ಚಿಕ್ಕಮಗಳೂರು :
SDPI PFI ನಿಷೇಧಕ್ಕೆ ಎಬಿವಿಪಿ ಆಗ್ರಹ :
ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಗಳ ಹಿಂದೆ ಪ್ರಮುಖ ಕಾರಣವಾಗಿ ದೇಶದ್ರೋಹಿ ಸಂಘಟನೆಗಳಾದ ಪಿಎಫ್ಐ ಹಾಗೂ SDPI ಇದೆ ಈ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಆಗ್ರಹಿಸಿ ಇಂದು ಚಿಕ್ಕಮಗಳೂರು ಹಾಗೂ ಕೊಪ್ಪದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರಿನಲ್ಲಿ ಮತ್ತು ಕೊಪ್ಪದ ಮುಖ್ಯ ಬಸ್ ನಿಲ್ದಾಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು SDPI ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸಿದರು. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಿರಿಯ ಉಪ ವಿಭಾಗಾಧಿಕಾರಿಗಳ ವರ್ಗಾವಣೆ :
ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. H.L ನಾಗರಾಜ್ ವರ್ಗಾವಣೆಗೊಳಿಗೆ ಸರ್ಕಾರದ ಅದೇಶ ಹೊರಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಣೆ ನಡೆಸಿದ್ದ, ಅವರು ಜಿಲ್ಲೆಯ ಜನರ ಅನೇಕ ಸಂಕಷ್ಟಗಳಿಗೆ ಸ್ಪಂದಿಸಿದ್ದರು. ಹಿರಿಯ ಉಪ ವಿಭಾಗಾಧಿಕಾರಿಯಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದ ಹೆಗ್ಗಳಿಕೆ ಅವರದ್ದಾಗಿತ್ತು. ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯಿಂದ ಮುಂಬಡ್ತಿಗೊಂಡು ಅಪರ ಜಿಲ್ಲಾಧಿಕಾರಿಯಾಗಿ ಮಂಡ್ಯಕ್ಕೆ ವರ್ಗಾವಣೆಗೊಂಡಿದ್ದಾರೆ. ಈ ಹಿಂದೆ ಸರ್ಕಾರವು ಅಪರ ಜಿಲ್ಲಾಧಿಕಾರಿಯಾಗಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಿತ್ತು. ಕೆಲ ಸಮಯದ ಬಳಿಕ ಆದೇಶವನ್ನು ಸರ್ಕಾರವೇ ಹಿಂಪಡೆದಿತ್ತು. ಮಂಡ್ಯದ ಅಪರ ಜಿಲ್ಲಾಧಿಕಾರಿಯಾಗಿದ್ದ ವಿ.ಆರ್ ಶೈಲಜಾ ಅವರ ಸ್ಥಾನಕ್ಕೆ ಡಾ. ನಾಗರಾಜ್ ಅವರನ್ನು ಮುಂದಿನ ಆದೇಶದವರೆಗೆ ಸರ್ಕಾರ ನೇಮಕ ಮಾಡಿ ವರ್ಗಾವಣೆಯ ಆದೇಶ ನೀಡಿದೆ. ಅನೇಕ ಜನಪರ ಕಾರ್ಯಗಳನ್ನು ಜಿಲ್ಲೆಯ ಜನರಿಗಾಗಿ ನಡೆಸಿರುವ ಜನಪರ ಕಾಳಜಿಯನ್ನು ಹೊಂದಿರುವ ಡಾ. ನಾಗರಾಜ್ ಅವರಿಗೆ ಜಿಲ್ಲೆಯ ಜನರು ಶುಭಹಾರೈಸಿದ್ದಾರೆ.
