ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ಕಳೆದ ನಾಲ್ಕೈದು ದಿನಗಳಿಂದ ಮೂಡಿಗೆರೆ ಭಾಗದಲ್ಲಿ ಸುರಿಯುತ್ತಿರುವ ರಣಮಳೆಯು ಅನೇಕ ಅವಘಡಗಳನ್ನು ಸೃಷ್ಟಿಸಿದೆ.
ಇದನ್ನೂ ಓದಿ : ಶೃಂಗೇರಿ ಪಟ್ಟಣದಲ್ಲಿ ಬೆಳ್ಳಂ ಬೆಳಗ್ಗೆ ಕಾರು ಹಾಗೂ ಆಟೋ ನಡುವೆ ರಸ್ತೆ ಅಪಘಾತ
ಇಂದು ಬೆಳಗ್ಗೆ ಬೀಸಿದ ಬಿರುಗಾಳಿಯ ಆರ್ಭಟಕ್ಕೆ ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ. ಮೂಡಿಗೆರೆಯ ಸಂದೇಶ್ ಎಂಬುವವರ ಮನೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು ಇಲ್ಲಿನ ಹಾರ್ಮಕ್ಕಿ ಗ್ರಾಮದಲ್ಲೂ ಗಾಳಿಮಳೆಯ ತೀವ್ರತೆಗೆ ಮನೆಯ ಗೋಡೆಗಳು ಕುಸಿದು ಬಿದ್ದಿದೆ.
ಇಲ್ಲಿನ ಬೈರೇಗೌಡ ಎಂಬುವರಿಗೆ ಸೇರಿದ ಮನೆ ಹಾನಿಯಾಗಿದ್ದು ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆ ಹಾಗೂ ಕಳಸ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು ಮಳೆಯ ಅವಾಂತರಗಳು ಮಾತ್ರ ಕಡಿಮೆಯಾಗುತ್ತಿಲ್ಲ.
ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಕಾರು :
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿದೆ. ಇಂದು ಬೆಳಗ್ಗೆ ಮೂಡಿಗೆರೆ ರಸ್ತೆಯ ಕಬ್ಬಿಣ ಸೇತುವೆ ಬಳಿ ಚಿಕ್ಕಮಗಳೂರಿನ ಯಾದವ್ ಎಂಬುವವರಿಗೆ ಸೇರಿದ ಆಲ್ಟೋ ಕಾರು ಅಪಘಾತಕ್ಕೆ ಸಿಲುಕಿದೆ. ಅದೃಷ್ಟವಶಾತ್ ಎಂಬಂತೆ ಕಾರಿನಲ್ಲಿದ್ದವರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರಿನಿಂದ ಧರ್ಮಸ್ಥಳಕ್ಕೆ ತೆರಳಿ ಮರಳಿಬರುತ್ತಿದ್ದ ಸಂದರ್ಭದಲ್ಲಿ ಭಾರಿ ಮಳೆಯಿಂದ ಕಾರು ಎಡ ಭಾಗಕ್ಕೆ ಜಾರಿ ಕಾಫಿ ತೋಟದ ದಿಬ್ಬಕ್ಕೆ ಗುದ್ದಿದೆ ಎನ್ನಲಾಗಿದೆ. ಸ್ಥಳೀಯರು ಹಾಗೂ ಇತರೆ ವಾಹನಗಳ ಪ್ರವಾಸಿಗರಿಂದ, ಟ್ರಾಕ್ಟರ್ ಸಹಾಯದಿಂದ ಕಾರನ್ನು ಮೇಲಕ್ಕೆತ್ತಲಾಗಿದ್ದು ಕಾರಿನಲ್ಲಿದ್ದವರು ಸುರಕ್ಷಿತವಾಗಿದ್ದಾರೆ.
ನಿನ್ನೆ ತಡರಾತ್ರಿ ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದ ಚಂದ್ರಮ್ಮ ಎಂಬುವವರ ಮನೆಯ ಮೇಲೆ ಬೃಹದಾಕಾರದ ಮರ ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ನಾಲ್ವರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಸರಿತಾ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಮಹಿಳೆ ಚಂದ್ರಮ್ಮ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದರು.
ಮಳೆಯ ಆರ್ಭಟಕ್ಕೆ ನಲುಗಿರುವ ಕಳಸ, ಮೂಡಿಗೆರೆ, ಕೊಟ್ಟಿಗೆಹಾರ, ಸುತ್ತಮುತ್ತಲಿನ ಭಾಗಗಳ ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.






0 Comments