ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದ್ದು ಕಳೆದ ಮೂರು ದಿನಗಳಿಂದ ಮೂಡಿಗೆರೆ ತಾಲೂಕಿನ ಅನೇಕ ಭಾಗಗಳಲ್ಲಿ ಭಾರೀ ಪ್ರಮಾಣದ ಹಾನಿಗಳು ಸಂಭವಿಸಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಿನ್ನೆ ತಡರಾತ್ರಿ ಭಾರಿ ಪ್ರಮಾಣದ ಮರ ಒಂದು ಮನೆಯ ಮೇಲೆ ಉರುಳಿ ಇಬ್ಬರು ದುರ್ಮರಣವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ : ಶೃಂಗೇರಿ ಪಟ್ಟಣದಲ್ಲಿ ಬೆಳ್ಳಂ ಬೆಳಗ್ಗೆ ಕಾರು ಹಾಗೂ ಆಟೋ ನಡುವೆ ರಸ್ತೆ ಅಪಘಾತ
ಮೂಡಿಗೆರೆ ತಾಲೂಕಿನ ಕೆ ತಲಗೂರು ಗ್ರಾಮದ ಚಂದ್ರಮ್ಮ ಎಂಬುವವರ ಮನೆಯ ಮೇಲೆ ನಿನ್ನೆ ರಾತ್ರಿ ಬೃಹದಾಕಾರದ ಮರ ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ನಾಲ್ವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸರಿತಾ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಮ್ಮ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
ಅದೃಷ್ಟ ವಶಾತ್ ಸರಿತಾ ರವರ ಮಕ್ಕಳಾದ ಸುನೀಲ್, ದೀಕ್ಷಿತ್ ಪ್ರಣಾಪಾಯಗಳಿಂದ ಪಾರಾಗಿದ್ದಾರೆ. ಮೃತ ಸರಿತಾ ಹಾಗೂ ಚಂದ್ರಮ್ಮ ಸಂಬಂಧಿಕರಾಗಿದ್ದು ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯ ಮೇಲೆ ಮರ ಉರುಳಿದ ಪರಿಣಾಮ ಈ ಇಬ್ಬರೂ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೂಡಿಗೆರೆ ತಾಲೂಕಿನ ವಿವಿಧ ಭಾಗಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು ಮಳೆಯ ಅಬ್ಬರಕ್ಕೆ ಹಳ್ಳಕೊಳ್ಳ ನದಿಗಳು ಉಕ್ಕಿ ಹರಿಯುತ್ತಿದೆ, ಕೆಲವೆಡೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಕೂಡ ಅಡಚಣೆ ಉಂಟಾಗಿದ್ದು, ರಸ್ತೆ ಪಕ್ಕದ ಗುಡ್ಡ ಕುಸಿತದ ಭೀತಿಯು ಎದುರಾಗಿದೆ.
ಗಾಳಿ ಮಳೆ ಹೆಚ್ಚಿದ್ದ ಕಾರಣ ಸರಿತಾರವರು ತಮ್ಮ ಮನೆ ಮೇಲೆ ಮರ ಬೀಳುವ ಆತಂಕದಿಂದ ತಮ್ಮಿಬ್ಬರು ಮಕ್ಕಳೊಂದಿಗೆ ಸಂಬಂಧಿಕರಾದ ಚಂದ್ರಮ್ಮನವರ ಮನೆಗೆ ತೆರಳಿ ಮಲಗಿದಾಗ ಮನೆಯ ಮೇಲೆ ಮರ ಬಿದ್ದಿದ್ದು ಇಬ್ಬರ ಪ್ರಾಣವನ್ನು ಬಲಿ ಪಡೆದುಕೊಂಡಿದೆ.
ಶಾಲೆಗಳಿಗೆ ರಜೆ ಘೋಷಣೆ :
ನಿರಂತರವಾಗಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಪರಿಣಾಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದು ಹಾಗೂ ಮನೆಗಳಿಗೆ ಕರೆತರುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯದ ನಿಟ್ಟಿನಲ್ಲಿ ಇಂದು ಮೂಡಿಗೆರೆ ತಾಲೂಕಿನ ಶಾಲೆಗಳಿಗೆ ಬಿಇಓ ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ. ಒಂದರಿಂದ ಹತ್ತನೇ ತರಗತಿಯ ಶಾಲಾ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದ್ದು ಪರಿಸ್ಥಿತಿಯನ್ನು ನೋಡಿಕೊಂಡು ನಾಳಿನ ಕುರಿತಾಗಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು






0 Comments