ಶಿವಮೊಗ್ಗ :
ಗಾಂಜಾ ಮಟ್ಟಹಾಕಲು ಸೂಚನೆ :
ಗಾಂಜಾ ಬೆಳೆಯುವ ರೈತನನ್ನು ಹಿಡಿದು ಕೇಸು ಹಾಕುವುದು, ಸ್ಥಳೀಯವಾಗಿ ಗಾಂಜಾ ಮಾರುವವನನ್ನು ಹಿಡಿದು ಪ್ರಕರಣ ದಾಖಲಿಸುವುದು ನಡೆಯುತ್ತಿದೆ. ಇವುಗಳಿಂದ ಗಾಂಜಾ ಜಾಲಕ್ಕೆ ಏನೂ ಆಗುವುದಿಲ್ಲ. ಇದನ್ನು ಬೇರು ಸಮೇತ ತಾಲೂಕಿನಿಂದ ದೂರವಿಡಲು ಪೊಲೀಸ್ ಇಲಾಖೆ ಗಾಂಜಾ ತಯಾರಿಕೆಗೆ ಮೂಲಗಳನ್ನು ಬೇಧಿಸಬೇಕು ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಸೂಚನೆ ನೀಡಿದರು. ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಹಣದ ಆಸೆಗೆ ಬಡಪಾಯಿ ರೈತ ಕಚ್ಚಾ ಗಾಂಜಾವನ್ನು ಬೆಳೆದು ಮಾರುತ್ತಾನೆ, ಗಾಂಜಾವನ್ನು ವ್ಯಾಪಾರ ನಡೆಸುವ ಜಾಲವೇ ಇದ್ದು ಇವರ ಮೇಲೆ ಕೇಸ್ ಹಾಕಿದರೂ ಆ ಗಾಂಜಾ ಜಾಲದ ಪ್ರಮುಖ ಬೇರೆಯವರನ್ನು ಹಿಡಿದು ವ್ಯಾಪಾರ ಮುಂದುವರೆಸುತ್ತಾನೆ. ಅದರ ಬದಲು ಸಮಗ್ರವಾದ ತನಿಖೆ ನಡೆಸಿ ಗಾಂಜಾದ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕುವಂತೆ ಸೂಚಿಸಿದರು.
ದಾಳಿಕೋರರಿಂದ ನಶಿಸಿದ್ದ ದೇವಾಲಯ ಪತ್ತೆ :
ಸಾಗರ ತಾಲೂಕಿನ ಕೆಳದಿ ಸಮೀಪದ ಬೇಳೂರಿನಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆ ಚಿಂತನದಲ್ಲಿ ಆರು ಶತಮಾನಕ್ಕೂ ಹಿಂದೆ ದಾಳಿಕೋರರಿಂದ ನಶಿಸಿಹೋಗಿದೆ ಎನ್ನಲಾದ ದೇವಾಲಯದ ಸಮುಚ್ಛಯದ ಕುರುಹು ಇತ್ತೀಚೆಗೆ ವಿಸ್ಮಯವೆಂಬಂತೆ ಪತ್ತೆಯಾಗಿದೆ. 640 ವರ್ಷಗಳ ಹಿಂದಿನದು ಎನ್ನಲಾಗಿರುವ ಶಂಭುಲಿಂಗೇಶ್ವರ ದೇವಾಲಯ ಸಮುಚ್ಛಯ ಬೇಳೂರಿನ ಹೊಸಮನೆ ಬ್ಯಾಣದಲ್ಲಿ ಪತ್ತೆಯಾಗಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಈ ಕುರಿತಾಗಿ ವಿಷಯ ತಿಳಿದಂತೆಯೆ ನಶಿಸಿದ್ದ ದೇವಾಲಯ ಪತ್ತೆಯಾಗಿರುವುದು ಸ್ಥಳೀಯರನ್ನು ನಿಬ್ಬರಗಾಗುವಂತೆ ಮಾಡಿದೆ.
