ಕಳಸ : (ನ್ಯೂಸ್ ಮಲ್ನಾಡ್ ವರದಿ) ಪ್ರಯಾಣಿಕರಿದ್ದ ಕೆ.ಕೆ.ಬಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ವರದಿಯಾಗಿದೆ. 

ಇಂದು ಬೆಳಗ್ಗೆ ಆರು ಘಂಟೆಗೆ ಮಂಗಳೂರಿನಿಂದ ಕಳಸಕ್ಕೆ ಹೊರಟಿದ್ದ ಕೆ.ಕೆ.ಬಿ ಬಸ್ ಮೂಡುಬಿದಿರೆಯ ಬೆಳುವಾಯಿ ಬಳಿಯ ಬನ್ನಡ್ಕದ ಸಮೀಪದಲ್ಲಿ ಆಟೋರಿಕ್ಷಾವೊಂದು ಅಡ್ಡಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ. 

ಈ ಅಪಘಾತದಲ್ಲಿ ಚಾಲಕನ ಸೊಂಟದ ಭಾಗಕ್ಕೆ ಗಾಯಗಳಾಗಿದ್ದು ಇನ್ನುಳಿದಂತೆ ಸಹ ಪ್ರಯಾಣಿಕರು ಸಣ್ಣ ಪುಟ್ಟಗಾಯಗಳಿಗೆ ತುತ್ತಾಗಿದ್ದಾರೆ. ಆಟೋ ರಿಕ್ಷಾವನ್ನು ತಪ್ಪಿಸುವ ಸಲುವಾಗಿ ಬಸ್ಸನ್ನು ಬದಿಗೆ ತೆಗೆದುಕೊಂಡು ಹೋದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ಎಂಬಂತೆ ಪ್ರಯಾಣಿಕರೆಲ್ಲರೂ ಪ್ರಾಣಾಪಾಯಗಳಿಂದ ಪಾರಾಗಿದ್ದಾರೆ.


08 ಜನ ಆರೋಪಿಗಳು ಅಂದರ್ :

ಚಿತ್ರಮಂದಿರದಲ್ಲಿ ಚಿತ್ರ ನೋಡಿಕೊಂಡು ಹೊರ ಬರುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ಚಿಕ್ಕಮಗಳೂರು ನಗರದಲ್ಲಿ ಮಾರಕಾಸ್ತ್ರಗಳು ಅಟ್ಟಹಾಸ ಮೆರೆದಿತ್ತು. ಲಾಂಗು, ಮಚ್ಚುಗಳಿಂದ ಅಟ್ಯಾಕ್ ನಡೆಸಿದ್ದ ದುಷ್ಕರ್ಮಿಗಳನ್ನು ಚಿಕ್ಕಮಗಳೂರಿನ ಖಾಕಿಪಡೆ ಬಂಧಿಸಿದೆ.

ಜುಲೈ 28 ರಂದು ಚಿಕ್ಕಮಗಳೂರಿನ ಮಿಲನ್ ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ  ಸಿನಿಮಾ ವೀಕ್ಷಣೆವೇಳೆಗೆ ಇತ್ತಂಡಗಳ ನಡುವೆ ಡ್ರಾಗಾರ್, ಲಾಂಗುಗಳು ಜಳಪಿಸಿದ್ದವು. ಹಾಡಹಗಲೇ ನಡೆದ ಈ ಘಟನೆಯು ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಈ ಗಲಾಟೆಯ ವೇಳೆ ಚಿಕ್ಕಮಗಳೂರು ನಗರದ ಕೋಟೆ ನಿವಾಸಿ ಭರತ್ ಎಂಬಾತನ ಮೇಲೆ ಲಾಂಗು-ಮಚ್ಚುಗಳಿಂದ ಹಲ್ಲೆಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಭರತ್ ನನ್ನು ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿತ್ತು. ಭರತ್ ಮೇಲೆ ಹಲ್ಲೆ ಮಾಡಿದ್ದ ಯುವಕರು ಚಿಕ್ಕಮಗಳೂರಿನಿಂದ ಬೇರೆಡೆಗೆ ಎಸ್ಕೇಪ್ ಆಗಿದ್ದರು. 


ಈ ಪ್ರಕರಣದ ಹಿಂದಿರುವ ಆರೋಪಿಗಳನ್ನು ಬಂಧಿಸುವ ಸಲುವಾಗಿ  ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದರು.  ಪೊಲೀಸರಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ತಂಡವನ್ನು ಪತ್ತೆ ಮಾಡಿ ಸೆರೆಹಿಡಿಯುವಲ್ಲಿ ಚಿಕ್ಕಮಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರು ಜನ ಆರೋಪಿಗಳೊಂದಿಗೆ ಆರೋಪಿಗಳಿಗೆ ಎಸ್ಕೇಪ್ ಆಗಲು ಸಹಾಯ ಮಾಡಿದ ಇಬ್ಬರನ್ನು ಸೇರಿಸಿ 08 ಮಂದಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ಆರಂಭಿಸಿದ್ದಾರೆ.

ಈ ಕಾರ್ಯಾಚರಣೆಯು ಚಿಕ್ಕಮಗಳೂರು ಡಿವೈಎಸ್‌ಪಿ ಪುರುಷೋತ್ತಮ್ ನೇತೃತ್ವದಲ್ಲಿ ರಚನೆಯಾದ 4 ತನಿಖಾ ತಂಡಗಳಾದ ಬಸವನಹಳ್ಳಿ ಠಾಣೆಯ ಪಿಎಸ್‌ಐ ರವಿ, ಸಂಚಾರಿ ಠಾಣೆಯ ಪಿಎಸ್‌ಐ ಚಂದ್ರಶೇಖರ್, ಕಡೂರು ಪಿಎಸ್‌ಐ ಹರೀಶ್ ಹಾಗೂ ನಗರ ಠಾಣೆಯ ನಾಗೇಂದ್ರ ನಾಯ್ಕ್ ಇವರುಗಳ ನೇತೃತ್ವದಲ್ಲಿ ಯಶಸ್ವಿಯಾಗಿದೆ. ಘಟನೆ ನಡೆದ 24 ಗಂಟೆಯಲ್ಲೇ ಸಂಪೂರ್ಣ ಮಾಹಿತಿ ಕಲೆಹಾಕಿದ ತಂಡಗಳು 3 ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದೆ. 

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿಕೊಂಡವರು ಈ ಹಿಂದೆ ಆತ್ಮೀಯ ಸ್ನೇಹಿತರಾಗಿದ್ದರು  ಎನ್ನಲಾಗಿದ್ದು, ಕೆಲ ಕಾರಣಗಳಿಂದ ದೂರವಾಗಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದೆ.