ಚಿಕ್ಕಮಗಳೂರು :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಟುಕಿದ ಸಿ.ಟಿ ರವಿ :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಹಾಕಿರುವ ಹಳದಿ ಕನ್ನಡಕ ತೆಗೆದರೆ ಇತಿಹಾಸದ ಆಳವಾದ ಅರಿವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕುಟುಕಿದ್ದಾರೆ. ಬಿಜೆಪಿಗೆ ನೆಹರೂ ಹಾಗೂ ದೇಶದ ಇತಿಹಾಸ ಗೊತ್ತಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿ.ಟಿ ರವಿ, ಯಾರೋ ಒಬ್ಬರಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂತು ಎಂದು ಭಾವಿಸುವವರು ಅತ್ಯಂತ ಮೂರ್ಖರಾಗುತ್ತಾರೆ. ಆ ರೀತಿ ಗಿಳಿ ಪಾಠವನ್ನು ಈ ವರೆಗೆ ಒಪ್ಪಿಸುತ್ತಾ ಬಂದಿದ್ದೇವೆ. ಸ್ವಾತಂತ್ರ್ಯ ಅಹಿಂಸೆಯಿಂದ ಬಂತು ಎನ್ನುವುದು ಅರ್ಧ ಸತ್ಯ. ಅಹಿಂಸಾ ಹೋರಾಟ ದೊಡ್ಡ ಪ್ರಮಾಣದ ಪಾತ್ರ ವಹಿಸಿದೆ ಆದರೆ ಅದರಿಂದಲೇ ಬಂತು ಎಂದರೆ ಕ್ರಾಂತಿಕಾರಿಗಳ ಬಲಿದಾನಕ್ಕೆ ನಾವು ಕೊಡುವ ಬೆಲೆ ಏನು ಎಂದು ಪ್ರಶ್ನಿಸಿದರು. ಅಂತೆಯೇ ಸಿದ್ದರಾಮಯ್ಯ ಅವರು ಮೊಸರಲ್ಲಿ ಕಲ್ಲು ಹುಡುಕುವ ಮನೋಭಾವನೆಯನ್ನು ಬಿಡಬೇಕು ಎಂದರು.
ಎಲೆಕ್ಟ್ರಾನಿಕ್ ಮತ್ತು ಕಾರ್ಮಿಕರ ಕಿಟ್ ವಿತರಣೆ :
ಇಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಶಾಸಕರಾದ ಟಿ.ಡಿ ರಾಜೇಗೌಡ ಅವರು ಎಲೆಕ್ಟ್ರಾನಿಕ್ ಮತ್ತು ಕಾರ್ಮಿಕರ ಕಿಟ್ ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಫಲಾನುಭವಿಗಳು, ಪಟ್ಟಣ ಪಂಚಾಯತ್ನ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪಾತ್ರೆಗಳ ವಿತರಣೆ :
75 ನೇ ವರ್ಷದ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೂತಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ 75 ಫಲಾನುಭವಿಗಳಿಗೆ ಇದರಲ್ಲಿ ( 60 ಜನ ಪ.ಜಾತಿ, ಪ. ಪಂಗಡ) ತಲಾ 2000 ಕ್ಕೂ ಹೆಚ್ಚಿನ ಮೊತ್ತದ ಪಾತ್ರೆಗಳ ವಿತರಣೆ ನಡೆಯಿತು ಅಂತೆಯೇ ಬಸವ ವಸತಿ ಯೋಜನೆಯಡಿ 15 ಜನ ಫಲಾನುಭವಿಗಳಿಗೆ ಕಾಮಗಾರಿ ಆದೇಶ ನೀಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಈ ಎರಡು ಯೋಜನೆಗಳಿಗೆ ಚಾಲನೆ ದೊರೆತಿದ್ದು ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಯರಾಮ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಯನ, ಉಪಾಧ್ಯಕ್ಷರಾದ ಶ್ರೀ ಬಿ ಎಸ್.ಕುಮಾರ ಸ್ವಾಮಿ, ಸದಸ್ಯರಾದ ಶ್ರೀ ಕೆ.ಬಿ ನಾಗೇಶ್, ಟಿ.ರಮೇಶ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರಪ್ಪ ಹಾಗೂ ಕಾರ್ಯದರ್ಶಿ ಅನ್ನಪೂರ್ಣ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಶಿವಮೊಗ್ಗ :