ಧ್ವಜ ಕಟ್ಟುವ ಕಾರ್ಯಕ್ಕೆ ಚಾಲನೆ :
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರದ ಪ್ರತಿಯೊಂದು ಮನೆಯ ಮೇಲೂ ಮೂರು ದಿನಗಳ ಕಾಲ ರಾಷ್ಟ್ರಧ್ವಜ ಹಾರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳಿಗೆ ಕರೆ ನೀಡಿರುವ ಹಿನ್ನೆಲೆ ರಾಷ್ಟ್ರಧ್ವಜಗಳನ್ನು ಮಾಡುವ ಕಾರ್ಯಕ್ಕೆ ಶಾಸಕ ಹರತಾಳು ಹಾಲಪ್ಪ ಚಾಲನೆ ನೀಡಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಈ ರಾಷ್ಟ್ರೀಯ ಕಾರ್ಯಕ್ರಮ ನೆನಪಿನಲ್ಲಿ ಉಳಿಯುವಂತೆ ಆಚರಣೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತ್ರಿವರ್ಣ ರಾಷ್ಟ್ರಧ್ವಜ ಭಾರತೀಯರ ಸ್ವಾಭಿಮಾನದ ಸಂಕೇತ. ಅದು ಮೂರು ದಿನ ನಮ್ಮ ಮನೆಯ ಮೇಲೆ ಹಾರಾಡುತ್ತಿದ್ದರೆ ನಾವು ಪುನೀತರಾಗುವ ಜೊತೆಗೆ ರಾಷ್ಟ್ರಕಟ್ಟುವ ಕಾರ್ಯದಲ್ಲಿ ತೊಡಗಿದಂತಾಗುತ್ತದೆ ಎಂದರು.
ಹಾಸನ :
ರೈಲುಹಳಿ ದಾಟುತ್ತಿದ್ದ ವೇಳೆ ಭೀಕರ ಅವಘಡ :
ರೈಲು ಹಳಿ ದಾಟುವ ವೇಳೆ ಹಾಕಿಯ ಮೇಲೆ ಜಾರಿಬಿದ್ದ ವಿದ್ಯಾರ್ಥಿನಿಗೆ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಹಾಸನ ಜಿಲ್ಲೆಯ ಅಂಕಪುರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದ ಪ್ರೀತಿ ಪುಟ್ಟಸ್ವಾಮಿ ಎಂಬ 22 ವರ್ಷದ ವಿದ್ಯಾರ್ಥಿನಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಆಕೆಯ ತಂದೆ ಪುಟ್ಟಸ್ವಾಮಿ ಆಕೆಯನ್ನು ಆಟೋದಲ್ಲಿ ಇಳಿಸಿದ ನಂತರ ಈ ದುರ್ಘಟನೆ ನಡೆದಿದೆ. ಹಳಿಗಳ ಇನ್ನೊಂದು ಬದಿಗೆ ದಾಟಲು ಪ್ರಯತ್ನಿಸುತ್ತಿದ್ದಾಗ ವಿದ್ಯಾರ್ಥಿನಿ ಜಾರಿ ಹಳಿ ಮೇಲೆ ಬಿದ್ದಿದ್ದಾಳೆ. ಈ ವೇಳೆ , ಮುಂದೆ ಬರುತ್ತಿದ್ದ ರೈಲು ಅವಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಘಟನಾ ಸಂಬಂಧ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ದೂರು ; ಶಾಸಕರು ಗರಂ :
ಹಾಸನದ ತಾಲೂಕು ಕಛೇರಿ ಅಧಿಕಾರಿಗಳು ಸಮಯ ಪಾಲನೆ ನಡೆಸುತ್ತಿಲ್ಲ, ಸೂಕ್ತವಾಗಿ ಕೆಲಸ ನಡೆಸುತ್ತಿಲ್ಲ ಎಂದು ಆರೋಪಿಸಿದ ಹಿನ್ನೆಲೆ ಶಾಸಕರೇ ಖುದ್ದಾಗಿ ಸ್ಥಳಕ್ಕೆ ತೆರಳಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಾಲೂಕು ಕಚೇರಿಯಲ್ಲಿ ಪರಿಶೀಲನೆ ನಡೆಸಿದ ಶಾಸಕ ಪ್ರೀತಂಗೌಡ, ಅರ್ಜಿ ವಿಲೇವಾರಿಗೆ ಅನಗತ್ಯ ವಿಳಂಬ ಮಾಡುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಹೀಗೆ ಮುಂದುವರೆದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಗರಂ ಆಗಿ ತಿಳಿಸಿದ್ದಾರೆ.


0 Comments