ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಕೋಮು ಗಲಭೆಯ ವಿಚಾರವನ್ನು ಮುಂದಿಟ್ಟುಕೊಂಡು ಪತ್ರ ಬರೆದು ವಿವಾಹವಾಗಿದ್ದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯ ಪತಿಯನ್ನು ಸಂಚುರೂಪಿಸಿ ಪ್ರಕರಣದಲ್ಲಿ ಸಿಲುಕುವಂತೆ ಮಾಡಿ ಆಕೆಯ ಪತಿ ಜೈಲು ಪಾಲಾದ ನಂತರ ಆಕೆಯೊಂದಿಗೆ ಆತ ಮಜವಾಗಿರಲು ಯತ್ನಿಸಿ ಪ್ರಸ್ತುತ ಪೊಲೀಸರ ಬಲೆಗೆ ಸಿಲುಕಿದ್ದಾನೆ. 

ಕೆಲದಿನಗಳ ಹಿಂದಷ್ಟೇ ಆತಂಕಕಾರಿ ಎನ್ನುವ ರೀತಿಯಲ್ಲಿ ಶಿವಮೊಗ್ಗ ನಗರದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಮೂರು ಕೊಲೆಗಳು ಮತ್ತು ಕೋಮು ಘರ್ಷಣೆಗಳು ಸಂಭವಿಸುತ್ತದೆ ಎಂಬ ಅನಾಮಧೇಯ ಪತ್ರದ ದೊರಕಿತ್ತು. ಈ ಪತ್ರದ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರು ನಕಲಿ ಪತ್ರ ಬರೆದ ಆಯೂಬ್ ಎಂಬಾತನನ್ನು ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ.


ಬಂಧಿತ ಆಯುಬ್ ಮೊಹಮ್ಮದ್ ಫೈಜಲ್ ಎಂಬುವವನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ, ಅಯೂಬ್ ನಕಲಿ ಪತ್ರ ಬರೆದಿರುವುದು ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ. ಆಗಸ್ಟ್ 20ರಂದು ರಾತ್ರಿ 8 ಗಂಟೆ ಸುಮಾರಿಗೆ ಗಾಂಧಿ ಬಜಾರ್‌ನ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ಇರಿಸಲಾಗಿದ್ದ ಪತ್ರವನ್ನು ಅಂಗಡಿ ಮಾಲೀಕರೊಬ್ಬರು ಪತ್ತೆ ಮಾಡಿದ್ದಾರೆ. ಗಣೇಶ ಹಬ್ಬವನ್ನು ಹಾಳು ಮಾಡಲು ಮೂವರು ವ್ಯಕ್ತಿಗಳು ಸಂಚು ರೂಪಿಸಿದ್ದು, ಮೂವರನ್ನು ಹತ್ಯೆ ಮಾಡುವ ಸಂಚು ರೂಪಿಸಲಾಗಿದೆ ಎಂದು ಅನಾಮಧೇಯ ವ್ಯಕ್ತಿ ಪತ್ರದಲ್ಲಿ ಉಲ್ಲೇಖಿತವಾಗಿತ್ತು. ತಮ್ಮ ಗುರಿ ಸಾಧಿಸಲು ಮಂಗಳೂರಿನಿಂದ ಜನರನ್ನು ಕರೆತರಲು ಯೋಜಿಸುತ್ತಿದ್ದು, ಈ ಮೂವರಲ್ಲಿ ಮೊಹಮ್ಮದ್ ಫೈಝಲ್ ಒಬ್ಬರು ಎಂದು ಪತ್ರದಲ್ಲಿತ್ತು. ಅಲ್ಲದೇ ಫೈಝಲ್ ಗಾಂಜಾ ಸೇವಿಸಿ ಮಾರಾಟ ಮಾಡುತ್ತಿದ್ದು, ರೌಡಿಸಂನಲ್ಲಿ ತೊಡಗಿದ್ದಾನೆ ಎಂದು ಆಯೂಬ್ ಪತ್ರದಲ್ಲಿ ಬರೆದಿದ್ದನು.

ಪತ್ರದ ಜಾಡು ಹಿಡಿದು ಫೈಝಲ್ ನ ವಿಚಾರಣೆ ನಡೆಸಿದ ಪೊಲೀಸರು ಈತನ ಪತ್ರ ಇಲ್ಲದೇ ಇರುವುದನ್ನು ಗಮನಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದರು. ಈ ವೇಳೆ ಅಯೂಬ್ ನಕಲಿ ಪತ್ರ ಬರೆದಿರುವುದು ಮತ್ತು ಪತ್ರದಲ್ಲಿನ ಆತನ ಆರೋಪಗಳು ಸುಳ್ಳು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ನಂತರದಲ್ಲಿ ಆಯೂಬ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು ಈ ವೇಳೆ ಫೈಝಲ್ ನ ಬಂಧನಕ್ಕಾಗಿ ಈತ ಸುಳ್ಳು ಪತ್ರ ಬರೆದು ವದಂತಿ ಹಬ್ಬಿರುವುದು ಬೆಳಕಿಗೆ ಬಂದಿದೆ. 

ಸುಳ್ಳು ವದಂತಿಗಳನ್ನು ಹರಡಿದ್ದಕ್ಕಾಗಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು ಈ ಕುರಿತಾಗಿ ಹೆಚ್ಚಿನ ವಿಚಾರಣೆ ಆರಂಭಿಸಿದ್ದಾರೆ.