ಚಿಕ್ಕಮಗಳೂರು :

ಉಡುಪಿ ಎಸ್ಪಿಯಾಗಿ ಅಕ್ಷಯ್ ಹಾಕೆ ನೇಮಕ :

ಚಿಕ್ಕಮಗಳೂರಿನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಾಗಿ ಕಾರ್ಯನಿರ್ವಹಿಸಿದ್ದ ಅಕ್ಷಯ್ ಎಂ. ಹೆಚ್ ಅವರನ್ನು ಉಡುಪಿ ಜಿಲ್ಲಾ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ.ಅಕ್ಷಯ್‌ ಮಚ್ಚೀಂದ್ರ ಅವರು ಚಿಕ್ಕಮಗಳೂರಿನ ಎಸ್ಪಿ ಆಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅತ್ಯಂತ ಯಶಸ್ವಿಯಾಗಿದ್ದರು. ಪ್ರಸ್ತುತ ಅವರನ್ನು ಉಡುಪಿ ಎಸ್ಪಿ ಆಗಿ ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹಿಂದಿನ ಎಸ್‌ಪಿ ಎನ್‌.ವಿಷ್ಣುವರ್ಧನ್‌ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆಯ ಎಸ್‌ಪಿಯಾಗಿ ವರ್ಗಾವಣೆಗೊಳಿಸಲಾಗಿದೆ


ಗ್ಯಾಸ್ ಕಟರ್ ನಿಂದ ಕಿಟಕಿಯ ರಾಡನ್ನು ತುಂಡರಿಸಿ ಲಕ್ಷಾಂತರ ರೂಪಾಯಿ ಹಣವನ್ನು ಎಗರಿಸಿದ ಖದೀಮರು :

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಿರೇಗದ್ದೆ ಇಲ್ಲಿನ ಕಿಟಕಿಯ ಸರಳುಗಳನ್ನು ಗ್ಯಾಸ್ ಕಟರ್ ನಿಂದ ತುಂಡುಮಾಡಿ, ಕಳ್ಳರು ಆಫೀಸಿನ ಕ್ಯಾಶ್ ಬೋರ್ಡ್ ನಲ್ಲಿದ್ದ 325,000 ರೂಪಾಯಿ ನಗದು ಹಾಗೂ 8000 ರೂಪಾಯಿ ಬೆಲೆ ಬಾಳುವ ಹಾರ್ಡ್ ಡಿಸ್ಕ್ ನ್ನು ಕಳ್ಳತನ ನಡೆಸಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಕುಮಾರ್ ಜಿ.ಆರ್ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು ತನಿಖೆಯ ಬಳಿಕವಷ್ಟೇ ಈ ಕುರಿತಾದ ಸಂಪೂರ್ಣ ಮಾಹಿತಿ ಹೊರಬೀಳಲಿದೆ.


ಬಾಲಕನಿಗೆ ವಿನಯ್ ಗುರೂಜಿಯಿಂದ ನೆರವು :

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀರ್ಗೂರು ದಿವಾಕರ ಎಂಬುವವರ ಪುತ್ರ ರಿತ್ವಿಕ್ ಗೆ ಥಲೆಸ್ಸೀಮಿಯ ಖಾಯಿಲೆ ಇರುವುದನ್ನು ಈ ಹಿಂದೆ ವೈದ್ಯರು ತಪಾಸಣೆ ನಡೆಸಿ ಧೃಢಪಡಿಸಿದ್ದರು. ಖಾಯಿಲೆಯಿಂದ ರುತ್ವಿಕ್ ಗುಣಮುಖನಾಗಲು ನಲವತ್ತೈದು ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆಯಿದ್ದು ಮಧ್ಯಮ ವರ್ಗದ ಕುಟುಂಬದವರಾದ ಕಾರಣ ಅಷ್ಟೊಂದು ಹಣವನ್ನು ಹೊಂದಿಸಲಾರದ ಕಾರಣ ದಾನಿಗಳ ಮೊರೆ ಹೋಗಿದ್ದರು.ಈ ವಿಷಯವನ್ನು ತಿಳಿದು ಗೌರೀಗದ್ದೆ ಆಶ್ರಮದ ಶ್ರೀ ಅವಧೂತ ವಿನಯ್ ಗುರೂಜಿ ಅವರು ಒಂದು ಲಕ್ಷ ರೂಪಾಯಿಗಳ ಹಣವನ್ನು ಸಹಾಯಧನದ ರೂಪದಲ್ಲಿ ನೀಡಿದರು. ಚಿಕಿತ್ಸೆಯನ್ನು ಪಡೆದು ಶೀಘ್ರವಾಗಿ ಗುಣಮುಖವಾಗುವಂತೆ ಹರಸಿದ ಅವರು, ಬಾಲಕನಿಗೆ ಚಿಕಿತ್ಸೆ ಒದಗಿಸುವ ಸಲುವಾಗಿ ದಾನಿಗಳು, ಉಳ್ಳವರು ನೆರವಾಗುವಂತೆ ತಿಳಿಸಿದರು. 


ಕೊಡಗು : 

ದಯಾಮರಣ ಕೋರಿದ ಮಂಗಳಮುಖಿ 

 ಮಡಿಕೇರಿಯಲ್ಲಿ ವಾಸ ಮಾಡುತ್ತಿರುವ ಮಂಗಳಮುಖಿ ರಿಹಾನ, ಜೀವನಕ್ಕಾಗಿ ಭಿಕ್ಷಾಟನೆ ನಡೆಸುತ್ತಿದ್ದಾರೆ. ಆಶ್ರಯಕ್ಕಾಗಿ ಬಾಡಿಗೆ ಮನೆಯ ಅಗತ್ಯವಿದ್ದರೂ ಕೂಡ ಮಂಗಳಮುಖಿಯಾದ ಕಾರಣಕ್ಕೆ ಯಾರೂ ಮನೆ ನೀಡಲು ಒಪ್ಪುತ್ತಿಲ್ಲ, ಮನೆ ಖಾಲಿಯಿದ್ದರೂ ಇಲ್ಲ ಎನ್ನುತ್ತಾರೆ, ಪ್ರತಿ ದಿನ ಲಾಡ್ಜ್ ಗೆ ಹಣ ಪಾವತಿ ಮಾಡಬೇಕಾಗುತ್ತದೆ ಇದು ಕಷ್ಟಕರವಾಗಿದೆ, ಖರ್ಚು ವೆಚ್ಚಕ್ಕೆ ಅತಿಯಾದ ಸಮಸ್ಯೆ ಎದುರಾಗಿದೆ ಎಂದು ತಮ್ಮಗೋಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಕೊಡಗಿನ ಜಿಲ್ಲಾಧಿಕಾರಿಗಳಲ್ಲಿ ಐದಾರು ಬಾರಿ ಅರ್ಜಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನಗಳಾಗಿಲ್ಲ, ಜೀವನಕ್ಕೆ ತೀವ್ರತರಹದ ಸಮಸ್ಯೆಗಳು ಎದುರಾಗಿದ್ದು ಯಾರದೇ ಸಹಕಾರ ದೊರೆಯದ ಕಾರಣ ದಯಾಮರಣಕ್ಕೆ ಅನುವು ಮಾಡುವಂತೆ ಇಂದು ಅರ್ಜಿ ಸಲ್ಲಿಸಿದ್ದಾರೆ. 

ಹಾಸನ :

ಹೃದಯಾಘಾತ ದಿಂದ ಸಬ್ ಇನ್ಸ್ಪೆಕ್ಟರ್ ನಿಧನ :

ಹಾಸನ ನಗರಠಾಣೆ ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಮಾದನಾಯಕ್ ಪ್ರಕರಣವೊಂದರ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ನಂತರ ಜೈಲಿಗೆ ಬಿಟ್ಟು ಮನೆಗೆ ತೆರಳಿದ್ದರು. ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಬ್‌ಇನ್ಸ್‌ಪೆಕ್ಟರ್ ನಿಧನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ, ಸ್ಥಳೀಯರು ಹಾಗೂ ಸಂಬಂಧಿಗಳು ಸಂತಾಪ ಸೂಚಿಸಿದ್ದಾರೆ.

ಅಧಿಕಾರಿಯನ್ನು ಕೂಡಿ ಹಾಕಿದ ಗ್ರಾಮಸ್ಥರು :

ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರೆದಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳನ್ನು ಹಾಳುಮಾಡುತ್ತಿವೆ. ಅದೆಷ್ಟು ಬಾರಿ ಹೇಳಿದರು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚತ್ತು ಕೊಳ್ಳದ ಕಾರಣ ಅಧಿಕಾರಿಗಳನ್ನು ಗ್ರಾಮಸ್ಥರು ಕೂಡಿಹಾಕಿದ ಘಟನೆ ಇಂದು ನಡೆದಿದೆ.ನಿತ್ಯವೂ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ಗದ್ದೆಗಳ ಬೆಳೆ ಹಾಳು ಮಾಡುತ್ತಿವೆ. ಗ್ರಾಮಗಳಲ್ಲಿ ಓಡಾಡುತ್ತಿದ್ದು, ಜನರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅಂತಾ ಆರೋಪಿಸಿ ಅರಣ್ಯ ಇಲಾಖೆಯ ನೌಕರರನ್ನ ಗ್ರಾಮಪಂಚಾಯತ್ ನಲ್ಲಿ ಕೂಡಿಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.