ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಸ್ವಾತಂತ್ಯ್ರದ ಅಮೃತ ಮಹೋತ್ಸವದ ಅಂಗವಾಗಿ ಚಿಕ್ಕಮಗಳೂರು ನಗರಸಭೆ ವತಿಯಿಂದ ಅಳವಡಿಸಲಾಗಿದ್ದ ಶುಭಕೋರುವ ಬ್ಯಾನರ್‌ಗಳಲ್ಲಿ ಮಹಾತ್ಮಗಾಂಧೀಜಿ ಭಾವಚಿತ್ರ ಹಾಕಿಲ್ಲ ಎಂಬುದಾಗಿ ಪತ್ರಿಕೆಗಳು ಸುಳ್ಳು ವರದಿ ಮಾಡಿದೆ ಇದನ್ನು ನಗರಸಭೆ ಖಂಡಿಸುತ್ತದೆ ಎಂದು ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.

ಇದನ್ನೂ ಓದಿ : ಬಾಡಿಗೆಗೆ ಮನೆ ಕೊಡಲು ನಿರಾಕರಣೆ ; ದಯಾಮರಣ ಕೋರಿದ ಮಂಗಳಮುಖಿ ರಿಹಾನ

ಭಾರತ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ದಿನಾಚರಣೆಯ ಶುಭಕೋರಿ ಅಳವಡಿಸಲಾಗಿದ್ದ ಬ್ಯಾನರ್ ಗಳಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರದ ಬ್ಯಾನರ್ ಹಾಕಿಲ್ಲವೆಂಬ ಶೀರ್ಷಿಕೆ ಅಡಿಯಲ್ಲಿ ಪತ್ರಿಕೆಯೊಂದು ಸುಳ್ಳು ವರದಿ ಪ್ರಚಾರಪಡಿಸಿ ಸಾರ್ವಜನಿಕರಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿದೆ ಆದರೆ ವಾಸ್ತವಾಂಶ ಬೇರೆಯೇ ಇದೆ ಎಂದು ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.


ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನಾಚರಣೆಯ ಶುಭಕೋರಿ ನಗರಸಭೆಯು ನಗರದ ವಿವಿಧ ಭಾಗದಲ್ಲಿರುವ ಬೋರ್ಡ್ ಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಿ ಶುಭಕೋರಿತ್ತು. ಈ ವಿಷಯವನ್ನು ಮರೆಮಾಚಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ನಗರದಲ್ಲಿ ನಗರಸಭೆ ಅಳವಡಿಸಿರುವ ಫ್ಲೆಕ್ಸ್ ಗಳಲ್ಲಿ ಮಹಾತ್ಮಗಾಂಧೀಜಿ ಭಾವಚಿತ್ರ ನಾಪತ್ತೆಯಾಗಿದೆ ಎಂದು ಸುದ್ದಿ ಮಾಡಿರುವ ಪತ್ರಿಕೆಗಳು ಚಿಕ್ಕಮಗಳೂರು ನಗರವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದರೆ ಯಾವ ಯಾವ ಬೋರ್ಡ್‌ಗಳಲ್ಲಿ ಯಾವ ಯಾವ ಭಾವಚಿತ್ರಗಳಿವೆ ಎಂಬುದು ತಿಳಿಯುತ್ತದೆ, ನೈಜತೆಯನ್ನು ಮರೆಮಾಚುವುದು ಸರಿಯಲ್ಲ - ವರಸಿದ್ಧಿ ವೇಣುಗೋಪಾಲ್, ನಗರಸಭಾ ಅಧ್ಯಕ್ಷರು, ಚಿಕ್ಕಮಗಳೂರು

ವಿನಾಯಕ ದಾಮೋದರ ಸಾವರ್ಕರ್ ರವರು ಸ್ವಾತಂತ್ರ ಹೋರಾಟದ ಸಮಯದಲ್ಲಿ ಹೋರಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಕೇವಲ ಒಬ್ಬರಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಸುಳ್ಳು. ಇದಕ್ಕಾಗಿ ಕರ್ನಾಟಕ ರಾಜ್ಯದ ಮತ್ತು ದೇಶದ ವಿವಿಧೆಡೆಯಲ್ಲಿ ಸಾವಿರಾರು ಜನರ ಬಲಿದಾನವಾಗಿದೆ. ಆದ್ದರಿಂದ ಈ ಎಲ್ಲಾ ಅಂಶವನ್ನು ಪರಿಗಣಿಸಿ ಹೇಳಿಕೆಯನ್ನು ನೀಡಬೇಕು ಮತ್ತು ಪತ್ರಿಕೆಯಲ್ಲಿ ಬರೆಯುವಾಗ ಎಚ್ಚರಿಕೆಯಿಂದ ಬರೆಯುವುದು ಸೂಕ್ತ ತಪ್ಪು ಸಂದೇಶ ಜನರಿಗೆ ಬರುವಂತೆ ಮುದ್ರಿಸಿರುವ ಮಾಹಿತಿಯು ಸತ್ಯಕ್ಕೆ ದೂರವಾಗಿದೆ ಎಂಬ ಅಂಶವನ್ನು ಮತ್ತೊಮ್ಮೆ ಈ ಮೂಲಕ ಸಾರ್ವಜನಿಕರ ಗಮನಕ್ಕೆ ತರುತ್ತಿರುವುದಾಗಿ ಅವರು ತಿಳಿಸಿದ್ದಾರೆ.