ನಾಳೆ ಶಾಲಾ-ಕಾಲೇಜಿಗೆ ರಜೆ
ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ ಭಾವಚಿತ್ರದ ಕುರಿತಾದ ಸಂಘರ್ಷ ತಾರಕಕೇರಿದ್ದು ಶಿವಮೊಗ್ಗದ ಎರಡು ಕಡೆಗಳಲ್ಲಿ ಚೂರಿಇರಿತ ನಡೆದಿದ್ದು, ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣ ಗೌಡ ಅವರು ಚಾಕು ಇರಿತಕ್ಕೆ ಒಳಗಾಗಿದ್ದ ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿ, ಅಹಿತಕರ ಘಟನೆ ಹಿನ್ನಲೆಯಲ್ಲಿ ನಾಳೆ ಶಾಲೆಗೆ ರಜೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 144 ಸೆಕ್ಷನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ನಾಳೆ ದಿನಾಂಕ 16/08/2022 ರಂದು ರಜೆಯನ್ನು ಜಿಲ್ಲಾಧಿಕಾರಿಗಳು ಘೋಷಣೆ ಮಾಡಿದ್ದಾರೆ.
ಗೃಹ ಸಚಿವರ ಬೆಂಗಾವಲು ವಾಹನ ಅಪಘಾತ :
ಗೃಹ ಸಚಿವರ ಬೆಂಗಾವಲಿನ ಬೊಲೆರೋಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ಉಂಬ್ಳೆಬೈಲಿನಲ್ಲಿ ನಡೆದಿದೆ. ಆರಗ ಜ್ಞಾನೇಂದ್ರರವರು ಬೆಂಗಳೂರಿನ ಕಾರ್ಯಕ್ರಮ ಮುಗಿಸಿ ಸೋಮವಾರ ತುಮಕೂರಿನಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದ ದ್ವಜಾರೊಹಣ ನೆರವೇರಿಸಿ ಪುನಃ ತೀರ್ಥಹಳ್ಳಿಗೆ ಬರುತ್ತಿರುವ ಮಾರ್ಗದ ಮಧ್ಯ ಉಂಬ್ಳೇಬೈಲ್ ಹತ್ತಿರ ಗೃಹ ಸಚಿವರ ಎಸ್ಕಾರ್ಟ್ ಬೊಲೆರೋ ವಾಹನ ಹಾಗೂ ಕಾರು ಮುಖಾಮುಖಿ ಢಿಕ್ಕಿ ಹೊಡೆದಿದೆ. ಕಾರು ಮತ್ತು ಜೀಪ್ ಜಖಂ ಆಗಿರುತ್ತದೆ. ಬೊಲೆರೋ ಮುಂಭಾಗ ನುಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಯಾವುದೇ ಅಪಾಯಗಳು ಸಂಭವಿಸದೆ ಎಲ್ಲರೂ ಸುರಕ್ಷಿತವಾಗಿದ್ದಾರೆ.
ಹಾಸನ :
ಭೀಕರ ರಸ್ತೆ ಅಪಘಾತ : ಇಬ್ಬರ ಸಾವು
ಬೈಕ್ ಗೆ ಕೆಎಸ್‌ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹುಣಸೆಕೆರೆ ಬಳಿ ಈ ದುರ್ಘಟನೆ ನಡೆದಿದೆ.ಬೈಕ್ ಸವಾರರಾದ ಭಾನುಪ್ರಕಾಶ್ ಮತ್ತು ರಂಗಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಳೆಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


0 Comments