ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ರೈತರ ನಿದ್ದೆಗೆಡಿಸಿದ್ದ ಕಾಡಾನೆಯನ್ನು ಹಲವು ದಿನಗಳ ಪ್ರಯತ್ನದಿಂದ ಹನಿ ಟ್ರ್ಯಾಪ್ ನ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೆರೆ ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪ ಎಲೆಮಡಿಲು ಗ್ರಾಮದಲ್ಲಿ ಆನೆ ಸೆರೆಸಿಕ್ಕಿದೆ. ಕಳೆದ ಆರು ದಿನಗಳಿಂದ ನಿರಂತರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ರೈತರ ಬೆಳೆಯನ್ನು ಆನೆ ದಾಳಿಯಿಂದ ರಕ್ಷಣೆ ಮಾಡುವ ಸಲುವಾಗಿ ಹಾವೇರಿ ಟಸ್ಕರ್ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಐದು ಸಾಕಾನೆಗಳು 40 ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಪುಂಡಾನೆಯನ್ನು ಮಾತ್ರ ಹಿಡಿಯಲು ಸಾಧ್ಯವಾಗಿರಲಿಲ್ಲ.
ಹಗಲಿನ ವೇಳೆಯಲ್ಲಿ ದಾಂಧಲೆ ನಡೆಸುವ ಈ ಆನೆಯು ಸಂಜೆಯ ವೇಳೆಯಲ್ಲಿ ಪ್ರಪಾತ ವಿರುವ ಸ್ಥಳಕ್ಕೆ ತೆರಳುತ್ತಿತ್ತು. ಪ್ರಪಾತದ ಬಳಿಗೆ ತೆರಳಿದಾಗ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿ ಕಂಡುಬಂದಿದ್ದರಿಂದ ಈ ವೇಳೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿತ್ತು. ಕಾಡಾನೆಯನ್ನು ಟ್ರ್ಯಾಕ್ ಗೆ ತರುವ ಸಲುವಾಗಿ ಸಾಕು ಹೆಣ್ಣಾನೆಗಳು ಎಷ್ಟೇ ಪ್ರಯತ್ನಿಸದರೂ ಬಲೆಗೆ ಬೀಳದೇ ಇದ್ದ ಗಜರಾಜ ಇಂದು ಮೋಹಿನಿ ಎಂಬ ಆನೆಯ ಪ್ರೇಮಪಾಶಕ್ಕೆ ಸಿಲುಕಿ ಖೆಡ್ಡಾಕ್ಕೆ ಬಿದ್ದಿದೆ.
ಕಳೆದ ನಾಲ್ಕೈದು ತಿಂಗಳುಗಳಿಂದ ಆನೆಯ ಉಪಟಳಕ್ಕೆ ಬೇಸತ್ತು ಹೋಗಿದ್ದ ಜಯಪುರ, ಹೇರೂರು, ಎಲೆಮಡಿಲು ಸೇರಿದಂತೆ ಸುತ್ತಮುತ್ತಲಿನ ಭಾಗಗಳ ಗ್ರಾಮಸ್ಥರು ಆನೆ ಸೆರೆಯಾದದ್ದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಹೊಲ ಗದ್ದೆಗಳಲ್ಲಿ ಘೀಳಿಟ್ಟು ಅಡಿಕೆ, ಕಾಫಿಯನ್ನು ನಾಶಮಾಡಿದ್ದ ಪುಂಡಾನೆಯು ಖೆಡ್ಡಾಕ್ಕೆ ಬಿದ್ದಿರುವುದು ಈ ಭಾಗದ ಕೃಷಿಕರು ಆತಂಕಮುಕ್ತರಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ರೀತಿಯಲ್ಲಿ ವಾತಾವರಣವನ್ನು ನಿರ್ಮಾಣ ಮಾಡಿದೆ.






0 Comments