ಹಾಸನ : (ನ್ಯೂಸ್ ಮಲ್ನಾಡ್ ವರದಿ) ನಿಧಿ ಆಸೆತೋರಿಸಿ ದಂಪತಿಗಳ ಬಳಿಯಿದ್ದ ಹಣವನ್ನು ದೋಚಿ ಖತರ್ನಾಕ್ ಸುಳ್ಳು ಸ್ವಾಮೀಜಿ ವಂಚನೆ ಮಾಡಿರುವ ಘಟನೆ ವರದಿಯಾಗಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಮಂಜೇಗೌಡ ಲೀಲಾವತಿ ಹಣ ಕಳೆದುಕೊಂಡಿರುವ ದಂಪತಿಗಳು.ನಿಮ್ಮ ಜಮೀನಿನಲ್ಲಿ ನಿಧಿ ಇದೆ. ನನ್ನಲ್ಲಿರುವ ದೈವ ಶಕ್ತಿಯಿಂದ ಆ ನಿಧಿಯನ್ನು ಹೊರಗೆ ತೆಗೆಯುತ್ತೇನೆ ಎಂದು ನಯವಾಗಿ ನಂಬಿಸಿ ವಂಚಿಸಿದ ಸ್ವಾಮೀಜಿ, ಪೂಜೆ ಮಾಡುವ ಮೊದಲು ಮೋಸ ಹೋದ ರೈತನ ಹೊಲದಲ್ಲಿ ಚಿನ್ನಲೇಪಿತ ಮೂರು ಕೆಜಿ ಬೆಳ್ಳಿಯ ವಿಗ್ರಹವನ್ನು ಸಮಯನೋಡಿ ಹೊಂಚುಹಾಕಿ ಹೂತಿಟ್ಟಿದ್ದ. ಬೆಳ್ಳಿ ವಿಗ್ರಹವನ್ನು ಚಿನ್ನದ ವಿಗ್ರಹವೆಂದು ನಂಬಿಸಿ ದಂಪತಿಗೆ ಪಂಗನಾಮ ಹಾಕಿರುವುದು ಈ ನಂತರದಲ್ಲಿ ಬೆಳಕಿಗೆ ಬಂದಿತ್ತು. 


ನಿಧಿ ಆಸೆ ತೋರಿಸಿ ಕೈ ಬೆರಳನ್ನ ಕೊಯ್ದರು : 

ವಿಗೃಹ ತೋರಿಸಿದ ನಂತರದಲ್ಲಿ ರಾತ್ರಿ ವೇಳೆಗೆ ಜಮೀನಿಗೆ ಮಂಜೇಗೌಡ ಲೀಲಾವತಿ ದಂಪತಿಯನ್ನು ಕರೆದು ಮೊದಲು ಪೂಜೆ ಮಾಡಿ, ಜಮೀನಿನಲ್ಲಿ ಹೂತಿಟ್ಟಿದ್ದ ಚಿನ್ನಲೇಪಿತ ವಿಗ್ರಹ ಹೊರತೆಗೆದು ತೊಳೆದು ದಂಪತಿಗೆ ನೀಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆತ ಚಿನ್ನದ ವಿಗ್ರಹಕ್ಕೆ ರಕ್ತ ಅಭಿಷೇಕ ಮಾಡಬೇಕು ಎಂದು ಲೀಲಾವತಿಯ ಬೆರಳನ್ನೇ ಕೊಯ್ದಿದ್ದ. ಬೆರಳು ಕೊಯ್ದ ರಭಸಕ್ಕೆ ಮಹಿಳೆ ಬೆರಳಿನ ನರವೇ ತುಂಡಾಗಿದೆ. ನಿಧಿಯ ಆಸೆಗೆ ಹಿಂದೆ ಹೋದ ಮಹಿಳೆಗೆ ಸಂಕಷ್ಟವೇ ಎದುರಾಗಿದೆ. 

ಸ್ವಾಮೀಜಿ ನಿಧಿ ತೆಗೆದುಕೊಟ್ಟ ಒಂದು ವಾರದ ನಂತರ ಜಮೀನಿನ ಮಾಲೀಕರು ಜ್ಯೂವೆಲ್ಲರಿ ಶಾಪ್​ಗೆ ತೆರಳಿ ವಿಗ್ರಹ ಪರಿಶೀಲಿಸಿದಾಗ ಬೆಳ್ಳಿ ವಿಗ್ರಹ ಎಂಬುದು ಪತ್ತೆಯಾಗಿದೆ. ಇತ್ತ ಕಳ್ಳ ಸ್ವಾಮೀಜಿ ದಂಪತಿಗೆ ವಂಚಿಸಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹಣದ ಸಮೇತ ಕಾಲ್ಕಿತ್ತಿದ್ದಾನೆ ಎನ್ನಲಾಗಿದ್ದು ಗಾಯಗೊಂಡಿದ್ದ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.  

ಇಂತಹ ಅನೇಕ ವಂಚಕ ಕೃತ್ಯಗಳನ್ನು ಕೆಲ ಕಳ್ಳ ಸ್ವಾಮೀಜಿಗಳು ಎಸಗುತ್ತಿದ್ದು ಜನ ಸಾಮಾನ್ಯರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಈ ಕುರಿತಾಗಿ ಹೆಚ್ಚಿನ ಜಾಗರೂಕತೆಯಿಂದ ವ್ಯವಹರಿಸಬೇಕಿದೆ.