ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಗೋ ಬ್ಯಾಕ್ ಸಿದ್ದರಾಮಯ್ಯ ಘೋಷಣೆ ಕೂಗಿ ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ. 

ಇದನ್ನೂ ಓದಿ : ಮೂಡಿಗೆರೆ : ಇಸ್ಪೀಟ್ ಅಡ್ಡೆ ಮೇಲೆ ದಾಳಿ ; ಆರು ಜನರ ಬಂಧನ

ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಂಭವಿಸಿದ ಹಾನಿ ಪ್ರದೇಶಗಳ ಭೇಟಿಗೆ ಇಂದು ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಕೊಡಗು ಭೇಟಿಯನ್ನು ವಿರೋಧಿಸಿ ಕೊಡಗಿನ ತಿತಿಮತಿಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿ, ಗೋ ಬ್ಯಾಕ್ ಎಂಬ ಪೋಸ್ಟರ್ ನ್ನು ಸಿದ್ದರಾಮಯ್ಯ ಅವರ ಕಾರಿಗೆ ಎಸೆದು ಆಕ್ರೋಶವನ್ನು ಹೊರಹಾಕಿದರು. 


ನಿನ್ನೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಸಿದ್ದರಾಮಯ್ಯ ಎಂಬ ಅಭಿಯಾನ ಆರಂಭವಾಗಿತ್ತು, ಸಿದ್ದರಾಮಯ್ಯ ಹಿಂದೂ ವಿರೋಧಿ, ದೇಶಭಕ್ತ ಸಾವರ್ಕರ್ ಕುರಿತಾಗಿ ಅವಹೇಳನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಭೇಟಿಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ತೀವ್ರವಾದ ಆಕ್ರೋಶವನ್ನು ಹೊರಹಾಕಿದ್ದರು. 

ಒಂದೆಡೆ ಸಿದ್ದರಾಮಯ್ಯ ಆಗಮನಕ್ಕೆ ತೀವ್ರ ವಿರೋಧವಿದ್ದರೆ ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಪದಾಧಿಕಾರಿಗಳು ಸಿದ್ದರಾಮಯ್ಯ ಪರವಾದ ಘೋಷಣೆಗಳನ್ನು ಕೂಗುತ್ತಾ ಸ್ವಾಗತಿಸಿದರು. ಪೊಲೀಸ್ ಬಿಗಿ ಬಂದೋಬಸ್ತ್ ಈಗಾಗಲೇ ಏರ್ಪಡಿಸಲಾಗಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಧಿಕಾರಿಗಳು ಮುಂಜಾಗ್ರತೆಯನ್ನು ವಹಿಸಿದ್ದಾರೆ.