ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದಲ್ಲಿ ವರುಣನ ಅವಾಂತರ ಜೋರಾಗಿದ್ದು ಮೂಡಿಗೆರೆ ಭಾಗದಲ್ಲಿ ಮಳೆಯು ಭಾರೀ ಪ್ರಮಾಣದ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಒಂದೆಡೆ ಹಳ್ಳ, ಕೊಳ್ಳ, ನದಿಗಳು ಉಕ್ಕಿ ಹರಿಯುತ್ತಿದ್ದು ಇನ್ನೊಂದೆಡೆ ರಸ್ತೆಗಳು ಕುಸಿತಕಂಡಿದೆ.

ಇದನ್ನೂ ಓದಿ : ಭಾರೀ ಪ್ರಮಾಣದಲ್ಲಿ ಕುಸಿತಗೊಂಡ ಮೇಗೂರು ಸಂಪರ್ಕಿಸುವ ರಸ್ತೆ ; ವಾಹನ ಸಂಚಾರಕ್ಕೆ ನಿರ್ಬಂಧ

ಭಾರೀ ಮಳೆಗೆ ರಸ್ತೆ ಕುಸಿತ ; ಸಂಪರ್ಕ ಕಡಿತ :

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಲ್ಲರ್ ಕಾಲ್ ಬಪ್ಪಳಿಕೆ ರಸ್ತೆಯು ಭಾರೀ ಮಳೆಯಿಂದಾಗಿ ಸಂಪೂರ್ಣ ಕುಸಿತಗೊಂಡಿದೆ. ಈ ಭಾಗದಲ್ಲಿ ಸಂಚಾರ ನಡೆಸುವ ವಾಹನ ಸವಾರರಿಗೆ, ಮನೆಗಳ ಸಂಪರ್ಕ ಹೊಂದಿರುವವರಿಗೆ ಮನೆಗೆ, ತೋಟಗಳಿಗೆ ತೆರಳಲು ಸಮಸ್ಯೆ ಎದುರಾಗಿದ್ದು ಜನರು ಅತೀವ ಆತಂಕಕ್ಕೊಳಗಾಗಿದ್ದಾರೆ.


ಭಾರೀ ಗಾಳಿಗೆ ತುಂಡಾಗಿ ಬಿದ್ದ ಅಡಿಕೆ ಮರಗಳು :

ಮೂಡಿಗೆರೆ ವ್ಯಾಪ್ತಿಯ ಕನ್ನೇಹಳ್ಳಿ ಹರೀಶ್ ಎಂಬುವವರಿಗೆ ಸಂಬಂಧಿಸಿದ್ದ ಅಡಿಕೆ, ತೋಟವು ಮಳೆಯಿಂದ ಹಾನಿಗೀಡಾಗಿದೆ. ಈ ಭಾಗದಲ್ಲಿ ಗಾಳಿ ಮಳೆಯ ಅಬ್ಬರ ಜೋರಾಗಿದ್ದು ಮಳೆಗಾಳಿಗೆ ನಲುಗಿದ ಅಡಿಕೆ ಮರಗಳು ತುಂಡಾಗಿಬಿದ್ದು  ತೋಟಕ್ಕೆ ಹಾನಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಿ ಅತೀ ಶೀಘ್ರವಾಗಿ ಸರ್ಕಾರಕ್ಕೆ ಈ ಕುರಿತಾದ ವರದಿಯನ್ನು ತಲುಪಿಸಿ ಸೂಕ್ತವಾದ ಪರಿಹಾರವನ್ನು ಒದಗಿಸಬೇಕೆಂದು ಕೃಷಿಕ ಹರೀಶ್ ಸರ್ಕಾರವನ್ನು ಕೋರಿದ್ದಾರೆ. 

ಗಾಳಿ ಮಳೆಗೆ ಕುಸಿದ ಮನೆಯ ಗೋಡೆ :

ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಗು ಗ್ರಾಮದ ಭವಾನಿ ಎಂಬುವವರ ಮನೆಯ ಭಾರೀ ಮಳೆಯಿಂದಾಗಿ ಕುಸಿದಿದೆ. ಮನೆಯ ಗೋಡೆ ಹಾಗೂ ಮೇಲ್ಛಾವಣಿಯ ಹೆಂಚುಗಳು ಉರುಳಿದ್ದು ಮನೆಯವರು ತೀವ್ರ ಆತಂಕಕ್ಕೊಳಾಗಿದ್ದಾರೆ. ಅತೀ ಶೀಘ್ರವಾಗಿ ಸರ್ಕಾರ ಸಂಭವಿಸಿದ ಹಾನಿಗೆ ಪರಿಹಾರ ಒದಗಿಸಿ ನೊಂದವರಿಗೆ ಆಸರೆಯಾಗಬೇಕೆಂದು ಮನೆಯನ್ನು ಕಳೆದುಕೊಂಡಿರುವ ಭವಾನಿ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಕೋರಿದ್ದಾರೆ. ಅಂತೆಯೇ ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದ ಪ್ರಮೀಳಾ ರಮೇಶ್ ಎಂಬುವರ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದ್ದು ಮನೆಯವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರ ದೊರಕಿಸಬೇಕೆಂದು ಸಂತ್ರಸ್ತರು ಕೋರಿದ್ದಾರೆ.   

ತನು ಕೊಟ್ಟಿಗೆಹಾರ, ವರದಿಗಾರರು