ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಗಿಡ್ಡ ಸಂವರ್ಧನಾ ಕೇಂದ್ರ ಕೊಪ್ಪ ಇವರ ವತಿಯಿಂದ ನಾಳೆ ಮಧ್ಯಾಹ್ನ ಗೋವು ನಾವು ಎಂಬ ಶೀರ್ಷಿಕೆಯಡಿಯಲ್ಲಿ ಗೋವುಗಳ ಸಂರಕ್ಷಣೆಯ ಕುರಿತಾಗಿ ಕಾರ್ಯಕ್ರಮ ಆಯೋಜನೆಗೊಂಡಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಅಪ್ಪಟ ದೇಶೀ ಸಂತತಿಯಾಗಿರುವ ಮಲೆನಾಡು ಗಿಡ್ಡ ಗೋತಳಿಯ ಬಗ್ಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮ, ಮಲೆನಾಡು ಗಿಡ್ಡ ಗೋತಳಿ ಸಾಕಾಣಿಕೆಯ ಬಗ್ಗೆ ಮಾಹಿತಿ, ಮಲೆನಾಡಿಗರ ಉಳಿವಿನಲ್ಲಿ ಮಲೆನಾಡು ಗಿಡ್ಡದ ಪಾತ್ರ, ನಶಿಸಿ ಹೋಗುತ್ತಿರುವ ಗೋತಳಿಗಳಲ್ಲಿ ಮಲೆನಾಡು ಗಿಡ್ಡ ಗೋತಳಿ ಮುಂಚೂಣಿಯಲ್ಲಿದೆಯೇ, ಮಲೆನಾಡು ಉಳಿವಿಗೆ ಮಲೆನಾಡು ಗಿಡ್ಡದ ಪಾತ್ರವೇನು ಎಂಬ ಈ ರೀತಿಯ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವ ಕಾರ್ಯಾಗಾರವಾಗಿದೆ ಎಂದು ಮಲೆನಾಡು ಗಿಡ್ಡ ಸಂವರ್ಧನಾ ಕೇಂದ್ರದ ಅಧ್ಯಕ್ಷ ಎಸ್.ಎನ್.ರಾಮಸ್ವಾಮಿ ತಿಳಿಸಿದ್ದಾರೆ.


ಗೋವು ನಾವು ಗೋವಿಗಾಗಿ ಒಂದು ಸಂಜೆ ಎಂಬ ಶೀರ್ಷಿಕೆಯಡಿಯಲ್ಲಿ ಮಧ್ಯಾಹ್ನ 3.30 ಕ್ಕೆ ಕೊಪ್ಪದ ಟೌನ್ ಹಾಲ್ ನಲ್ಲಿ ಕಾರ್ಯಕ್ರಮವನ್ನು ಮಲೆನಾಡು ಗಿಡ್ಡ ಸಂವರ್ಧನಾ ಕೇಂದ್ರ ಮೇಲುಬಿಳ್ತೆ, ಹರಿಹರಪುರ, ಕೊಪ್ಪ ಇವರ ವತಿಯಿಂದ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದ ಮುಖ್ಯ ದಿಕ್ಸೂಚಿ ಭಾಷಣಕಾರರಾಗಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ವಿಶೇಷ ಅತಿಥಿಗಳಾಗಿ ಸಮಾಜಸೇವಕರಾದ ಬೆಂಗಳೂರಿನ ಮಹೇಂದ್ರ ಮುನ್ನೋಟ್, ಪ್ರಬೋಧಿನೀ ಗುರುಕುಲದ ವ್ಯವಸ್ಥಾಪಕರಾದ ಉಮೇಶ್ ರಾವ್ ಮುಂತಾದವರ ಉಪಸ್ಥಿತಿ ಇರಲಿದೆ.

ಈ ಭಾಗದ 10 ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮಲೆನಾಡು ಗಿಡ್ಡತಳಿಗಳಿಗೆ  ಸಂಬಂಧಿಸಿದಂತೆ ಪ್ರಶ್ನೆಗಳನ್ನು ನೀಡಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದು. ನಾಳೆ ವೇದಿಕೆಯಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು ಎಂಬುದಾಗಿ ಆಯೋಜಕರು ತಿಳಿಸಿದ್ದು ಕಾರ್ಯಕ್ರಮದಲ್ಲಿ  ರೈತಮಿತ್ರರು, ಗೋಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷರಾದ ರಾಮಸ್ವಾಮಿ ಹಾಗೂ ಆಯೋಜಕರು ಕೋರಿದ್ದಾರೆ.