗೆ ತಮ್ಮ ತಮ್ಮ ಪೆಂಡಾಲ್ನಲ್ಲಿ ಹಾಕಲು ಬಾಲಗಂಗಾಧರ್ ತಿಲಕ್, ವಿನಾಯಕ ದಮೋದರ್ ಸಾವರ್ಕರ್ ಫ್ಲೆಕ್ಸ್ ಹಾಗೂ ಎರಡು ಕೇಸರಿ ಧ್ವಜಗಳನ್ನು ಹಿಂದು ರಾಷ್ಟ್ರ ಭಕ್ತರ ಬಳಗ ವಿತರಿಸಿದೆ. ಈ ಮೂಲಕ ಗಣೇಶ ಮೂರ್ತಿ ನೋಡಲು ಬರುವವರಿಗೆ ದೇಶ ಭಕ್ತರ ಪರಿಚಯ ಮಾಡಲು ರಾಷ್ಟ್ರ ಭಕ್ತರ ಬಳಗ ನಿರ್ಧರಿಸಿದೆ. ಇಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಆವರಣದಲ್ಲಿ ಧ್ವಜ ಹಾಗೂ ಫ್ಲೆಕ್ಸ್ ಅನ್ನು ವಿತರಿಸಲಾಗಿದೆ.
ಬೇಡದ ಘೋಷಣೆಗಳನ್ನು ಕೂಗಿದರೆ ಕ್ರಮ ನಿಶ್ಚಿತ : ಎಸ್ಪಿ ಖಡಕ್ ಸೂಚನೆ
ಗಣೇಶೋತ್ಸವ ಆಚರಣೆ ಮಾಡಲು ಯಾರಿಗೂ ಯಾವುದೇ ಭಯ ಭೀತಿ ಬೇಡ. ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ನಡೆದ ಘಟನೆ ನಂತರ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸೆಕ್ಷನ್ 144 ಜಾರಿಯಾಗಿರುವ ಬಗ್ಗೆ ಯಾವುದೇ ಆತಂಕ ಬೇಡ. ನಿಷೇಧಾಜ್ಞೆ ಸಂದರ್ಭದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬುದರ ಬಗ್ಗೆ ಸೂಚನೆ ಇದೆ ಇಂತಹ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು. ಒಂದೇ ಸ್ಥಳದಲ್ಲಿ ಫ್ಲೆಕ್ಸ್ ಬ್ಯಾನರ್ ಬಂಟಿಂಗ್ಸ್ ಅಳವಡಿಸುವ ವಿಚಾರಕ್ಕೆ ಯಾವುದೇ ಪೈಪೋಟಿ ಬೇಡ. ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೆ ಬೇರೆಧರ್ಮಗಳ ನಿಂದನೆ ಮಾಡಬಾರದು, ಇಂತಹ ಘಟನೆಗಳು ನಡೆದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪೊಲೀಸರ ಸಲಹೆ ಸೂಚನೆಗಳನ್ನು ಯುವಕರು ಪಾಲಿಸಬೇಕು. ಮುಖಂಡರ ನಡುವೆ ಗಲಾಟೆ ನಡೆಯಲ್ಲ, ಯುವಕರ ನಡುವೆ ಗಲಾಟೆ ನಡೆಯುತ್ತದೆ. ಎಂಬುದನ್ನು ಯುವಕರು ಗಮನಿಸಬೇಕು. ಹಿರಿಯರು, ಪೊಲೀಸರ ಸಲಹೆ ಪಾಲಿಸಬೇಕು ಎಂದರು.


0 Comments