ಜಯಪುರ : (ನ್ಯೂಸ್ ಮಲ್ನಾಡ್ ವರದಿ) ಮಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ವಿರುದ್ಧ ಮೇಗುಂದಾ ಹೋಬಳಿ ಕಾಂಗ್ರೆಸ್ ಅದ್ಯಕ್ಷ ಡಿ.ಬಿ ರಾಜೇಂದ್ರ ವಾಗ್ದಾಳಿ ನಡೆಸಿದ್ದಾರೆ. 

ಇದನ್ನೂ ಓದಿ : ಶೃಂಗೇರಿ ಪಟ್ಟಣದಲ್ಲಿ ಬೆಳ್ಳಂ ಬೆಳಗ್ಗೆ ಕಾರು ಹಾಗೂ ಆಟೋ ನಡುವೆ ರಸ್ತೆ ಅಪಘಾತ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆದ ಮಳೆಹಾನಿ ಕಾಮಗಾರಿಗೆ ಶಾಸಕ ರಾಜೇಗೌಡ ಸ್ವಪ್ರಯತ್ನದಿಂದಾಗಿ 5 ಕೋಟಿ 85 ಲಕ್ಷ ಹಣ ಬಿಡುಗಡೆಮಾಡಿಸಿಕೊಂಡು ಬಂದಿದ್ದು, ಈ ಹಣವನ್ನು ನಾನು ಬಿಡುಗಡೆ ಮಾಡಿಸಿದ್ದು ಎಂದು ಮಾಜಿ ಶಾಸಕರು ಹಾಗೂ ಅವರ ಹಿಂಬಾಲಕರು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕುಟುಕಿದ ಮೇಗುಂದಾ ಹೋಬಳಿ ಕಾಂಗ್ರೆಸ್ ಅದ್ಯಕ್ಷ ಡಿ.ಬಿ ರಾಜೇಂದ್ರ ಮಳೆ ಹಾನಿ ವೀಕ್ಷಣೆಗೆ ಹೋದಲೆಲ್ಲ ಹತ್ತು ತಿಂಗಳುಕಾಯಿರಿ, ಶಾಸಕನಾಗಿ ಗೆದ್ದು ಬಂದು ನಿಮ್ಮ ಕೆಲಸ ಮಾಡಿಸುತ್ತೇನೆ ಎನ್ನುತ್ತಿದ್ದ ಮಾಜಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಈಗ ಬಿಡುಗಡೆಯಾಗಿರುವ ಹಣವನ್ನು ನಾನು ಬಿಡುಗಡೆ ಮಾಡಿಸಿದ್ದೇನೆ ಎನ್ನುತ್ತಿರುವುದು ಅತ್ಯಂತ ಶೋಚನೀಯವಾದ ಸಂಗತಿಯಾಗಿದೆ ಎಂದರು. 


ಮೇಗುಂದಾ ಹೋಬಳಿ ವ್ಯಾಪ್ತಿಯ ಹೆಗ್ಗದ್ದೆ, ಗುಡ್ಡೇತೋಟ, ಅಗಳಗಂಡಿ ಮೇಗೂರು ಹಾಗೂ ಹೇರೂರು ಸೇರಿದಂತೆ ಹೋದಲ್ಲೆಲ್ಲಾ ನಾನು ಶಾಸಕನಲ್ಲ, ಇನ್ನು ಹತ್ತು ತಿಂಗಳು ಕಾಯಿರಿ,ಮುಂದಿನ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿ ನಿಮ್ಮ ಕೆಲಸ ಮಾಡಿಸುತ್ತೇನೆ ಎಂದಿದ್ದನ್ನು ಹೋಬಳಿಯ ಜನ ಮರೆತಿಲ್ಲ. ಶಾಸಕ ರಾಜೇಗೌಡರ ಪ್ರಯತ್ನದಿಂದಾಗಿ ರೂ 5.85 ಕೋಟಿ ಹಣ ಬಿಡುಗಡೆಯಾಗಿದೆ, ಬಸರೀಕಟ್ಟೆ ಸದ್ಗುರು ಶಾಲೆ ಬಳಿ ರಸ್ತೆ ಕುಸಿತವಾದಲ್ಲಿ ವಾಲ್ ನಿರ್ಮಾಣಕ್ಕೆ ಎಪ್ಪತ್ತೊಂದು ಲಕ್ಷದ ಐವತ್ತು ಸಾವಿರ ಹಾಗೂ ಜಯಪುರ-ಬಸರೀಕಟ್ಟೆ ರಸ್ತೆ ಕುಸಿತವಾದ ಗುಡ್ಡೇತೋಟದಲ್ಲಿ ಕಾಂಕ್ರೀಟ್ ವಾಲ್ ನಿರ್ಮಾಣಕ್ಕೆ 75 ಲಕ್ಷ ಹಣ ಬಿಡುಗಡೆಯಾಗಿದ್ದು ಇವುಗಳ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಈ ಮಧ್ಯೆ ಶಾಸಕರು ನಡೆಸಿರುವ ಕೆಲಸಗಳನ್ನು ಬಿಡುಗಡೆಗೊಳಿಸಿಕೊಂಡು ಬಂದಿರುವ ಹಣವನ್ನು ನಾನು ಮಾಡಿದ್ದು ಎನ್ನುವುದು ಸರಿಯಲ್ಲ ಎಂದರು. 

ನೆರವೇರದ ಕೆಲಸಗಳೆಲ್ಲಾ ಶಾಸಕ ರಾಜೇಗೌಡ ಮಾಡಿಲ್ಲ, ಆಗಿರುವ ಕೆಲಸಗಳು ನನ್ನಿಂದಾದದ್ದು, ನಾವು ಮಾಡಿದ್ದು ಎನ್ನುವ ಮನಸ್ಥಿತಿ ಬಿಜೆಪಿ ನಾಯಕರಿಗೆ, ಮುಖಂಡರಿಗೆ ಶೋಭೆಯಲ್ಲ. ಯಾರೋ ಮಾಡಿದ ಕೆಲಸದಿಂದ ಬಿಟ್ಟಿ ಪ್ರಚಾರ ಪಡೆಯುವ ವ್ಯರ್ಥ ಪ್ರಯತ್ನ ಮಾಡುವ ಬದಲು ಸರಕಾರದ ಮೇಲೆ ಒತ್ತಡ ತಂದು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವ ಪ್ರಾಮಾಣಿಕ ಪ್ರಯತ್ನವನ್ನು ಬಿಜೆಪಿಯವರು ಮಾಡಲಿ ಎಂದರು. ರಸ್ತೆ, ಸೇತುವೆ, ತೋಟಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಜನರಿಗೆ, ಸರ್ಕಾರದ ಜವಾಬ್ದಾರಿಯುತ ಹುದ್ದೆಯಲ್ಲಿದ್ದೂ ಹತ್ತು ತಿಂಗಳು ಕಾಯಿರಿ, ಆಮೇಲೆ ಕೆಲಸ ಮಾಡಿಸುತ್ತೇನೆ ಎನ್ನುತ್ತಿರುವ ಸಿ.ಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ರಿಗೆ ಕ್ಷೇತ್ರದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.